ಭಾರತವನ್ನು ಸರ್ಕಾರ ಧರ್ಮಾಧಾರಿತ ದೇಶವನ್ನಾಗಿಸಲು ಹೊರಟಿದೆ

ತುಮಕೂರು

    ದೇಶದ ಸ್ವಾತಂತ್ರ್ಯಕ್ಕಾಗಿ ಯಾರು ಹೋರಾಟ ಮಾಡಿಲ್ಲವೋ ಅವರು ಈಗ ಆಡಳಿತ ನಡೆಸುತ್ತುದ್ದಾರೆ. ದೇಶಕ್ಕೆ ಸ್ವತಂತ್ರ್ಯ ಬಂದ ಇತಿಹಾಸವನ್ನು ಮೊದಲು ತಿಳಿದುಕೊಳ್ಳಬೇಕು. ದೇಶಕ್ಕೆ ಸ್ವಾತಂತ್ರ್ಯ ಬಂದಿದ್ದು ಎಲ್ಲಾ ಧರ್ಮದವರ ಹೋರಾಟದ ಫಲ. ಅದರಲ್ಲಿ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಸೇರಿದಂತೆ ಎಲ್ಲಾ ಧರ್ಮಗಳ ಪಾಲಿದೆ.

    ಅದರಲ್ಲೂ ಕಾರ್ಮಿಕ ಪಾತ್ರ ಬಹಳ ದೊಡ್ಡದು. ಈ ಕಾರ್ಮಿಕರಲ್ಲೂ ಮುಸ್ಲಿಂ ಹೋರಾಟಗಾರಿದ್ದಾರೆ. ದೇಶಕ್ಕೆ ಮುಸಲ್ಮಾನರ ಕೊಡುಗೆ ಬಹಳಷ್ಟಿದೆ. ಆದರೆ ಇಂದಿನ ಸರ್ಕಾರ ಜಾತ್ಯತೀತ ದೇಶವಾದ ಭಾರತವನ್ನು ಧರ್ಮಾಧಾರಿತ ದೇಶವನ್ನಾಗಿಸಲು ಹೊರಟಿದೆ ಎಂದು ವಕೀಲರಾದ ಕ್ಲಿಪ್ಟನ್ ರೊಜಾರಿಯಾ ವಿಷಾದ ವ್ಯಕ್ತಪಡಿಸಿದರು.

    ನಗರದ ಮಹಿಳಾ ಸಮಾಜ ಭವನದಲ್ಲಿ ನಡೆದ ಆರ್ಥಿಕ ಬಿಕ್ಕಟ್ಟು, ನಿರುದ್ಯೋಗ, ಪೌರತ್ವ ಕಾಯ್ದೆ, ಎನ್‍ಆರ್‍ಸಿ, ಎನ್‍ಪಿಆರ್ ಕುರಿತು ಜನ ಜಾಗೃತಿ ಕಾರ್ಯಾಗಾರದಲ್ಲಿ ಮಾತನಾಡುತ್ತಾ, ನಮ್ಮ ಜ್ಯಾತ್ಯಾತೀತ ದೇಶ ಎಂದು ಸಂವಿಧಾನವೇ ಹೇಳುತ್ತದೆ. ಆದರೆ ನಮ್ಮ ಸರ್ಕಾರ ಅದನ್ನು ತಿರುಚಿ ಒಂದು ಹೊಸ ಇತಿಹಾಸ ಸೃಷ್ಟಿಸಲು ನಿಂತಿದೆ. ಭಾರತದಿಂದ ಪಾಕಿಸ್ತಾನಕ್ಕೆ ಹೋಗಿ ಮತ್ತೆ ವಾಪಸ್ ಬಂದವರಿಗೆ ಭಾರತೀಯ ಪೌರತ್ವವನ್ನು ಉದಾಹರಣೆಗಳು ಸಂವಿಧಾನದಲ್ಲಿವೆ. ಇಂದು ಧರ್ಮದ ವಿಚಾರದಲ್ಲಿ ದೇಶವನ್ನು ವಿಂಗಡಣೆ ಮಾಡಲು ಹೊರಟಿದೆ ಎಂದರು.

     ಸಿಎಎ, ಎನ್‍ಪಿಆರ್, ಎನ್‍ಆರ್‍ಸಿಗಳು ಸಂವಿಧಾನ ವಿರೋಧ, ಜನವಿರೋಧ, ದೇಶದ ವಿರೋಧವಾಗಿವೆ. ಇವುಗಳ ವಿರುದ್ಧ ದಿನವೂ ಹೋರಾಟಗಳು ನಡೆಯುತ್ತಿವೆ. ಪ್ರತಿ ದಿನ ಎರಡು ಗಂಟೆಗೊಬ್ಬ ರೈತ, ಒಂದು ಗಂಟೆಗೊಬ್ಬ ನಿರುದ್ಯೋಗಿಗಳ ಆತ್ಮಹತ್ಯೆ ನಮ್ಮ ದೇಶದಲ್ಲಿ ಆಗುತ್ತಿದೆ. ಇದಕ್ಕೆ ಸರ್ಕಾರದ ಉತ್ತರವೇನು?. ಇಂದು ರಾಜಕಾರಣಿಗಳು ದ್ವೇಷದ, ಬಂಡವಾಳಶಾಹಿಯ ಬಗ್ಗೆ ಮಾತನಾಡುತ್ತಾರೇ ಹೊರತು ಜನರ ಬದುಕಿನ ಬಗ್ಗೆ ಯಾರೂ ಮಾತಾಡುತ್ತಿಲ್ಲ ಎಂದರು.

    ಪ್ರಗತಿಪರ ಚಿಂತಕ ಕೆ.ದೊರೈರಾಜು ಮಾತನಾಡಿ, ಈ ಕಾರ್ಯಾಗಾರ ಇಂದು ಬಹಳ ಅನಿವಾರ್ಯ ಮತ್ತು ಅಗತ್ಯವಾಗಿದೆ. ದೇಶ ಹಿಂದೆಂದೂ ಕಂಡರಿಯದಂತಹ ಆರ್ಥಿಕ ಕುಸಿತಕ್ಕೆ ಒಳಗಾಗಿದೆ. ಕಾರ್ಮಿಕರನ್ನು ಮನೆಗೆ ಕಳುಹಿಸಲಾಗುತ್ತಿದ್ದು, ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ದೇಶದ ವಾಸ್ತವ ಸ್ಥಿತಿ ಆತಂಕಕ್ಕೊಳಗಾಗಿದೆ. ಉತ್ಪಾದನಾ ಕೇಂದ್ರಗಳು ಮುಚ್ಚುತ್ತಿವೆ. ಯುವಕರು ವಿದ್ಯಾವಂತರು ಆರ್ಥಿಕ ಕುಸಿತದಿಂದ ನರಳುವಂತಾಗಿದೆ. ಆದರೆ ಯಾರೂ ಇದರ ಬಗ್ಗೆ ಚಕಾರವೆತ್ತುತ್ತಿಲ್ಲ ಕೇವಲ ಜಾತಿ, ಧರ್ಮ, ಅಧಿಕಾರದ ಬಗ್ಗೆ ಮಾತನಾಡುತ್ತಾರೆ. ಭಾರತದ ಸ್ಥಿತಿ ಮಾತ್ರ ಅತ್ತ ದರಿ ಇತ್ತ ಹುಲಿ ಎನ್ನುವಂತಾಗಿದೆ ಎಂದರು.

    ಮಾನವೀಯ ಸಮಾಜ ಇಂದು ಕೌರ್ಯದ ಸಮಾಜವಾಗುತ್ತಿದೆ. ಇದಕ್ಕೆ ಕಾರಣ ಆರ್ಥಿಕ ದುಸ್ಥಿತಿ, ನಿರುದ್ಯೋಗ ಸಮಸ್ಯೆ ಹಾಗೂ ರೈತರ ಸಮಸ್ಯೆಗಳನ್ನು ಮುಚ್ಚಿ ಹಾಕಲು ಜಾತಿ ಧರ್ಮದ ಸಂಘರ್ಷವನ್ನು ತಂದು ಪೌರತ್ವ ತಿದ್ದುಪಡಿ ಎನ್ನುವ ಅಸ್ತ್ರವನ್ನು ಬಿಟ್ಟಿದ್ದಾರೆ. ಸಂವಿಧಾನವನ್ನು ಲೆಕ್ಕಕ್ಕೆ ಇಟ್ಟುಕೊಳ್ಳದೆ ನಾವು ಹೇಳಿದ್ದೇ ಸತ್ಯ ಎಂಬ ದಬ್ಬಾಳಿಕೆ ನಡೆಯುತ್ತಿದೆ. ದೇಶದ ರಾಜಕೀಯ ಪಕ್ಷಗಳಿಗೆ ಯಾವ ತತ್ವ ನೀತಿಗಳಿಲ್ಲದಂತಾಗಿದೆ. ಮನುಷ್ಯ ಸಮಾಜಕ್ಕೆ ರಾಜಕೀಯ ಪಕ್ಷಗಳು ಅಡಚಣೆಯನ್ನು ಉಂಟು ಮಾಡುತ್ತಿರುವುದನ್ನು ನಾವು ಅರ್ಥ ಮಾಡಿಕೊಳ್ಳಬೇಕು ಎಂದರು.

   ಲೇಖಕ ನಾಗಭೂಷಣ್ ಬಗ್ಗನಡು ಮಾತನಾಡಿ, ಪ್ರಭುತ್ವ, ಧರ್ಮ ಬಂಡವಾಳ ಮೂರು ಒಂದು ಕಡೆ ಇದ್ದರೆ ಅಲ್ಲಿ ಪ್ರಜಾಪ್ರಭುತ್ವ ಉಳಿಯಲು ಸಾಧ್ಯವಿಲ್ಲ. ಭಾರತದ ಸ್ಥಿತಿ ಹೀಗಾಗಿದೆ. ಪ್ರಭುತ್ವ ಬಂಡವಾಳಶಾಹಿ ಧರ್ಮದ ಪರವಾಗಿ ನಿಲ್ಲುತ್ತಿದೆ. ಪೌರತ್ವ ತಿದ್ದುಪಡಿಯು ಕೇವಲ ಒಂದು ಜಾತಿಯ ಒಂದು ಧರ್ಮದ ವಿರೋಧಿಯಲ್ಲ. ಎಲ್ಲಾ ಜಾತಿ ಧರ್ಮದ ವಿರೋಧಿಯೇ ಎಂದರು.

   ಕಾರ್ಯಾಗಾರದಲ್ಲಿ ಕನ್ಸರ್ಡ್ ಸಿಟಿಜನ್ ಆಫ್ ಇಂಡಿಯಾದ ರಾಜ್ಯ ಸಮಿತಿ ಸದಸ್ಯ ಎಸ್. ಎನ್ ಸ್ವಾಮಿ, ರೈತ-ಕೃಷಿ ಕಾರ್ಮಿಕರ ಸಂಘಟನೆ ರಾಜ್ಯ ಉಪಾಧ್ಯಕ್ಷ ಎಂ. ಶಶಿಧರ್, ಹಸಿರು ಸೇನೆ ಅಧ್ಯಕ್ಷ ಟಿ.ಎಸ್ ದೇವರಾಜು, ಶ್ರೀಕಾಂತ್, ರಿಯಾಜ್ ಅಹಮ್ಮದ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ  

Recent Articles

spot_img

Related Stories

Share via
Copy link
Powered by Social Snap