ಬೆಂಗಳೂರು
ಸರ್ಕಾರ ಆದಷ್ಟು ಬೇಗ ಕೆ.ಎಸ್.ಆರ್.ಟಿ.ಸಿ., ಬಿ.ಎಂ.ಟಿ.ಸಿ. ಮತ್ತು ಸರ್ಕಾರದ ಅಧೀನದಲ್ಲಿರುವ ಎಲ್ಲಾ ಸಂಸ್ಥೆಗಳ ಕಾರ್ಖಾನೆ ಕಂಪೆನಿಗಳ ನೌಕರರಿಗೆ ನೀಡಬೇಕಾದ ಸಂಬಳ ಮತ್ತಿತರ ಸವಲತ್ತುಗಳನ್ನು ನೀಡಬೇಕೆಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಸಂಬಂಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಅವರು, ಸರ್ಕಾರದ ಅಧೀನದಲ್ಲಿರುವ ಕೆ.ಎಸ್.ಆರ್.ಟಿ.ಸಿ. ಸಂಸ್ಥೆಯ ಚಾಲಕರು- ನಿರ್ವಾಹಕರು , ಚಾಲಕರು ನಿರ್ವಾಹಕರು ಮುಂತಾದ ಸಿಬ್ಬಂದಿಗಳಿಗೆ ಲಾಕ್‍ಡೌನ್ ಅವಧಿಯಲ್ಲಿ ಸರಿಯಾಗಿ ಸಂಬಳ ನೀಡದೇ ರಜೆ ಹಾಕುವಂತೆ ಒತ್ತಾಯ ಮಾಡಲಾಗುತ್ತಿದೆ ಎಂಬ ದೂರುಗಳು ವ್ಯಾಪಕವಾಗಿ ಕೇಳಿ ಬರುತ್ತಿವೆ. ಸರ್ಕಾರವು ಖಾಸಗಿ ವಲಯದ ಕಂಪೆನಿಗಳ, ಕೈಗಾರಿಕೆಗಳ ಮಾಲೀಕರುಗಳಿಗೆ ನೀಡಿರುವ ನಿರ್ದೇಶನದಂತೆ ತಮ್ಮ ತಮ್ಮ ಸಂಸ್ಥೆಗಳ ಕಾರ್ಖಾನೆಗಳ ಕಂಪೆನಿಗಳ ನೌಕರರುಗಳಿಗೆ ಸಂಬಳ ಮುಂತಾದ ಸವಲತ್ತುಗಳನ್ನು ಯಾವುದೇ ಕಾರಣಕ್ಕೂ ಕಟಾಯಿಸಬಾರದೆಂದು ನಿರ್ದೇಶನ ನೀಡಿದೆ.
ಹೀಗಿರುವಾಗ ತನ್ನ ಅಧೀನದಲ್ಲಿರುವ ಕೆ.ಎಸ್.ಆರ್.ಟಿ.ಸಿ.ಯಂತಹ ಸಂಸ್ಥೆಯ ಸಿಬ್ಬಂದಿಗಳಿಗೆ ಸಂಬಳ ನೀಡುವುದಿಲ್ಲವೆಂದೂ , ರಜೆ ತೆಗೆದುಕೊಳ್ಳಬೇಕೆಂದೂ ಒತ್ತಾಯಿಸುತ್ತಿರುವುದು ಇಬ್ಬಂದಿತನದಿಂದ ಕೂಡಿದ ಅನೈತಿಕ ನಡೆಯಾಗುತ್ತದೆ. ಹಾಗಾಗಿ ಸರ್ಕಾರ ಖಾಸಗಿಯವರಿಗೆ ನಿರ್ದೇಶನ ನೀಡುವ ಮೊದಲು ಸರ್ಕಾರ ನೈತಿಕ ಹಾದಿಯಲ್ಲಿ ನಡೆಯಬೇಕಾಗುತ್ತದೆ ಎಂದು ಸಿದ್ದರಾಮಯ್ಯ ಸರ್ಕಾರದ ನಡೆಯನ್ನು ಕುಟುಕಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ