ತುಮಕೂರು
ಸರ್ಕಾರದ ಆದೇಶಗಳನ್ನು ಉಲ್ಲಂಘಿಸಿ ಕರ್ತವ್ಯಲೋಪ ಎಸಗಿದ ಆರೋಪದ ಮೇರೆಗೆ ತುಮಕೂರು ತಾಲ್ಲೂಕು ಹೆಗ್ಗೆರೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಮಂಜುಳ ಬಿ.ಎನ್. ಅವರನ್ನು ಅಧ್ಯಕ್ಷ ಸ್ಥಾನದಿಂದ ಹಾಗೂ ಗ್ರಾ.ಪಂ.ಸದಸ್ಯತ್ವ ಸ್ಥಾನದಿಂದ ಸರ್ಕಾರ ತೆಗೆದು ಹಾಕಿದೆ.
ಗ್ರಾಮ ಪಂಚಾಯತಿ ನಿಧಿ 1 ರಲ್ಲಿನ ಅನುದಾನವು ಗ್ರಾಮ ಪಂಚಾಯತಿ ಸಿಬ್ಬಂದಿಗಳ ವೇತನ ಮತ್ತು ಚುನಾಯಿತ ಪ್ರತಿನಿಧಿಗಳ ಗೌರವ ಧನ ಪಾವತಿ ಉದ್ದೇಶಕ್ಕೆ ಮಾತ್ರ ಬಳಸಬೇಕಾಗಿರುತ್ತದೆ. ಆದರೆ ಸದರಿ ಅನುದಾನವನ್ನು ನಿಯಮ ಬಾಹಿರವಾಗಿ ಆಶ್ರಯ ಎಂಟರ್‍ಪ್ರೈಸಸ್ ಅವರಿಂದ ಬೀದಿದೀಪ ಸಾಮಗ್ರಿ ಖರೀದಿಸಿದ್ದು, ಇದಕ್ಕಾಗಿ 3,25,911 ರೂ.ಗಳಾಗಿರುತ್ತದೆ.
ಖರೀದಿ ಪ್ರಕ್ರಿಯೆಯಲ್ಲಿ ಪ್ರಕಟಣೆ, ಓಚರ್ಸ್, ದರಪಟ್ಟಿ ಇರುವುದಿಲ್ಲ. ಟೆಂಡರ್ ಮೂಲಕ ಸಾಮಗ್ರಿ ಖರೀದಿಸದೆ ಕೆಟಿಪಿಪಿ ನಿಯಮ ಉಲ್ಲಂಘಿಸಿರುತ್ತಾರೆ. ನಿಧಿ 2 ರಲ್ಲಿ ಕುಡಿಯುವ ನೀರಿನ ನಿರ್ವಹಣೆಯ ಅನುದಾನ 1,69,196 ರೂ.ಗಳನ್ನು ಕುಡಿಯುವ ನೀರಿನ ಸಾಮಗ್ರಿಗಳ ಖರೀದಿಗೆ ವ್ಯಯ ಮಾಡಿರುತ್ತಾರೆ. ದಾಖಲಾತಿಗಳನ್ನು ನಿಯಮಾನುಸಾರ ನಿರ್ವಹಿಸಿರುವುದಿಲ್ಲ.
2015-16ನೇ ಸಾಲಿನ ನಿಧಿ 2 ರಲ್ಲಿ 15,500 ರೂ.ಗಳನ್ನು ರಸ್ತೆ ಕಾಮಗಾರಿಗೆ ನೀಡಿದ್ದು, ಕ್ರಿಯಾ ಯೋಜನೆ ಅಳವಡಿಸಿ ಅನುಮೋದನೆ ಪಡೆದಿಲ್ಲ. ತಂತ್ರಾಂಶದಲ್ಲಿ ಅಳವಡಿಸಿ ಹಣ ಪಾವತಿ ಮಾಡದೆ ಸರ್ಕಾರದ ಆದೇಶ ಉಲ್ಲಂಘಿಸಿ ಕರ್ತವ್ಯಲೋಪ ಎಸಗಿರುತ್ತಾರೆ. ಇವೆಲ್ಲವನ್ನೂ ಪರಿಶೀಲಿಸಲಾಗಿ ಆರೋಪವು ಸಾಬಿತಾಗಿರುವ ಹಿನ್ನೆಲೆಯಲ್ಲಿ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮದ ಅಡಿಯಲ್ಲಿ ಗ್ರಾಪಂ ಅಧ್ಯಕ್ಷರಾದ ಮಂಜುಳ ಬಿ.ಎನ್. ಅವರನ್ನು ಹೆಗ್ಗೆರೆ ಗ್ರಾಮ ಪಂಚಾಯತಿ ಸದಸ್ಯತ್ವ ಸ್ಥಾನ ಹಾಗೂ ಅಧ್ಯಕ್ಷ ಸ್ಥಾನದಿಂದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧೀನ ಕಾರ್ಯದರ್ಶಿಗಳು ತೆಗೆದು ಹಾಕಿ ಆದೇಶ ಹೊರಡಿಸಿರುತ್ತಾರೆ.