ಬೆಂಗಳೂರು
ಕೊರೋನಾಗಾಗಿಯೇ ಕೇಂದ್ರ ಸರ್ಕಾರ ಪ್ರತ್ಯೇಕ ಬಜೆಟ್ ಮಂಡಿಸಬೇಕು. ಕೊರೋನಾ ತಡೆಗೆ ರಾಜ್ಯಗಳಿಗೆ ಕೇಂದ್ರ ಹಣ ಹಂಚಿಕೆ ಮಾಡಬೇಕು ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೋನಾ ಸೋಂಕು ಉಲ್ಬಣಗೊಂಡಿರುವ ಹಿನ್ನೆಲೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತ್ಯೇಕ ಬಜೆಟ್ ಮಂಡಿಸಿದ್ದಾರೆ. ರಾಜ್ಯದಲ್ಲೂ ಅದೇ ರೀತಿಯಾಗಿ ಪ್ರತ್ಯೇಕ ಬಜೆಟ್ ಮಂಡಿಸಬೇಕು. ಈ ವಿಚಾರದಲ್ಲಿ ಕೇಂದ್ರ ಸರ್ಕಾರ ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ.ಕೊರೋನಾ ನಿಯಂತ್ರಣಕ್ಕೆ ಸೂಕ್ತ ಕ್ರಮ ತೆಗೆದುಕೊಂಡಿಲ್ಲ ಎಂದರು.
ರಾಜ್ಯದಲ್ಲಿರುವವರಿಗೆ ಕೊರೋನಾ ಕಾಣಿಸಿಕೊಂಡಿಲ್ಲ. ಬದಲಿಗೆ ಹೊರಗಿನಿಂದ ಬಂದವರಲ್ಲಿ ಸೋಂಕು ದೃಢಪಟ್ಟಿದೆ. ಸ್ಥಳೀಯರಿಗೆ ಎಲ್ಲಿಯೂ ಕೊರೋನಾ ಬಂದಿಲ್ಲ. ಹೀಗಾಗಿ ಮಾಧ್ಯಮಗಳು ವಾಸ್ತವ ಪರಿಸ್ಥಿತಿಯನ್ನು ವರದಿ ಮಾಡಬೇಕು. ಜನ ಈಗಾಗಲೇ ಭಯಭೀತಿಗೊಂಡಿದ್ದು, ಮಾಧ್ಯಮಗಳು ಜನರನ್ನು ಬೆಚ್ಚಿ ಬೀಳಿಸುವುದು ಬೇಡ. ರೋಗದ ವಾಸ್ತವ ಜಾಗೃತಿ ಬಗ್ಗೆ ವರದಿ ಮಾಡಬೇಕು ಎಂದು ಸಲಹೆ ನೀಡಿದರು.
ಕೊರೋನಾ ಬಗ್ಗೆ ರಾಜ್ಯದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದರಷ್ಟೆ ಸಾಲದು. ಅದಕ್ಕೆ ತಕ್ಕಂತೆ ಮುಂಜಾಗ್ರತೆ, ಸುರಕ್ಷತಾ ಕ್ರಮ ತೆಗೆದುಕೊಳ್ಳಬೇಕು.ಕೊರೋನಾ ವಿಚಾರವನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ. ಕೇಂದ್ರ ಸರ್ಕಾರದ ನಾಯಕರು ಕೊರೋನಾ ತಡೆಯುವ ಬದಲು ಬರೀ ಭಾಷಣ ಬಿಗಿಯುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಕೆಪಿಸಿಸಿ ನೂತನ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮಾತನಾಡಿ, ಕೊರೋನಾ ಹಿನ್ನೆಲೆಯಲ್ಲಿ ಎಮರ್ಜೆನ್ಸಿ ಘೋಷಿಸಿದ ಸರ್ಕಾರದ ನಿರ್ಧಾರಕ್ಕೆ ನಮ್ಮ ಬೆಂಬಲ ಇದೆ. ಜನರಲ್ಲಿ ಆತಂಕ ಕಡಿಮೆ ಮಾಡುವ ಪ್ರಯತ್ನಕ್ಕೂ ಸರ್ಕಾರ ಮುಂದಾಗಬೇಕಿದೆ. ಫೋನ್ ನಲ್ಲಿ ಕೊರೋನಾ ಜಾಗೃತಿ ಧ್ವನಿ ತುಂಬಾ ಸಲ ಬರ್ತಿರೋದು ಕಿರಿಕಿರಿ ಉಂಟು ಮಾಡುತ್ತಿದೆ. ಜನ ಈ ಕುರಿತು ದೂರು ನೀಡುತ್ತಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
