ದಾವಣಗೆರೆ:
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ರಾಜ್ಯದಲ್ಲಿ ಸುಭದ್ರವಾಗಿದ್ದು, ಚುನಾವಣೆಯ ನಂತರ ಪತನವಾಗುವ ಪ್ರಶ್ನೆಯೇ ಇಲ್ಲ ಎಂದು ಶಾಸಕ ಡಾ.ಶಾಮನೂರು ಶಿವಶಂಕರಪ್ಪ ತಿಳಿಸಿದ್ದಾರೆ.
ಸಮೀಪದ ಶಿರಮಗೊಂಡನಹಳ್ಳಿ ಗ್ರಾಮದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಮೈತ್ರಿ ಸರ್ಕಾರ ಸುಭದ್ರವಾಗಿದ್ದು, ಐದು ವರ್ಷ ಅವಧಿ ಪೂರೈಸುವುದರಲ್ಲಿ ಯಾವುದೇ ಅನುಮಾನಬೇಡ ಎಂದು ಸ್ಪಷ್ಟಪಡಿಸಿದರು.ವಿಧಾನಸಭೆ ಚುನಾವಣೆಯಲ್ಲಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಸೋಲಿನ ದವಡೆಯಿಂದ ಸ್ವಲ್ಪದರಲ್ಲೇ ಗೆದ್ದ ಬಿಜೆಪಿ ಶಾಸಕ ಸಿ.ಟಿ.ರವಿ ಬುರುಡೇ ಎಂಬುದು ನಮಗೆಲ್ಲರಿಗೂ ಗೊತ್ತಿಲ್ಲವೇ? ಎಂದ ಅವರು, ಸಿ.ಟಿ.ರವಿ ಸೇರಿದಂತೆ ಬಿಜೆಪಿಯವರೆಲ್ಲರೂ ಸುಳ್ಳು ಹೇಳುವುದರಲ್ಲಿ ನಿಸ್ಸಿಮರು ಎಂದು ಮಾರ್ಮಿಕವಾಗಿ ನುಡಿದರು.
ಬಿಜೆಪಿಯವರು ಯಾವಾಗಲೂ ಏನಾದರೊಂದು ಸುಳ್ಳು ಹೇಳಿಕೊಂಡೇ ಹೋಗುತ್ತಾರೆ. ಮೇ.23ರಂದು ಮೈತ್ರಿ ಸರ್ಕಾರ ಪತನವಾಗುವುದಿಲ್ಲ. 5 ವರ್ಷ ಅವಧಿ ಪೂರೈಸಲಿದೆ ಎಂಬುದನ್ನು ರವಿ ಮತ್ತಿತರರು ಅರಿಯಬೇಕು. ಲೋಕಸಭೆ ಚುನಾವಣೆ ಮುಗಿ ಯುತ್ತಿದ್ದಂತೆಯೇ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ಯಡಿಯೂರಪ್ಪನವರನ್ನು ಅದೇ ಪಕ್ಷದವರು ಕೆಳಗೆ ಇಳಿಸಿ, ಮನೆಗೆ ಕಳಿಸುವುದು ನಿಶ್ಚಿತ ಎಂದು ಭವಿಷ್ಯ ನುಡಿದರು.
ಗೃಹ ಸಚಿವ ಎಂ.ಬಿ.ಪಾಟೀಲ್ ವಿಚಾರವಾಗಲೀ, ಲಿಂಗಾಯತ ಸ್ವತಂತ್ರ ಧರ್ಮದ ವಿಚಾರವಾಗಲೀ ಈಗ ಅಪ್ರಸ್ತುತ. ಆ ವಿಚಾರವನ್ನೂ ಈಗ ಮಾತನಾಡುವ ಅವಶ್ಯಕತೆಯೂ ಇಲ್ಲ. ಅದು ಈಗಾಗಲೇ ಮುಗಿದು ಹೋಗಿರುವ ಅಧ್ಯಾಯ ಎಂದ ಅವರು, ವೀರಶೈವ-ಲಿಂಗಾಯತರ ಎರಡೂ ಒಂದೇ ನಾಣ್ಯದ ಎರಡು ಮುಖಗಳು ಎಂಬುದು ನಮ್ಮ ವಾದವಾಗಿದೆ. ಈ ವಿಚಾರದಲ್ಲಿ ಯಾವುದೇ ಗೊಂದಲ ಬೇಡ ಎಂದು ಹೇಳಿದರು.
ಕಲಬುರಗಿ ಲೋಕಸಭಾ ಕ್ಷೇತ್ರದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು 1 ಲಕ್ಷಕ್ಕೂ ಅಧಿಕ ಮತಗಳಿಂದ ಗೆಲ್ಲುತ್ತಾರೆ. ನಾವು ಖರ್ಗೆ ಪರ ಪ್ರಚಾರಕ್ಕೆ ಹೋಗಿದ್ದಾಗ ವೀರಶೈವ ಲಿಂಗಾಯತ ಸಮುದಾಯದಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕಲಬುರಗಿ ಜಿಲ್ಲೆಯ ಸಮಗ್ರ ಅಭಿವೃದ್ಧಿಯಲ್ಲಿ ಖರ್ಗೆ ಅವರ ಪಾತ್ರ ಬಳಹ ದೊಡ್ಡದಾಗಿದೆ. ಇನ್ನೂ ಅಲ್ಲಿನ ವಿದ್ಯಾರ್ಥಿ, ಯುವಜನರಿಗೆ ಉದ್ಯೋಗ ಮೀಸಲಾತಿ ಕೊಡಿಸುವಲ್ಲೂ ಖರ್ಗೆ ಶ್ರಮ ಇದೆ ಎಂದರು.
ಕಲಬುರಗಿಯಲ್ಲಿ ಬೃಹತ್ ಸುಸಜ್ಜಿತ ಇಎಸ್ಐ ಆಸ್ಪತ್ರೆ, ವಿಶಾಲ ಬುದ್ಧ ವಿಹಾರವು ನಿರ್ಮಾಣ ಆಗಿರುವುದಕ್ಕೆ ಮಲ್ಲಿಕಾರ್ಜುನ್ ಖರ್ಗೆಯವರೇ ಕಾರಣೀಭೂತರಾಗಿದ್ದಾರೆ. ಅಲ್ಲದೇ, ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಯಾರಿಗಾದರೂ ಹೆದರುವುದಿದ್ದರೆ, ಅದು ಪ್ರತಿಪಕ್ಷದ ಹಿರಿಯ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮಾತ್ರ. ಖರ್ಗೆ ಪ್ರಶ್ನೆಗೆ ಉತ್ತರಿಸಲಾಗದೇ ಮೋದಿ ಎಂದಿಗೂ ಮುಖ ಕೊಟ್ಟು ಮಾತನಾಡಿಲ್ಲ. ಮಾತನಾಡುವುದೂ ಇಲ್ಲ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಬಿಜೆಪಿಯವರಂತೆ ನಾವು ಸುಳ್ಳು ಹೇಳುವುದಿಲ್ಲ. ತುಮಕೂರು ಕ್ಷೇತ್ರದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಗೆಲುವು ನಿಶ್ಚಿತವಾಗಿದ್ದು, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಗಳು ರಾಜ್ಯದಲ್ಲಿ ಬಹು ಸಂಖ್ಯೆಯಲ್ಲಿ ಜಯ ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ದಾವಣಗೆರೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಎಷ್ಟು ಲಕ್ಷ ಮತಗಳ ಅಂತರದಲ್ಲಿ ಸೋಲುತ್ತೇನೆಂದು ಲೆಕ್ಕ ಮಾಡುತ್ತಾ ಕೂರಬೇಕು. ನಾವು ಕುಳಿತಲ್ಲೇ ಕಾಂಗ್ರೆಸ್ಸಿಗೆ ಮತ ಬರುತ್ತವೆ. 1 ಲಕ್ಷಕ್ಕೂ ಅಧಿಕ ಮತಗಳಿಂದ ಮೈತ್ರಿ ಅಭ್ಯರ್ಥಿ ಹೆಚ್.ಬಿ.ಮಂಜಪ್ಪ ಅವರನ್ನು ಗೆಲ್ಲಿಸಿಕೊಂಡು ಬರುತ್ತೇವೆ ಎಂದರು.