ಸರ್ಕಾರದಿಂದ ಜನರ ಮನೆ ಬಾಗಿಲಿಗೆ ವೃದ್ದಾಪ್ಯ ವೇತನ

ಬೆಂಗಳೂರು

    ರಾಜ್ಯಾದ್ಯಂತ ಇನ್ನು ಮುಂದೆ ಸರ್ಕಾರವೇ ವೃದ್ಧಾಪ್ಯ ವೇತನವನ್ನು ಜನರ ಮನೆ ಬಾಗಿಲಿಗೆ ತಲುಪಿಸಲು ಸರ್ಕಾರ ನಿರ್ಧರಿಸಿದೆ.ಇಂದಿಲ್ಲಿ ಜಿಲ್ಲಾಧಿಕಾರಿಗಳ ಜತೆ ವಿಡಿಯೋ ಕಾನ್ಪರೆನ್ಸ್ ನಡೆಸಿದ ನಂತರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ್ ಈ ವಿಷಯ ತಿಳಿಸಿದರಲ್ಲದೆ,ಇನ್ನು ಮುಂದೆ ಅರವತ್ತು ವರ್ಷ ದಾಟಿದವರು ವೃದ್ಧಾಪ್ಯ ವೇತನಕ್ಕಾಗಿ ಅರ್ಜಿ ಹಾಕಬೇಕಿಲ್ಲ.

    ಬದಲಿಗೆ ಸರ್ಕಾರವೇ ಅವರ ಮನೆ ಬಾಗಿಲಿಗೆ ವೃದ್ಧಾಪ್ಯ ವೇತನವನ್ನು ನೀಡಲಿದೆ ಎಂದರು.ಆಧಾರ್ ಕಾರ್ಡ್ ಅನ್ನು ಗಣನೆಗೆ ತೆಗೆದುಕೊಂಡು ಯಾರಿಗೆ ಅರವತ್ತು ವರ್ಷ ಭರ್ತಿಯಾಯಿತೋ?ಅವರಿಗೆ ನಾವೇ ಅಂಚೆ ಮೂಲಕ ಪತ್ರ ಕಳಿಸಿ ವೃದ್ಧಾಪ್ಯ ವೇತನ ಪಡೆಯಲು ನೀವು ಅರ್ಹರಾಗಿದ್ದೀರಿ ಎಂದು ಸಂದೇಶ ನೀಡುತ್ತೇವೆ.

   ವೃದ್ಧಾಪ್ಯ ವೇತನ ಪಡೆಯಲು ಇದುವರೆಗೆ ಅರ್ಜಿ ಹಾಕಬೇಕಿತ್ತು.ಆದರೆ ಇನ್ನು ಮುಂದೆ ಅರ್ಜಿ ಹಾಕಿಕೊಳ್ಳುವ ಅಗತ್ಯವೇ ಇಲ್ಲ.ಕಡುಬಡ ಕುಟುಂಬದ ಯಾವುದೇ ವ್ಯಕ್ತಿಗೆ ಅರವತ್ತು ವರ್ಷವಾದ ಕೂಡಲೇ ನಾವೇ ಮುಂದಾಗಿ ಮನೆ ಬಾಗಿಲಿಗೆ ಈ ಸವಲತ್ತನ್ನು ತಲುಪಿಸುತ್ತೇವೆ ಎಂದು ಹೇಳಿದರು.

  ಇನ್ನೊಂದು ವಾರದೊಳಗೆ ಈ ಯೋಜನೆಗೆ ಉಡುಪಿಯಲ್ಲಿ ಚಾಲನೆ ನೀಡಲಾಗುವುದು ಎಂದ ಅವರು,ಸರ್ಕಾರವೇ ವೃದ್ಧರ ಆಸರೆಗೆ ಮನೆ ಬಾಗಿಲು ತಲುಪುವ ಈ ವಿನೂತನ ಯೋಜನೆ ಅಂಚೆ ಇಲಾಖೆಯ ಸಹಕಾರದಿಂದ ಮುನ್ನಡೆಯಲಿದೆ ಎಂದರು.ರಾಜ್ಯದಲ್ಲಿ ಸಂಭವಿಸಿದ ಅತಿವೃಷ್ಟಿಯಿಂದ ಹಾನಿಗೀಡಾದ ಮನೆಗಳನ್ನು ಮುಂದಿನ ಮೂರು ತಿಂಗಳಲ್ಲಿ ದುರಸ್ಥಿಪಡಿಸಬೇಕು.ಹೊಸ ಮನೆಗಳ ನಿರ್ಮಾಣ ಕಾರ್ಯ ಮುಗಿಯಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಲಾಗಿದೆ.

   ಮುಂದಿನ ಹದಿನೆಂಟು ದಿನಗಳಲ್ಲಿ ಈ ಯೋಜನೆಯಡಿ ಶೇಕಡಾ ಐವತ್ತರಷ್ಟು ಮನೆಗಳ ನಿರ್ಮಾಣ ಕಾರ್ಯ ಪೂರ್ಣಗೊಂಡಿ ರಬೇಕು.ಇಲ್ಲದಿದ್ದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ವಿವರಿಸಿದರು.

   ರಾಜ್ಯದ ಜನರ ಸಮಸ್ಯೆ ಕೇಳಲು ಇನ್ನು ಮುಂದೆ ಜಿಲ್ಲಾಧಿಕಾರಿಗಳೇ ಹಳ್ಳಿಗೆ ನಡೆಯಿರಿ ಎಂಬ ಯೋಜನೆಯನ್ನು ಆರಂಭಿಸಲು ನಿರ್ಧರಿಸಲಾಗಿದ್ದು,ಭೂಮಿಯ ಸಮಸ್ಯೆಯಿಂದ ಹಿಡಿದು ಸರ್ಕಾರದ ವಿವಿಧ ಯೋಜನೆಗಳ ಅನುಷ್ಟಾನದ ವಿವರಗಳನ್ನು ಜಿಲ್ಲಾಧಿಕಾರಿಗಳು ಹಳ್ಳಿಗಳಿಗೇ ಹೋಗಿ ಪರಿಹರಿಸಬೇಕು ಎಂಬುದು ಇದರ ಉದ್ದೇಶ.

   ತಿಂಗಳಲ್ಲಿ ಒಂದು ದಿನ ಜಿಲ್ಲಾಧಿಕಾರಿಗಳು ಹಳ್ಳಿಗೆ ಹೋಗಬೇಕು.ಉಪವಿಭಾಗಾಧಿಕಾರಿಗಳು ಎರಡು ದಿನ ಭೇಟಿ ನೀಡಬೇಕು.ತಹಸೀಲ್ದಾರ್‍ಗಳು ತಿಂಗಳಲ್ಲಿ ನಾಲ್ಕು ದಿನ ಹೋಗಿ ಹಳ್ಳಿಗಳ ಸಮಸ್ಯೆಯನ್ನು ಬಗೆಹರಿಸಬೇಕು ಎಂದರು.
ಭೂಮಿಯ ಪಹಣಿ,ಸರ್ಕಾರಿ ಭೂಮಿಯ ಒತ್ತುವರಿ,ಜಾತಿ ಪ್ರಮಾಣ ಪತ್ರ ನೀಡಿಕೆಯಲ್ಲಿ ಆಗುತ್ತಿರುವ ಸಮಸ್ಯೆ ಸೇರಿದಂತೆ ಹಲವು ಸಮಸ್ಯೆಗಳನ್ನು ಅಧಿಕಾರಿಗಳು ಹಳ್ಳಿಗಳಿಗೇ ಹೋಗಿ ಸರಿಪಡಿಸಿಕೊಡಬೇಕು ಎಂದು ಹೇಳಿದರು.

   ಹಾಗೆಯೇ ನಗರ ಹಾಗೂ ಹಳ್ಳಿಗಾಡಿನಲ್ಲಿ ಆಕ್ರಮವಾಗಿ ಕಟ್ಟಿಕೊಂಡ ಮನೆಗಳನ್ನು 94 ಸಿ ಹಾಗೂ 94 ಸಿಸಿ ಅಡಿ ಸಕ್ರಮಗೊಳಿಸಿಕೊಡಬೇಕು.ರಾಜ್ಯದಲ್ಲಿ ಹತ್ತು ಲಕ್ಷ ಮಂದಿಯ ಭೂಮಿಗೆ ಸಂಬಂಧಿಸಿದಂತೆ ಪೌತಿಗಳಾಗಿಲ್ಲ.ಅದನ್ನು ತಕ್ಷಣವೇ ಸರಿಪಡಿಸುವ ಕೆಲಸ ಆರಂಭಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

   ಎಂಟನೆ ಜನಗಣತಿ ಕಾರ್ಯಕ್ರಮ ಏಪ್ರಿಲ್ ತಿಂಗಳಲ್ಲಿ ಆರಂಭವಾಗಲಿದ್ದು ಮೇ 29 ರವರೆಗೆ ನಡೆಯಲಿದೆ ಎಂದು ಇದೇ ಸಂದರ್ಭದಲ್ಲಿ ಹೇಳಿದ ಅವರು,ದೇಶದಲ್ಲೇ ಮೊದಲ ಬಾರಿಗೆ ಕಾಗದ ರಹಿತವಾಗಿ ಈ ಗಣತಿ ಕಾರ್ಯ ನಡೆಯಲಿದೆ.ಇದಕ್ಕಾಗಿ ಮೊಬೈಲ್ ಫೋನುಗಳ ಬಳಕೆಯಾಗಲಿದೆ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap