ಬೆಂಗಳೂರು
ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ ಹಾಗೂ ವಿದ್ಯುತ್ ಕಾಯ್ದೆಗಳಿಗೆ ತಿದ್ದುಪಡಿ ವಿರೋಧಿಸಿ ನಿನ್ನೆಯಿಂದ ರೈತ, ಕಾರ್ಮಿಕ, ದಲಿತ ಸಂಘಟನೆಗಳ ಕಾರ್ಯಕರ್ತರು ಆರಂಭಿಸಿರುವ ಅಹೋರಾತ್ರಿ ಪ್ರತಿಭಟನೆ ಇಂದು ಕೂಡ ಮುಂದುವರಿಸಿದ್ದು, ಫ್ರೀಡಂ ಪಾರ್ಕ್ ನಲ್ಲಿ ನೂರಾರು ರೈತರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ರೈತ ಸಂಘ ಹಾಗೂ ಹಸಿರುಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ, ರಾಜ್ಯ ಸರ್ಕಾರ ಕಾರ್ಪೋರೇಟ್ ವಲಯಗಳನ್ನು ಬೆಳೆಸುವಂತಹ, ರೈತರಿಗೆ ಮಾರಕವಾಗುವಂತಹ ಕಾಯ್ದೆಗಳನ್ನು ಜಾರಿಗೊಳಿಸಲು ಮುಂದಾಗಿದೆ. ರೈತ ಸಮುದಾಯವನ್ನು ಸರ್ವನಾಶ ಮಾಡುವ ಈ ಕಾಯ್ದೆಗಳು ಅವೈಜ್ಞಾನಿಕ ಕವಾಗಿವೆ. ಭೂಸುಧಾರಣಾ ಕಾಯ್ದೆ ಜಾರಿಯಾದರೆ ಕೃಷಿ ಕ್ಷೇತ್ರ ಅಧಃಪತನದತ್ತ ಸಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಪಿಎಂಸಿ, ವಿದ್ಯುತ್ ಕಾಯ್ದೆ ತಿದ್ದುಪಡಿಗಳು ಕೂಡ ರೈತರ ಹಕ್ಕನ್ನು ಕಸಿದುಕೊಳ್ಳುವ ಕಾಯ್ದೆಗಳಾಗಿವೆ. ಇವುಗಳ ವಿರುದ್ಧ ಹೋರಾಟವನ್ನು ಪ್ರಾರಂಭಿಸಿದ್ದೇವೆ. ದೇಶಾದ್ಯಂತ ಈಗಾಗಲೇ ಈ ವಿರುದ್ಧ ಹೋರಾಟ ನಡೆಯುತ್ತಿದೆ. ರಾಜ್ಯದಲ್ಲೂ ಹೋರಾಟವನ್ನು ತೀವ್ರಗೊಳಿಸುತ್ತೇವೆ. ರೈತರಿಂದ ಅಕಾರಕ್ಕೆ ಬಂದ ಸರ್ಕಾರಗಳು ರೈತರನ್ನು ನಾಶ ಮಾಡುವಂತಹ ಕಾಯ್ದೆಗಳನ್ನು ಜನರಿಗೆ ತರುತ್ತವೆ. ಕಾರ್ಫೋರೇಟ್ ವಲಯಗಳನ್ನು ಪೋಷಿಸಲು ಮುಂದಾಗುತ್ತವೆ. ಇವುಗಳಿಗೆ ಯಾವುದೇ ಕಾರಣಕ್ಕೂ ನಾವು ಆಸ್ಪದ ಕೊಡುವುದಿಲ್ಲ ಎಂದು ಹೇಳಿದರು.
ಕೃಷಿಕರಿಗೆ ಮರಣ ಶಾಸನವಾಗಿರುವ ಈ ಕಾಯ್ದೆಗಳನ್ನು ಯಾವುದೇ ಕಾರಣಕ್ಕೂ ಜಾರಿ ಮಾಡಬಾರದು ಎಂದು ಒಕ್ಕೂರಲಿನ ಒತ್ತಾಯ ಮಾಡಿದರು.ಪ್ರಸಕ್ತ ಅಧಿವೇಶನದಲ್ಲಿ ತಿದ್ದುಪಡಿ ಕಾಯ್ದೆಯನ್ನು ಹಿಂಪಡೆಯಬೇಕು. ಇಲ್ಲದಿದ್ದರೆ ನಮ್ಮ ಹೋರಾಟ ತೀವ್ರಗೊಳ್ಳಲಿದೆ. ಇದೇ 25ರಂದು ರಾಜ್ಯ ಬಂದ್ ಕರೆ ಕೊಡುವ ಮೂಲಕ ಹೋರಾಟವನ್ನು ಮತ್ತಷ್ಟು ಉಗ್ರಗೊಳಿಸುತ್ತೇವೆ ಎಂದು ಪ್ರತಿಭಟನಕಾರರು ಎಚ್ಚರಿಕೆ ನೀಡಿದರು.
ಕಾಯ್ದೆ ತಿದ್ದುಪಡಿ ವಿರೋಧಿಸಿ 25ರಂದು ರಾಜ್ಯ ಬಂದ್ ನಡೆಸುವ ಸಂಬಂಧ ಪ್ರಗತಿಪರ ಕಾರ್ಮಿಕ ಸಂಘಗಳ ಸೇರಿ ವಿವಿಧ ಸಂಘಟನೆಗಳ ಮುಖಂಡರ ಜೊತೆ ಮಾತುಕತೆ ನಡೆಯುತ್ತಿದೆ ಎಂದು ರೈತ ಸಂಘದ ಮುಖಂಡರು ತಿಳಿಸಿದರು. ಈಗಾಗಲೇ ಸಾಲದ ಸುಳಿಗೆ ಸಿಲುಕಿ ಬೆಳೆದ ಬೆಳೆಗೆ ಬೆಲೆ ಬಾರದೆ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಈ ಕಾಯ್ದೆಗಳು ಜಾರಿಯಾದರೆ ಆತ್ಮಹತ್ಯೆಗಳು ಮತ್ತಷ್ಟು ಹೆಚ್ಚಾಗಲಿವೆ ಎಂದು ಹೇಳಿದರು.
ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ, ಈ ಕಾಯ್ದೆಗಳ ವಿರುದ್ಧ ನಾವೆಲ್ಲ ಒಗ್ಗಟ್ಟಿನ ಹೋರಾಟ ಮಾಡಬೇಕಿದೆ. ಇಲ್ಲದಿದ್ದರೆ ರೈತ ಸಮುದಾಯ ನಾಶವಾಗಲಿದೆ ಎಂದು ತಿಳಿಸಿದರು. ಪ್ರತಿಭಟನಾ ಸ್ಥಳಕ್ಕೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಇಂದು ಭೇಟಿ ನೀಡಲಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ