ಚಿಕ್ಕಬಳ್ಳಾಪುರ
ರಾಜ್ಯ ಸರ್ಕಾರ ಕೊವಿಡ್-19 ನಿಯಂತ್ರಣ ಮಾಡುವಲ್ಲಿ ಭಾರೀ ತಪ್ಪುಗಳನ್ನು ಮಾಡುತ್ತಿದ್ದು, ಅನಗತ್ಯವಾಗಿ ಖರ್ಚುಮಾಡುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಟೀಕಿಸಿದ್ದಾರೆ.
ದೊಡ್ಡಬಳ್ಳಾಪುರದ ಕೈಗಾರಿಕಾ ಪ್ರದೇಶದಲ್ಲಿ ಕಡಿಮೆ ವೆಚ್ಚದಲ್ಲಿ ಖಾಸಗಿ ಕಂಪೆನಿಗಳು ಸಿದ್ದಗೊಳಿಸಿರುವ ಮಂಚ ಹಾಗೂ ಹಾಸಿಗೆಗಳನ್ನು ಖರೀದಿಸಲು ಆಗಮಿಸಿದ್ದ ಅವರು ಸುದ್ಧಿಗಾರರೊಂದಿಗೆ ಮಾತನಾಡಿ, ಸರ್ಕಾರ ಸೂಕ್ತ ನಿರ್ಧಾರಗಳನ್ನು ಕೈಗೊಳ್ಳದೇ ಅನಗತ್ಯವಾಗಿ ಖರ್ಚ ಮಾಡುತ್ತಿದೆ. ಸೋಂಕಿತರ ಚಿಕಿತ್ಸೆಗಾಗಿ ಖರ್ಚು ಮಾಡಲಾಗಿರುವ ಹಣದ ಬಗ್ಗೆ ರಾಜ್ಯ ಸರ್ಕಾರ ಸಮಗ್ರ ಮಾಹಿತಿ ನೀಡಬೇಕು ಎಂದು ಒತ್ತಾಯಿಸಿದರು.
ಕೊರೋನಾ ಸೋಂಕು ನಿಯಂತ್ರಣ ಉದ್ದೇಶದಿಂದ ರಾಜ್ಯ ಸರ್ಕಾರದ ಜತೆ ಕಾಂಗ್ರೆಸ್ ಪಕ್ಷ ಕೈ ಜೋಡಿಸಿ ಕಾರ್ಯನಿರ್ವಹಿಸಲಿದೆ. ಕಲ್ಬುರ್ಗಿ ಹಾಗೂ ರಾಯಚೂರು ಜಿಲ್ಲೆಗಳ ಕಲ್ಯಾಣ ಮಂಟಪ, ಸಮುದಾಯ ಭವನಗಳಿಗೆ ಕೊರೋನಾ ಸೋಂಕಿತರಿಗಾಗಿ ಕಾಂಗ್ರೆಸ್ ಶಾಸಕ ಪ್ರಿಯಾಂಕ ಖರ್ಗೆ ಅವರು ಉಚಿತವಾಗಿ 550 ಹಾಸಿಗೆಗಳನ್ನು ನೀಡುತ್ತಿದ್ದು, ಕೆಪಿಸಿಸಿಯಿಂದ ಇದಕ್ಕೆ ಚಾಲನೆ ನೀಡಲಾಗುತ್ತಿದೆ ಎಂದರು.
ಸರ್ಕಾರ 800 ರೂಪಾಯಿ ದರದಲ್ಲಿ ಮಂಚ, ಹಾಸಿಗೆಗಳನ್ನು ಬಾಡಿಗೆಗೆ ಪಡೆಯುತ್ತಿದೆ. ಇದರ ಬದಲು ಖರೀದಿ ಮಾಡುವುದೇ ಉತ್ತಮ. ಸರ್ಕಾರ ತೆಲಂಗಾಣ ಹಾಗೂ ದೆಹಲಿ ಮಾದರಿಯಲ್ಲಿ ಮಂಚ ಹಾಗೂ ಹಾಸಿಗೆಗಳನ್ನು ಖರೀದಿಸಬೇಕು ಎಂದು ಸಲಹೆ ನೀಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
