ಬೆಂಗಳೂರು
ಸದ್ಯ ಲಾಕ್‌ಡೌನ್ ಇರುವುದರಿಂದ ದೇವಸ್ಥಾನಗಳಿಗೆ ಹೋಗುವವವರ ಸಂಖ್ಯೆ ಕಡಿಮೆಯಾಗಿದ್ದು ಅರ್ಚಕರ ಸ್ಥಿತಿ ದಯನೀಯವಾಗಿದೆ ಆದ್ದರಿಂದ ಸರ್ಕಾರ ಅರ್ಚಕರ ನೋವನ್ನು ಆಲಿಸಿ ಅವರನ್ನು ಮೇಲೆತ್ತುವ ಕೆಲಸವಾಗಬೇಕು ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ, ಶಾಸಕ ದಿನೇಶ್ ಗುಂಡೂರಾವ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಕರ್ನಾಟಕದಲ್ಲಿ ಮುಜರಾಯಿ ಇಲಾಖೆ ವ್ಯಾಪ್ತಿಗೆ ಬರುವ ಸಿ ದೇಗುಲಗಳು ಸುಮಾರು 35 ಸಾವಿರಕ್ಕೂ ಹೆಚ್ಚಿವೆ. ಇವುಗಳಲ್ಲಿ ಹೆಚ್ಚು ದೇವಾಲಯಗಳು ಗ್ರಾಮೀಣ ಪ್ರದೇಶದಲ್ಲಿವೆ. ಲಾಕ್‌ಡೌನ್‌ನಿಂದ ಇಂದು ಈ ಎಲ್ಲಾ ದೇಗುಲಗಳನ್ನು ಮುಚ್ಚಲಾಗಿದೆ. ಭಕ್ತರ ಭೇಟಿಯನ್ನು ನಿರ್ಭಂಧಿಸಲಾಗಿದೆ. ಹೀಗಿರುವಾಗ ಸರ್ಕಾರ ಅರ್ಚಕರಿಗೆ ಆರ್ಥಿಕ ಸಹಾಯ ಮಾಡಬೇಕು ಎಂದು ಅವರು ಹೇಳಿದ್ದಾರೆ.
ದೇವಸ್ಥಾನಗಳಿಗೆ ಬೀಗ ಹಾಕಿರುವ ಕಾರಣ ಅರ್ಚಕರ ಕುಟುಂಬಕ್ಕೆ ತೊಂದರೆಯಾಗಿದೆ. ದೇವಸ್ಥಾನವನ್ನೆ ನಂಬಿಕೊಂಡು ಜೀವನ ನಡೆಸುತ್ತಿದ್ದ, ಕುಟುಂಬಗಳು ಯಾವುದೇ ಆದಾಯವಿಲ್ಲದೆ ಸಂಕಷ್ಟದಲ್ಲಿದ್ದಾರೆ. ಇಂತಹ ಕುಟುಂಬಗಳಿಗೆ ಸರ್ಕಾರದ ನೆರವು ಸಿಗಬೇಕು ಎಂದಿದ್ದಾರೆ.
ಕೂಡಲೇ ಇಂತಹ ಅರ್ಚಕರ ಸ್ಥಿತಿಯತ್ತ ಸರ್ಕಾರ ಕಣ್ಣಾಯಿಸಿ, ಅವರಿಗೆ ಆರ್ಥಿಕ ಸಹಾಯ ಮಾಡಬೇಕು. ಸಹಾಯಧನ ನೀಡಲು ಕೂಡಲೇ ಕ್ರಮ ತೆಗೆದುಕೊಳ್ಳಬೇಕು ಎಂದು ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ದಿನೇಶ್ ಗುಂಡೂರಾವ್ ಮುಖ್ಯಮಂತ್ರಿ ಯಡಿಯೂರಪ್ಪಗೆ ಒತ್ತಾಯಿಸಿದ್ದಾರೆ.








