ಹುಳಿಯಾರು
ಗೌಡಗೆರೆ ಗ್ರಾಮದಲ್ಲಿ ನೆಲೆಸಿರುವ ಶ್ರೀ ದುರ್ಗಮ್ಮನವರ 30ನೇ ವರ್ಷದ ಜಾತ್ರಾ ಮಹೋತ್ಸವವನ್ನು ಸಿಡಿ ಉತ್ಸವ, ಕಂಕಣ ವಿಸರ್ಜನೆ, ಓಕಳಿ ಸೇವೆ, ಮಡ್ಲಕ್ಕಿ ಸೇವೆ ಮುಂತಾದ ಧಾರ್ಮಿಕ ಕೈಕಂರ್ಯದೊಂದಿಗೆ ತೆರೆ ಎಳೆಯಲಾಯಿತು.
ಮಾರ್ಚಿ 15 ರ ಶುಕ್ರವಾರ ಶ್ಯಾನುಬೋಗರ ಮನೆಗೆ ಮಡ್ಲಕ್ಕಿ ಸೇವೆಗೆ ದಯಮಾಡಿಸುವ ಮೂಲಕ ಆರಂಭವಾದ ಈ ಜಾತ್ರಾ ಮಹೋತ್ಸವದಲ್ಲಿ ಮಡ್ಲಕ್ಕಿ ಸೇವೆ, ಪುಣ್ಯಾಹ, ಪಂಚಾಮೃತ ಅಭಿಷೇಕ, ನವಗ್ರಹಾರಾಧನೆ, ಕುಂಕುಮಾರ್ಚನೆ, ಕಂಕಣಧಾರಣೆ, ಮಧುವಣಗಿತ್ತಿ ಆರತಿಬಾನ, ಗಂಗಾಸ್ನಾನ ಮಹೋತ್ಸವ ಮತ್ತಿತರ ಧಾರ್ಮಿಕ ಚಟುವಟಿಕೆಗಳನ್ನು ಶ್ರದ್ಧಾಭಕ್ತಿಯಿಂದ ನೆರವೇರಿಸಲಾಯಿತು.
ಕೆಂಕೆರೆ ಕಾಳಮ್ಮ, ಹುಳಿಯಾರು ದುರ್ಗಮ್ಮ, ದಮ್ಮಡಿಹಟ್ಟಿ ಈರಬೊಮ್ಮಕ್ಕದೇವಿ, ಕೆ.ಸಿ.ಪಾಳ್ಯದ ಅಂತರಗಟ್ಟೆ ದುರ್ಗಮ್ಮದೇವಿ ದೇವರುಗಳು ಆಗಮನ ನಂತರ ಕೂಡು ಬೇಟಿ ಕಾರ್ಯಕ್ರಮವು ಶ್ರದಾಭಕ್ತಿಯಿಂದ ನೆರವೇರಿಸಲಾಯಿತು. ನಂತರ ಮಜ್ಜನ ಬಾವಿಯಿಂದ ಹರಕೆ ಹೊತ್ತ ಹೆಣ್ಣು ಮಕ್ಕಳ 40 ಕಳಶದ ನೆಡೆಮುಡಿ ಉತ್ಸವ ನಡೆಸಲಾಯಿತು.
ಉತ್ಸವ ಮೂರ್ತಿಯನ್ನು ಅಲಂಕರಿಸಿ ಪೂಜೆ ಸಲ್ಲಿಸಿ ವಾದ್ಯಮೇಳಗಳೊಂದಿಗೆ ಮದಾಸಿಯಲ್ಲಿ ಕರೆತಂದು ವಿವಿಧ ಹೂ ಹಾರಗಳಿಂದ ಸಿಂಗರಿಸಿದ್ದ ಗೌಡಗೆರೆ ತೋಟದ ಮನೆಯ ದಿ.ಶಾ.ವೆಂಕಟರಾಮಯ್ಯನವರ ಕುಟುಂಬದರು ಸ್ಥಾಪಿಸಿ ಅರ್ಪಿಸಿರುವ ್ಲ ಉಯ್ಯಾಲೆಗೆ ಅಮ್ಮನವರನ್ನು ಕುಳ್ಳಿರಿಸುವ ಮೂಲಕ ಉಯ್ಯಾಲೋತ್ಸವ ನಡೆಸಿದರು.
ಶನಿವಾರ ಸಿಡಿಉತ್ಸವ ನಡೆಸಿ ಕಂಕಣ ವಿಸರ್ಜನೆ, ಓಕಳಿ ಸೇವೆ, ಗೌಡಗೆರೆ ಗ್ರಾಮಸ್ಥರಿಂದ ಮಡ್ಲಕ್ಕಿ ಸೇವೆ ಅಂಗೀಕರಿಸಿ ಆಗಮಿಸಿದ್ದ ದೇವರುಗಳನ್ನು ಆಯಾ ಗ್ರಾಮಗಳಿಗೆ ಬೀಳ್ಕೊಡುವ ಮೂಲಕ ಜಾತ್ರಾ ಮಹೋತ್ಸವಕ್ಕೆ ತೆರೆ ಎಳೆಯಲಾಯಿತು.
ಈ ಜಾತ್ರಮಹೋತ್ಸವದಲ್ಲಿ ಗೌಡಗೆರೆ, ಕೆ.ಸಿ.ಪಾಳ್ಯ, ಕುರಿಹಟ್ಟಿ, ಕೋಡಿಪಾಳ್ಯ, ದಸೂಡಿ ಗ್ರಾಮಗಳ ಭಕ್ತರು ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಅಪಾರ ಸಂಖ್ಯೆಯಲ್ಲಿ ಭಕ್ತಾಧಿಗಳು ಪಾಲ್ಗೊಂಡು ಶ್ರೀ ಅಮ್ಮನವರ ಕೃಪೆಗೆ ಪಾತ್ರರಾದರು. ದೇವಸ್ಥಾನದ ಧರ್ಮದರ್ಶಿಗಳು, ಕನ್ವಿನೀಯರ್ ಕೃಷ್ಣಮೂರ್ತಿ ಸಮಿತಿ ಸದಸ್ಯರು ಗ್ರಾಪಂ ಅದ್ಯಕ್ಷರು ಸದಸ್ಯರು ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.