ಸರ್ಕಾರ ಸುಭದ್ರವಾಗಿದೆ: ಡಿಸಿಎಂ ಸ್ಪಷ್ಟನೆ

ತುಮಕೂರು

       ಶಾಸಕದ್ವಯರಾದ ಆನಂದ್‍ಸಿಂಗ್ ಹಾಗೂ ರಮೇಶ್ ಜಾರಕಿಹೊಳಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ಸತ್ಯವೇ ಆಗಿದ್ದರೆ, ಸದ್ಯದಲ್ಲಿರುವ ಸಂಖ್ಯಾಬಲದಿಂದ ಸರ್ಕಾರಕ್ಕೆ ಯಾವುದೇ ಅಪಾಯವಿಲ್ಲ. ಸರ್ಕಾರ ಸುಭದ್ರವಾಗಿದ್ದು, ಜನರು ಆತಂಕಕ್ಕೊಳ ಗಾಗುವ ಅಗತ್ಯವಿಲ್ಲ ಎಂದು ಉಪಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ|| ಜಿ. ಪರಮೇಶ್ವರ ಅವರು ಸ್ಪಷ್ಟಪಡಿಸಿದರು.

      ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಬೆಳಿಗ್ಗೆ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿ ಮಾತನಾಡಿದ ಅವರು ಆನಂದ್‍ಸಿಂಗ್ ಹಾಗೂ ಜಾರಕಿಹೊಳಿ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಬಗ್ಗೆ ಸುದ್ದಿ ಇದೆ. ಆದರೆ ಇವರಿಬ್ಬರ ರಾಜೀನಾಮೆಯನ್ನು ಸ್ಪೀಕರ್ ಅವರು ಇನ್ನೂ ಸ್ಪಷ್ಟಪಡಿಸಿಲ್ಲ. ಒಂದು ವೇಳೆ ಅವರು ರಾಜೀನಾಮೆ ನೀಡಿರುವುದು ಸತ್ಯವಾಗಿದ್ದರೆ ಯಾವ ಕಾರಣಕ್ಕೆ ರಾಜೀನಾಮೆ ನೀಡಿದ್ದಾರೆಂಬ ಬಗ್ಗೆ ತಮಗೆ ಮಾಹಿತಿಯಿಲ್ಲ. ಇದೇ ಜುಲೈ 12 ರಿಂದ ಅಧಿವೇಶನ ನಡೆಸಲು ಈಗಾಗಲೇ ತೀರ್ಮಾನಿಸಿ ಘೋಷಿಸಲಾಗಿದ್ದು , ರಾಜ್ಯಪಾಲರೂ ಸಹ ಈ ನಿರ್ಣಯಕ್ಕೆ ಅಂಕಿತ ಹಾಕಿರುವುದರಿಂದ ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ ಎಂದು ತಿಳಿಸಿದರು.

       ಜಿಂದಾಲ್ ಕಂಪನಿಗೆ ಭೂಮಿ ಪರಭಾರೆ ಮಾಡುವ ವಿಷಯಕ್ಕೆ ಶಾಸಕ ಆನಂದ್‍ಸಿಂಗ್ ರಾಜೀನಾಮೆ ನೀಡಿದ್ದಾರಾ? ಎಂದು ಪತ್ರಕರ್ತರೊಬ್ಬರ ಪ್ರಶ್ನೆಗೆ ಸ್ಪಂದಿಸಿದ ಪರಮೇಶ್ವರ್ ಅವರು ಜಿಂದಾಲ್‍ಗೆ ಪರಭಾರೆ ಮಾಡಲಾಗಿರುವ ಒಟ್ಟು 3666 ಎಕರೆ ಜಮೀನನ್ನು ಯಾವ ಆಧಾರದ ಮೇಲೆ ನೀಡಲಾಗಿದೆ ಎನ್ನುವ ಬಗ್ಗೆ ನನಗೆ ಮಾಹಿತಿಯಿಲ್ಲ ಎಂದು ತಿಳಿಸಿದರು.

        ತುಮಕೂರು ನಗರದಲ್ಲಿ ಬರುವ 20 ದಿನಗಳ ನಂತರ ನೀರಿನ ಸಮಸ್ಯೆ ತಲೆದೋರಲಿದ್ದು, ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ಕೋರಿದ ಮಾಧ್ಯಮದವರ ಮಾತಿಗೆ ಉತ್ತರಿಸಿದ ಅವರು ಮಳೆಯೇ ನೀರಿನ ಸಮಸ್ಯೆಗೆ ಮೂಲ ಪರಿಹಾರ. ಮಳೆ ಬಾರದೆ ಕೆಆರ್‍ಎಸ್ ಜಲಾಶಯಕ್ಕೆ ಒಳಹರಿವು ಹೆಚ್ಚಾಗದಿದ್ದರೆ ಜುಲೈ ಮಾಹೆಯ ಅಂತ್ಯಕ್ಕೆ ಬೆಂಗಳೂರು ನಗರಕ್ಕೂ ನೀರಿನ ಬರ ಅಂಟಿಕೊಳ್ಳಲಿದೆ. ಅದೇ ರೀತಿ ಹೇಮಾವತಿ ನೀರು ಬಾರದಿದ್ದರೆ ತುಮಕೂರಿನ ಜನರಿಗೂ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗುವ ಸಾಧ್ಯತೆಯಿದೆ. ಮಳೆರಾಯನ ಅನುಗ್ರಹ ನಮಗೆಲ್ಲ ಬೇಕು. ಜುಲೈ ಮಾಹೆಯಲ್ಲಿ ಮಳೆ ಬಾರದಿದ್ದರೆ ಮೋಡಬಿತ್ತನೆ ಮಾಡಲು ಕ್ಯಾಬಿನೆಟ್‍ನಲ್ಲಿ ಈಗಾಗಲೇ ನಿರ್ಣಯ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

        ನಂತರ ಗುಬ್ಬಿಗೆ ತೆರಳಿ ನೂತನ ಉಪ ನೋಂದಣಾಧಿಕಾರಿಗಳ ಕಚೇರಿಗೆ ಗುದ್ದಲಿಪೂಜೆ ಹಾಗೂ ಶಂಕುಸ್ಥಾಪನೆ ನೆರವೇರಿಸಿದರು. ಬಳಿಕ ಬಸ್ ನಿಲ್ದಾಣದ ಬಳಿ ಹೊಸದಾಗಿ ನಿರ್ಮಿಸಿರುವ ಇಂದಿರಾ ಕ್ಯಾಂಟಿನ್ ಉದ್ಘಾಟನೆ ನೆರವೇರಿಸಿದರು. ಮಾನ್ಯ ಉಪ ಮುಖ್ಯ ಮಂತ್ರಿಗಳು ಇಂದಿರಾ ಕ್ಯಾಂಟೀನ್‍ನಲ್ಲಿ ಉಪ್ಪಿಟ್ಟು, ಕೇಸರಿ ಬಾತ್ ಸವಿಯನ್ನು ಸವಿದರು.ಈ ಸಂದರ್ಭದಲ್ಲಿ ಪ್ರಾಥಮಿಕ ಮತ್ತು ಪೌಢ ಶಿಕ್ಷಣ ಸಚಿವ ಎಸ್.ಆರ್.ಶ್ರೀನಿವಾಸ್, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಲತಾ ರವಿಕುಮಾರ್, ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‍ಕುಮಾರ್, ಪೊಲೀಸ್ ವರಿಷ್ಠಾಧಿಕಾರಿ ಕೋನ ವಂಶಿಕಷ್ಣ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap