ಬೆಂಗಳೂರು
ಸೇವೆಯಿಂದ ಅಮಾನತುಗೊಳಿಸಲಾಗಿರುವ ವಿಧಾನಸಭೆ ಕಾರ್ಯದರ್ಶಿ ಎಸ್.ಮೂರ್ತಿ ಅವರನ್ನು ಮೂರು ವಾರದೊಳಗೆ ಸೇವೆಗೆ ಮರು ನೇಮಕ ಮಾಡಬೇಕೆಂದು ರಾಜ್ಯ ಹೈಕೋರ್ಟ್ ತೀರ್ಪು ನೀಡಿದ್ದರೂ ಅದನ್ನು ಜಾರಿಗೆ ತರದೆ ಸರ್ಕಾರ ದಲಿತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ರಾಜ್ಯ ಸರ್ಕಾರಿ ಎಸ್.ಟಿ/ಎಸ್.ಟಿ ನೌಕರರ ಒಕ್ಕೂಟ ಆರೋಪಿಸಿದೆ.
ರಾಜ್ಯ ಹೈಕೋರ್ಟ್ನ ಏಕ ಸದಸ್ಯ ಪೀಠ ತೀರ್ಪು ನೀಡಿ ಹದಿನೆಂಟು ತಿಂಗಳು ಕಳೆದಿದ್ದರೂ ಮೂರ್ತಿ ಅವರನ್ನು ಸೇವೆಗೆ ಮರು ನೇಮಕ ಮಾಡದಿರುವುದು ದಲಿತ ವಿರೋಧಿ ನೀತಿಗೆ ಹಿಡಿದ ಕನ್ನಡಿಯಾಗಿದೆ ಎಂದು ಒಕ್ಕೂಟ ಆರೋಪಿಸಿದೆ .ಕಳೆದ 2018 ರಲ್ಲಿ ವಿಧಾನಸಭೆ ಸ್ಪೀಕರ್ ಆಗಿದ್ದ ರಮೇಶ್ ಕುಮಾರ್ ಅವರು ಸ್ವಜಾತಿ ಪ್ರೇಮ ಮೆರೆಯಲು ವಿಶಾಲಾಕ್ಷಿ ಅವರನ್ನು ಹುದ್ದೆಗೆ ನೇಮಕ ಮಾಡಿ ದಲಿತರಿಗೆ ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಬೆಳಗಾವಿ ಅಧಿವೇಶನದ ಲೆಕ್ಕಚಾರಗಳ ಬಗ್ಗೆ ಆಗ ಸಭಾಧ್ಯಕ್ಷರಾಗಿದ್ದ ಕೆ.ಬಿ.ಕೋಳಿವಾಡ ಅವರಿಗೆ ಸರಿಯಾದ ಸಲಹೆ ಮಾರ್ಗದರ್ಶನ ಮಾಡದೇ ಮೂರ್ತಿ ಅವರು ಗಂಭೀರ ಕರ್ತವ್ಯಲೋಪ ಮಾಡಿದ್ದಾರೆ ಎಂಬ ಗುರುತರ ಆರೋಪ ಹೊರಿಸಲಾಗಿದೆ.ಸರ್ಕಾರಿ ನೌಕರರ ಅಮಾನತು ಅವಧಿ ಆರು ತಿಂಗಳು ಮಾತ್ರ. ಸೇವಾ ನಿಯಮಗಳ ಮತ್ತು ನ್ಯಾಯಾಲಯದ ಆದೇಶಗಳು ಸ್ಪಷ್ಟವಾಗಿದ್ದರೂ ಸರ್ಕಾರ ನ್ಯಾಯಾಲಯದ ಆದೇಶವನ್ನು ಪಾಲನೆ ಮಾಡದೇ ದಲಿತ ವಿರೋಧಿ ನೀತಿ ಅನುಸರಿಸುತ್ತಿರುವುದರ ವಿರುದ್ಧ ಒಕ್ಕೂಟ ರಾಜ್ಯಾದ್ಯಂತ ಹೋರಾಟ ನಡೆಸಲಿದೆ.
ರಮೇಶ್ ಕುಮಾರ್ ಮತ್ತು ಹಾಲಿ ವಿಶೇಷ ಮಂಡಳಿಯ ಕೆಲ ಸದಸ್ಯರ ಈ ಸ್ವಜನ ಪಕ್ಷಪಾತ ಮತ್ತು ದಲಿತ ವಿರೋಧಿ ನೀತಿ ಕ್ರಮವನ್ನು ಒಕ್ಕೂಟದ ಅಧ್ಯಕ್ಷ ಕೆ.ದಾಸ್ ಪ್ರಕಾಶ್ ತೀವ್ರವಾಗಿ ಖಂಡಿಸಿದ್ದು ಮುಂಬರುವ ದಿನಗಳಲ್ಲಿ ಮುಖ್ಯಮಂತ್ರಿ, ಕಾನೂನು ಸಚಿವರು ಮತ್ತು ಸಭಾಧ್ಯಕ್ಷರ ಮನೆ ಮುಂದೆ ಬೃಹತ್ ಪ್ರತಿಭಟನೆ ನಡೆಸಲಿದೆ.ಸರ್ಕಾರದ ಎಲ್ಲ ನಿಗಮ-ಮಂಡಳಿಗಳಲ್ಲಿ ಖಾಲಿ ಇರುವ ಬ್ಯಾಕ್ಲಾಗ್ ಹುದ್ದೆಗಳನ್ನು ಭರ್ತಿ ಮಾಡದೆ ಇರುವುದು ಸಹ ಸರ್ಕಾರದ ದಲಿತ ವಿರೋಧಿ ನೀತಿಯಾಗಿದೆ. ಏಕ ಸದಸ್ಯ ಪೀಠ ನೀಡಿದ್ದ ತೀರ್ಪಿನ ವಿರುದ್ಧ ಮುಖ್ಯಮಂತ್ರಿಗಳು ಮತ್ತು ಸಭಾಧ್ಯಕ್ಷರು ಹೈಕೋರ್ಟಿನ ದ್ವಿ ಸದಸ್ಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿರುವುದನ್ನು ನೋಡಿದರೆ ಸರ್ಕಾರದ ನೀತಿ, ಧೋರಣೆ ಸ್ಪಷ್ಟವಾಗಲಿದೆ ಎಂದು ಅಧ್ಯಕ್ಷ ಕೆ.ದಾಸ್ ಪ್ರಕಾಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








