ದಾವಣಗೆರೆ :
ಮಕ್ಕಳ ಭಾಗವಹಿಸುವಿಕೆಯ ಭಾಗವಾಗಿ ಶಾಲೆಗಳಲ್ಲಿ ಶೈಕ್ಷಣಿಕ ಪ್ರವಾಸ, ಪೌಷ್ಟಿಕ ಆಹಾರಪೂರೈಕೆಯೊಂದಿಗೆ ಮಕ್ಕಳ ಭೌತಿಕ ಹಾಗೂ ಬೌದ್ಧಿಕ ಪ್ರಗತಿಗೂ ಆದ್ಯತೆ ನೀಡುವ ಮೂಲಕ ಮಕ್ಕಳ ಹಕ್ಕು ಪೋಷಣೆಗೆ ಸರಕಾರಿ ಶಾಲೆಗಳಲ್ಲಿ ಪೂರಕವಾತಾವರಣ ಇದೆ ಎಂದು ಪಿಡಿಒ ಅಶ್ವಿನಿ ದಿವಾಕರ್ ಹೇಳಿದರು.
ತಾಲೂಕಿನ ನಾಗರಸನಹಳ್ಳಿ ಸರಕಾರಿ ಪ್ರೌಢಶಾಲೆಯಲ್ಲಿ ಕುಕ್ಕುವಾಡ ಗ್ರಾಪಂವತಿಯಿಂದ ಆಯೋಜಿಸಿದ್ದ ಮಕ್ಕಳ ಹಕ್ಕುಗಳ ಗ್ರಾಮಸಭೆಯಲ್ಲಿ ಮಾತನಾಡಿದ ಅವರು ಸಕಲ ಸೌಲಭ್ಯ ಇರುವ ಸರಕಾರಿ ಶಾಲೆಗಳಲ್ಲಿ ನುರಿತ ಶಿಕ್ಷಕರೂ ಇದ್ದು ಗುಣಾತ್ಮಕ ಶಿಕ್ಷಣ ಸಿಗುತ್ತಿದೆ. ಶಾಲಾ ಭೌತಿಕ ಅಭಿವೃದ್ಧಿಗೂ ಸರಕಾರ ಉತ್ತಮ ಯೋಜನೆಗಳನ್ನು ರೂಪಿಸುತ್ತಿದೆ ಎಂದರು.
ಗ್ರಾಪಂ ಸದಸ್ಯ ಸುರೇಶ್ ಮಾತನಾಡಿ, ಸರಕಾರಿ ಶಾಲಾ ಮಕ್ಕಳು ಪ್ರತಿಭಾವಂತರಾಗಿದ್ದು, ಶಾಲಾ ಅಭಿವೃದ್ಧಿಗಾಗಿ ಪೋಷಕರು ಸಹಕರಿಸಬೇಕು. ಶಾಲಾ ಸಭೆ ಸಮಾರಂಭಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಮೂಲಕ ಶಾಲೆಯ ಆಗುಹೋಗುಗಳ ವಿಷಯಗಳಲ್ಲಿ ಭಾಗಿಯಾಗಬೇಕು. ಶೈಕ್ಷಣಿಕ ಪ್ರಗತಿಗೆ ಶಿಕ್ಷಕರೊಂದಿಗೆ ಕೈಜೋಡಿಸಬೇಕು ಎಂದರು.
ಶಾಲಾ ಮುಖ್ಯೋಪಾಧ್ಯಾಯ ನಾಗರಾಜ್ ಮಾತನಾಡಿ ಶಾಲೆಯಿಂದ ಹೊರಗುಳಿದಿರುವ ಮಕ್ಕಳು ಇಲ್ಲ. ಎಲ್ಲರೂ ಶಾಲೆಗೆ ಹೋಗುತ್ತಿದ್ದು, ಹೆಣ್ಣು ಮಕ್ಕಳ ವಿಷಯದಲ್ಲಿ ಹಳೆ ಸಂಪ್ರದಾಯಿಕ ಮನೋಭಾವ ಈ ಭಾಗದಲ್ಲಿ ಇನ್ನೂ ಜೀವಂತವಾಗಿರುವುದು ಬೇಸರದ ಸಂಗತಿ ಎಂದರು. ಜಿಲ್ಲಾ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮನ್ವಯ ವೇದಿಕೆ ಅಧ್ಯಕ್ಷ ಪರಮೇಶ್ವರಪ್ಪ ಮಕ್ಕಳ ಹಕ್ಕುಗಳ ಕುರಿತು ಉಪನ್ಯಾಸ ನೀಡಿದರು.
ಸಭೆಯಲ್ಲಿ ಮಕ್ಕಳೊಂದಿಗೆ ಸಂವಾದ ನಡೆಸಿ ಶಾಲೆ ಹಾಗೂ ಗ್ರಾಮಗಳಲ್ಲಿರುವ ಸಮಸ್ಯೆಗಳ ಕುರಿತು ಮಾಹಿತಿ ಪಡೆಯಲಾಯಿತು. ಶಾಲಾ ಮಕ್ಕಳು ಶಾಲೆಗೆ ಗ್ರಂಥಾಲಯ, ಕುಡಿವ ನೀರಿನ ಶುದ್ಧೀಕರಣ ಘಟಕ, ಕ್ರೀಡೋಪಕರಣ ಪೂರೈಸುವುದು, ಶಾಲಾ ಕಾಂಪೌಂಡ್ ನಿರ್ಮಿಸುವಂತೆ ಗ್ರಾಪಂಗೆ ಮನವಿಮಾಡಿದರು. ಇದಕ್ಕೂ ಮೊದಲು ಪ್ರೌಢಶಾಲೆ ಮಕ್ಕಳು ಅಣಕು ಅಧಿವೇಶನ ನಡೆಸಿದರು.
ಸಭೆಯಲ್ಲಿ ನಾಗರಸನಹಳ್ಳಿ ಪ್ರಾಥಮಿಕ ಶಾಲಾಮಕ್ಕಳು ಶಿಕ್ಷಕ ಹನುಮಂತಪ್ಪ, ಪೌಢಶಾಲಾ ಸಮಿತಿ ಅಧ್ಯಕ್ಷ ಭಾಸ್ಕರಾಚಾರ್, ಉಪಾಧ್ಯಕ್ಷ ಜಡಗನಹಳ್ಳಿ ನಿಂಗಪ್ಪ, ಗ್ರಾಪಂ ಸದಸ್ಯರಾದ ನೀಲಮ್ಮ, ಯಶೋಧಮ್ಮ ದೇವೇಂದ್ರಪ್ಪ, ಸೇರಿದಂತೆ ಶಾಲಾ ಶಿಕ್ಷಕರು ಪೋಷಕರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ