ಸರ್ಕಾರ ಮೋಡ ಬಿತ್ತನೆಗೆ ಕ್ರಮ ಕೈಗೊಳ್ಳಬೇಕು : ಶಿಮುಶ

ಹೊಳಲ್ಕೆರೆ;

    ಜಿಲ್ಲೆಯಲ್ಲಿ ಮಳೆ ಬಾರದೆ ರೈತರೂ ಸೇರಿದಂತೆ ಎಲ್ಲಾ ಜನರೂ ಆತಂಕದ ಕಾರ್ಮೋಡದಡಿಯಲ್ಲಿ ಬದುಕುತ್ತಿದ್ದಾರೆ. ಹಾಗಾಗಿ ಸರ್ಕಾರ ಕೂಡಲೇ ಗಮನಹರಿಸಿ ಈ ಭಾಗದಲ್ಲಿ ಮೋಡಬಿತ್ತನೆ ಮಾಡಬೇಕು. ಇದಕ್ಕಾಗಿ ಎಲ್ಲಾ ಜನಪ್ರತಿನಿಧಿಗಳು ಸರ್ಕಾರವನ್ನು ಒತ್ತಾಯಿಸಬೇಕು ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದರು.

   ಶ್ರೀಮುರುಘಾಮಠದ ವತಿಯಿಂದ ಹೊಳಲ್ಕೆರೆ ತಾಲ್ಲೂಕಿನ ಹಳ್ಳಿಗಳಲ್ಲಿ ಆಯೋಜಿಸಿರುವ ಶ್ರಾವಣಮಾಸದ ಕಲ್ಯಾಣದರ್ಶನ ಕಾರ್ಯಕ್ರಮದ ಮೊದಲನೇ ದಿನ ಈಚಘಟ್ಟ ಗ್ರಾಮದಲ್ಲಿ ಚಾಲನೆ ನೀಡಿ ಶ್ರೀಗಳು ಮಾತನಾಡಿದರು ಈಚಘಟ್ಟ ಗ್ರಾಮ ಚಿಕ್ಕದಾದರೂ ಅದರದು ದೊಡ್ಡ ಹೆಸರು. ಈ ಗ್ರಾಮದಿಂದ ಬಹಳಷ್ಟು ಜನ ಮಹನೀಯರು ಆಗಿಹೋಗಿದ್ದಾರೆ.

     ಅಂತಹವರಲ್ಲಿ ಗ್ರಾಮದ ಮಠದ ನಂಜಯ್ಯನವರದು ಹಿರಿದಾದ ಹೆಸರು. ನ್ಯಾಯ ಪರಿಪಾಲಕರಾಗಿ ಮಾದರಿಯಾಗಿದ್ದವರು. ಜನರೇ ನನ್ನ ದೈವ, ಜನರ ಅಭಿವದ್ಧಿಗಾಗಿ ನಾವು ಸದಾ ಶ್ರಮಿಸುತ್ತೇವೆ. ಶ್ರೀಮಠಕ್ಕೆ ಸ್ವಾಮೀಜಿಯವರ ದರ್ಶನಕ್ಕೆ ಯಾರೇ ಬಂದರೂ ಕಾಯಿಸುವುದಿಲ್ಲ, ಸತಾಯಿಸುವುದಿಲ್ಲ ಎಂದರು.

    ಕಲ್ಯಾಣದರ್ಶನ ಒಂದು ಜನಪರವಾದ ಕಾರ್ಯಕ್ರಮ. ಕಲ್ಯಾಣ ಎಂದರೆ ಜನಕಲ್ಯಾಣ, ಲೋಕಕಲ್ಯಾಣ, ಜನರ ಉದ್ಧಾರ ಎಂದು ನಮ್ಮನ್ನು ನಾವೇ ಉದ್ಧಾರ ಮಾಡಿಕೊಳ್ಳಬೇಕು. ಹಾಗಾಗಿ ಮಳೆ ಬಂದಿಲ್ಲ ತೋಟ ಒಣಗುತ್ತಿವೆ ಎಂದು ಚಿಂತಕ್ರಾಂತರಾಗಬೇಡಿ ಅಸಹಾಯಕರಾಗಬೇಡಿ ಬದುಕು ಮುಂದೆಯೂ ಇದೆ. ದುಡ್ಡು ಜೀವನದ ಸರ್ವಸ್ವ ಎಂದು ತಿಳಿಯಬೇಡಿರಿ ಎಂದು ಸಿದ್ದಾರ್ಥರ ಪ್ರಕರಣವನ್ನು ಉದಾಹರಿಸಿದರು.

    ಬಸವಾದಿ ಶರಣರ ಹೋರಾಟ ರಟ್ಟೆಯ ಹೋರಾಟ. ನಿಮ್ಮ ರಟ್ಟೆಯನ್ನು ನಂಬಿದರೆ ಹೊಟ್ಟೆ ತುಂಬುತ್ತದೆ, ಬಟ್ಟೆ ದೊರೆಯುತ್ತದೆ. 12ನೇ ಶತಮಾನದ ಚಳವಳಿ ರಟ್ಟೆಯ ಚಳವಳಿ. ಶ್ರೀಮಂತಿಕೆಯಲ್ಲಿ ಆದರ್ಶಗಳು ಸೊರಗಿ ಹೋಗುತ್ತವೆ. ಬಡತನದಲ್ಲಿಯೇ ಆದರ್ಶಗಳು ಅರಳುವುದು ಎಂದು ತಮ್ಮನ್ನೇ ಶರಣರು ಉದಾಹರಣೆಯಾಗಿ ನೀಡಿದರು.

    ಕಳೆದ ತಿಂಗಳ ಕೊನೆ ವಾರದಲ್ಲಿ ದುಬೈ, ಬಾಲಿ ದೇಶಗಳಿಗೆ ಹೋಗಿದ್ದೆವು. ಅಲ್ಲಿಯೂ ಬಸವಣ್ಣನವರ ವಿಚಾರಗಳಿಗೆ ಜನರಷ್ಟೇ ಅಲ್ಲ ಅಲ್ಲಿನ ಆಡಳಿತವು ಒಲವು ತೋರಿದೆ. ಬಸವ ಪುತ್ಥಳಿ ನಿರ್ಮಾಣಕ್ಕೂ ಮುಂದಾಗಿವೆ ಎಂದರು.ಇದೇ ಸಂದರ್ಭದಲ್ಲಿ ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ನೋಟ್‍ಬುಕ್, ಪೆನ್ನು ವಿತರಿಸಿದರು. ದುಶ್ಚಟ ಜೋಳಿಗೆ ಹಿಡಿದು ತಮ್ಮ ದುಶ್ಚಟಗಳನ್ನು ಇದರಲ್ಲಿ ಹಾಕಿ ತಮ್ಮ ಜೀವನ ಬದಲಾಯಿಸಿಕೊಳ್ಳಿ ಎಂದರು. ಕೆಲವರು ತಮ್ಮ ದುಶ್ಚಟಗಳನ್ನು ಬಿಡಲು ಮುಂದೆಬಂದರು.

    ಸಭೆಯಲ್ಲಿ ಸಾನ್ನಿಧ್ಯ ವಹಿಸಿದ ಪೂರ್ವಾಶ್ರಮದಲ್ಲಿ ಅದೇ ಊರಿನವರೂ ಆದ ರಾವಂದೂರು ಮುರುಘಾಮಠದ ಶ್ರೀ ಮೋಕ್ಷಪತಿ ಮಹಾಸ್ವಾಮಿಗಳು ಮಾತನಾಡಿ, ಸಕಾಲಕ್ಕೆ ಸರಿಯಾಗಿ ಮಳೆ ಬಾರದೆ ರೈತರು ಕಂಗಾಲಾಗಿದ್ದಾರೆ. ಸ್ವದೇಶಿ ವಸ್ತುಗಳನ್ನು ಬಳಸಿ. ಅದ್ಧೂರಿ ಮದುವೆ ಮಾಡಿ ಸಾಲದ ಸುಳಿಯಲ್ಲಿ ಸಿಕ್ಕಿಕೊಳ್ಳಬೇಡಿ. ಸರಳ ಜೀವನಕ್ಕೆ ಮುಂದಾಗಿ ಮನಸ್ಸನ್ನು ಉನ್ನತೀಕರಿಸಿಕೊಳ್ಳಿ ಎಂದರು. ಉತ್ತರ ಭಾರತದ ನದಿಗಳನ್ನು ದಕ್ಷಿಣಕ್ಕೆ ಜೋಡಿಸಲು ಕೇಂದ್ರಸರ್ಕಾರ ಪ್ರಯತ್ನಿಸಬೇಕು.

    ಇದರಿಂದ ರೈತರ ಜೀವನ ಹಸಿರಾಗುತ್ತದೆ ಎಂದರು.ಗುಂಡೇರಿ ಸರ್ಕಾರಿ ಶಾಲಾ ಶಿಕ್ಷಕಿ ಶ್ರೀಮತಿ ಜಿ.ಆರ್. ಶೋಭ ಅನ್ನದಾತನ ಹಾಡುಪಾಡು ವಿಷಯ ಕುರಿತು ಉಪನ್ಯಾಸ ನೀಡಿದರು. ವೇದಿಕೆಯಲ್ಲಿ ಭಗೀರಥ ಗುರುಪೀಠದ ಶ್ರೀ ಪುರುಷೋತ್ತಮಾನಂದಪುರಿ ಸ್ವಾಮಿಗಳು, ಜಿ.ಪಂ. ಮಾಜಿ ಸದಸ್ಯ ಎಲ್.ಬಿ.ರಾಜಶೇಖರ್, ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಮುಂತಾದವರಿದ್ದರು. ತಾಲ್ಲೂಕು ಪಂಚಾಯಿತಿ ಸದಸ್ಯ ಅಜಯ್, ನಿವೃತ್ತ ಶಿಕ್ಷಕ ಕೆ.ಎಸ್.ಮಹಾದೇವಪ್ಪ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

     ಇದಕ್ಕು ಮುನ್ನ ಗ್ರಾಮಕ್ಕೆ ಶರಣರು ಆಗಮಿಸಿದ ಕೂಡಲೆ ಚಮ್ಮಾಳ, ನಂದಿಕೋಲಿನ ವಾದ್ಯಗಳು ಮಾರ್ದನಿಸಿದವು. ಪುಷ್ಪವೃಷ್ಟಿಯೊಂದಿಗೆ ಶರಣರನ್ನು ಆಹ್ವಾನಿಸಲಾಯಿತು. ಬಾಳೆಕಂದುಗಳ, ಮಾವಿನ ಎಲೆಗಳ ತೋರಣ, ವಿದ್ಯುತ್ ದೀಪಾಲಂಕಾರ ಗ್ರಾಮವನ್ನು ಸುಂದರವಾಗಿ ಕಾಣುವಂತೆ ಮಾಡಿದ್ದವು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap