ಸರ್ಕಾರದ ನಿರ್ಲಕ್ಷ್ಯೆಕ್ಕೆ ಯಡಿಯೂರಪ್ಪ ಬೇಸರ

ಚಳ್ಳಕೆರೆ

        ಚಳ್ಳಕೆರೆ ತಾಲ್ಲೂಕಿನಾದ್ಯಂತ ಬರಗಾಲ ತಾಂಡವಾಡುತ್ತಿದ್ದರೂ ಸಹ ಬಡ ಜನರಿಗೆ ನೆರವು ನೀಡುವ ದೃಷ್ಠಿಯಲ್ಲಿ ಸರ್ಕಾರ ಯಾವುದೇ ಕಾರ್ಯಕ್ರಮಗಳನ್ನು ರೂಪಿಸಿಲ್ಲ, ತಾಲ್ಲೂಕಿನ ಬರದ ಸ್ಥಿತಿಯನ್ನು ಎದುರಿಸಲು ಮುಂದಾಗಿಲ್ಲ, ಸರ್ಕಾರ ಬರಗಾಲ ನಿರ್ವಹಣೆಯಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

        ಅವರು, ಭಾನುವಾರ ಹಿರಿಯೂರು ತಾಲ್ಲೂಕಿನ ಧರ್ಮಪುರ, ಖಂಡೇನಹಳ್ಳಿ, ಹೊಸಕೆರೆ ಮುಂತಾದ ಗ್ರಾಮಗಳಲ್ಲಿ ಬರ ವೀಕ್ಷಿಸಿ ಚಳ್ಳಕೆರೆ ತಾಲ್ಲೂಕಿನ ಗಡಿಭಾಗದಲ್ಲಿರುವ ದೊಡ್ಡ ಚೆಲ್ಲೂರಿನ ರಂಗಸ್ವಾಮಿ ಎಂಬುವವರ ಒಣಗಿದ ಅಡಿಕೆ, ತೆಂಗಿನ ತೋಟ, ಸೂರನಹಳ್ಳಿ ಬಳಿ ಇರುವ ಬತ್ತಿದ ವೇದಾವತಿ ನದಿಯನ್ನು ವೀಕ್ಷಿಸಿ ನಂತರ ಅಲ್ಲಾಪುರದ ಶಾಸ್ತ್ರಿ ವೀರಣ್ಣ ಎಂಬುವವರ ಜಮೀನಲ್ಲಿ ಸಾರ್ವಜನಿಕರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

         ಈಗಾಗಲೇ ರಾಜ್ಯದಾದ್ಯಂತ ಭಾರತೀಯ ಜನತಾ ಪಕ್ಷ ಬರಗಾಲದ ಅಧ್ಯಯವನ್ನು ನಡೆಸುತ್ತಿದ್ದು, ವಿವಿಧ ತಂಡಗಳು ಪ್ರವಾಸದಲ್ಲಿದೆ. ನಾನು ಈಗಾಗಲೇ 6 ಪ್ರಮುಖ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಬರ ಅಧ್ಯಯನ ನಡೆಸಿದ್ದೇನೆ. ಇಂತಹ ಕಿತ್ತು ತಿನ್ನುವ ಬರದಲ್ಲೂ ಸಹ ಆಡಳಿತರೂಢ ಕಾಂಗ್ರೆಸ್ ಪಕ್ಷ ಬಡ ಜನತೆಯ ಕಣ್ಣೀರನ್ನು ಹೊರೆಸಲು ಪ್ರಯತ್ನಸದೆ ಅಧಿಕಾರವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಲಾಭಿ ನಡೆಸುತ್ತಿದೆ ಎಂದರು. ವಿಶೇಷವಾಗಿ ಈ ತಾಲ್ಲೂಕಿನ ಬರಗಾಲವನ್ನು ಕಂಡ ನನಗೆ ಅತೀವ ನೋವಾಗಿದೆ. ಪ್ರಾಯಶಹ ಯಾವುದೇ ಚುನಾಯಿತ ಜನಪ್ರತಿನಿಧಿ ತಾಲ್ಲೂಕು ಮಟ್ಟದ ಅಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡದೆ, ಜನರ ಸಮಸ್ಯೆಗೆ ಸ್ಪಂದಿಸದೆ ನಿರ್ಲಕ್ಷ್ಯೆ ತೋರಿರುವುದು ಎದ್ದು ಕಾಣುತ್ತದೆ ಎಂದರು.

        ಇದೇ ಸಂದರ್ಭದಲ್ಲಿ ದೊಡ್ಡ ಚೆಲ್ಲೂರಿನ ರೈತ ಹನುಮಂತಪ್ಪ ಸಾಲದ ಹಿನ್ನೆಲೆಯಲ್ಲಿ ವಿಷ ಸೇವಿಸಿ ಡಿ.31ರಂದು ತನ್ನ ಜಮೀನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಮೃತನ ಪತ್ನಿ ಗೌರಮ್ಮಗೆ ಯಡಿಯೂರಪ್ಪ ವೈಯಕ್ತಿಕವಾಗಿ 25 ಸಾವಿರ ನಗದು ಹಣವನ್ನು ನೀಡಿ ಕುಟುಂಬ ವರ್ಗಕ್ಕೆ ಸಾಂತ್ವನ ತಿಳಿಸಿದರು. ಪರಶುರಾಮಪುರ ತಾಲ್ಲೂಕು ಕೇಂದ್ರವನ್ನಾಗಿ ಮಾಡಬೇಕೆಂಬುವ ಇಲ್ಲಿನ ಸಾರ್ವಜನಿಕರ ಬೇಡಿಕೆಯನ್ನು ಪ್ರಸ್ತಾಪಿಸಿದ ಅವರು, ಪರಶುರಾಮಪುರ ತಾಲ್ಲೂಕು ಕೇಂದ್ರವನ್ನಾಗಿಸುವ ನಿಟ್ಟಿನಲ್ಲಿ ಎಲ್ಲಾ ಆರ್ಹತೆಯನ್ನು ಹೊಂದಿದ್ದು, ಈ ಬಗ್ಗೆ ಮುಂದಿನ ದಿನಗಳಲ್ಲಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ವೆಂಕಟೇಶ್ ಹೋಬಳಿಯ ಕೆರೆಗಳಿಗೆ ವಿವಿ ಸಾಗರ ನೀರು ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಗೋಶಾಲೆ ಪ್ರಾರಂಭಿಸುವಂತೆ ಮನವಿ ಬಗ್ಗೆ ಪರಶೀಲನೆ ನಡೆಸುವ ಭರವಸೆ ನೀಡಿದರು.

       ತಾಲ್ಲೂಕಿನ ದೊಡ್ಡ ಚೆಲ್ಲೂರು ಗ್ರಾಮದ ಒಣ ತೋಟ ವೀಕ್ಷಣೆ ಸಂದರ್ಭದಲ್ಲಿ ತಹಶೀಲ್ದಾರ್ ಎಂ.ಮಲ್ಲಿಕಾರ್ಜುನ, ಕೃಷಿ ಅಧಿಕಾರಿ ಎನ್.ಮಾರುತಿ, ಪಶುವೈದ್ಯ ಇಲಾಖೆಯ ಹನುಮಪ್ಪ ಮುಂತಾದ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.

         ಬರಗಾಲದ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ ಉದ್ಯೋಗ ಖಾತರಿ ಯೋಜನೆ ಕಾಮಗಾರಿ ವ್ಯವಸ್ಥಿತವಾಗಿ ನಡೆಯುತ್ತಿಲ್ಲವೆಂಬ ಗ್ರಾಮಸ್ಥರಿಂದ ಕೇಳಿ ಬಂದಿದೆ. ಕೂಲಿ ಹಣ ನೀಡುವಲ್ಲೂ ಸಹ ವಿಳಂಬವಾಗುತ್ತಿದೆ. ಆದರೆ, ಬರಗಾಲದ ಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಯಾವುದೇ ಚಿಂತನೆ ನಡೆದಿಲ್ಲ. ಬಹುತೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯೂ ಸಹ ಉಲ್ಬಣವಾಗುತ್ತಿದೆ. ಜನರ ನೋವಿಗೆ ಸ್ಪಂದಿಸುವ ಕಾರ್ಯಕ್ಕೆ ತಾಲ್ಲೂಕು ಆಡಳಿತ ಮುಂದಾಗಬೇಕಿದೆ. ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಕಾರ್ಯ ನಡೆಸುವಲ್ಲಿ ಸರ್ಕಾರ ವಿಫಲವಾಗಿದೆ. ಈ ಬಗ್ಗೆ ಸರ್ಕಾರದ ಗಮನ ಸೆಳೆಯುವುದಾಗಿ ತಿಳಿಸಿದರು. ‘

         ಈ ಸಂದರ್ಭದಲ್ಲಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ಶಾಸಕಿ ಪೂರ್ಣಿಮಾಶ್ರೀನಿವಾಸ್, ಮಾಜಿ ಶಾಸಕ ಜಿ.ಬಸವರಾಜಮಂಡಿಮಠ, ಜಿಲ್ಲಾ ಬಿಜೆಪಿ ಅಧ್ಯಕ್ಷ ಕೆ.ಎಸ್.ನವೀನ್, ಜಿಲ್ಲಾ ಉಪಾಧ್ಯಕ್ಷರಾದ ಬಿ.ಎಸ್.ಶಿವಪುತ್ರಪ್ಪ, ರಾಮದಾಸ್, ಜಯಪಾಲಯ್ಯ, ಪ್ರಧಾನ ಕಾರ್ಯದರ್ಶಿಗಳಾದ ರತ್ನಮ್ಮ, ಮುರಳಿ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಟಿ.ಮಂಜುನಾಥ, ತಾಲ್ಲೂಕ ಮೋರ್ಚಾ ಜಿಲ್ಲಾಧ್ಯಕ್ಷ ಆರ್.ನಾಗೇಶ್, ಸೂರನಹಳ್ಳಿ ವಿಜಯಣ್ಣ, ಮಂಡಲಾಧ್ಯಕ್ಷ ಬಿ.ವಿ.ಸಿರಿಯಣ್ಣ, ರೈತ ಮೋರ್ಚಾ ಅಧ್ಯಕ್ಷ ಕೃಷ್ಣಮೂರ್ತಿ, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಕರೀಕೆರೆ ತಿಪ್ಪೇಸ್ವಾಮಿ, ನಗರ ಘಟಕದ ಅಧ್ಯಕ್ಷ ಜೆಎಂಸಿ ವೀರೇಶ್, ಎ.ವಿಜಯೇಂದ್ರ, ಸಣ್ಣಸೂರಯ್ಯ, ನಗರಸಭಾ ಸದಸ್ಯ ಎಸ್.ಜಯಣ್ಣ, ಪಾಲಮ್ಮ, ಶಿವಮೂರ್ತಿ ಮುಂತಾದವರು ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap