ಬೆಂಗಳೂರು
ಗ್ರಾಮ ಪಂಚಾಯಿತಿಗಳು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನ ವೆಚ್ಚ ಮಾಡುವ ಸಂಸ್ಥೆಗಳಾಗಿ ಉಳಿಯದೇ, ಕಾಯ್ದೆಯ ಅವಕಾಶಗಳನ್ನು ಚಲಾಯಿಸಿ ಸದೃಢವಾಗಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಸಚಿವ ಕೃಷ್ಣ ಭೈರೇಗೌಡ ಹೇಳಿದ್ದಾರೆ.
ಗ್ರಾಮಸ್ವರಾಜ್ ಮೂಲ ಆಶಯಗಳನ್ನು ತಲುಪಲು ಇರುವ ಅಡೆತಡೆಗಳನ್ನು ಗ್ರಾಮ ಪಂಚಾಯಿತಿಗಳು ಮೀರಿ ಬೆಳೆಯಬೇಕಾದ ಅವಶ್ಯಕತೆ ಇದೆ. ಅಗತ್ಯವೆನಿಸಿದರೆ, ಪಂಚಾಯಿತಿಗಳಿಗೆ ಶಕ್ತಿ ನೀಡುವ ನಿಟ್ಟಿನಲ್ಲಿ ಕಾಯ್ದೆಗೆ ಇನ್ನಷ್ಟು ತಿದ್ದುಪಡಿಗಳನ್ನು ತರಬೇಕು ಎಂದರು.
ಪಂಚಾಯತ್ ರಾಜ್ ಸಚಿವಾಲಯ, ಎನ್.ಐ.ಆರ್.ಡಿ ಹೈದರಾಬಾದ್ ಹಾಗೂ ಮೈಸೂರಿನ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆ ಸಹಯೋಗದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಆರ್ಥಿಕಾಭಿವೃದ್ಧಿ ಮತ್ತು ಆದಾಯ ವೃದ್ಧಿಸುವ ಸಾಮಥ್ರ್ಯ ಅಭಿವೃದ್ಧಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮ ಪಂಚಾಯಿತಿಗಳಿಂದ ನಿರೀಕ್ಷಿತ ರೀತಿಯಲ್ಲಿ ಯೋಜನೆಗಳ ತಯಾರಿ ಆಗುತ್ತಿಲ್ಲ. ಸ್ಥಳೀಯ ಸಂಪನ್ಮೂಲಗಳ ಕ್ರೋಢೀಕರಣ, ಸ್ಥಳೀಯ ಬೇಡಿಕೆಗಳು ಮತ್ತು ಆದ್ಯತೆಗಳನ್ನು ಯೋಜಿಸಿ ಅನುಷ್ಟಾನಕ್ಕೆ ತರುವಂತಾಗಬೇಕು ಎಂದು ನುಡಿದರು.
ರಾಷ್ಟ್ರದ ಬಹಳಷ್ಟು ಗ್ರಾಮ ಪಂಚಾಯಿತಿಗಳು ಸಂವಿಧಾನದತ್ತವಾಗಿ ಸ್ವತಂತ್ರ ಸರ್ಕಾರಗಳಾಗಿ ಅಸ್ತಿತ್ವಕ್ಕೆ ಬಂದಿದ್ದರೂ ಬೇರೆ ಬೇರೆ ಕಾರಣಗಳಿಗಾಗಿ, ಕಾರ್ಯ ನಿರ್ವಹಣೆಯಲ್ಲಿ ವೈಫಲ್ಯವನ್ನು ಎದುರಿಸುತ್ತಿವೆ. ಗ್ರಾಮ ಪಂಚಾಯಿತಿಗಳು ಬಲವರ್ಧನೆ ಹಾಗೂ ಕ್ರಿಯಾಶೀಲ ಕಾರ್ಯ ನಿರ್ವಹಣೆಗೆ ಅನುವಾಗುವಂತೆ ಸದರಿ ಕಾರ್ಯಾಗಾರದಲ್ಲಿ ಚರ್ಚಿಸುವ ಅಗತ್ಯವಿದೆ ಎಂದು ಕೃಷ್ಣ ಭೈರೇಗೌಡ ಅಭಿಪ್ರಾಯಪಟ್ಟರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಲ್.ಕೆ.ಅತೀಕ್, ಪಂಚಾಯಿತಿಗಳು ಸಾಂಪ್ರದಾಯಿಕವಾಗಿ ಮೂಲ ಸೌಕರ್ಯಗಳಾದ ನೀರು, ನೈರ್ಮಲ್ಯ, ಬೀದಿ ದೀಪಗಳ ಚಟುವಟಿಕೆಗಳಿಗೆ ಸೀಮಿತವಾಗದೇ, ತನ್ನ ವ್ಯಾಪ್ತಿಯ ಅಧಿಕಾರ, ಅವಕಾಶಗಳನ್ನು ಬಳಸಿಕೊಳ್ಳಬೇಕಾಗಿದೆ. ಸಾಕಷ್ಟು ಗ್ರಾಮೀಣ ಆರ್ಥಿಕ ಸಂಪನ್ಮೂಲ ವೃದ್ಧಿಗೆ ನೆರವಾಗುವಂತೆ, ಸಾಮಥ್ರ್ಯಾಭಿವೃದ್ಧಿ ಕೊರತೆಗಳನ್ನು ಇಂತಹ ಕಾರ್ಯಾಗಾರಗಳು ನೀಗಿಸುವ ಪ್ರಯತ್ನ ಮಾಡುತ್ತಿದೆ ಎಂದರು.
ಪಂಚಾಯತ್ ರಾಜ್ ಮಂತ್ರಾಲಯ ಭಾರತ ಸರ್ಕಾರದ ವಿಶೇಷ ಕಾರ್ಯದರ್ಶಿಗಳಾದ ಬಾಲಪ್ರಸಾದ್, ಮಂತ್ರಾಲಯವು ರಾಷ್ಟ್ರೀಯ ಗ್ರಾಮ ಸ್ವರಾಜ್ ಅಭಿಯಾನ ಅಡಿಯಲ್ಲಿ ಸಾಕಷ್ಟು ಗ್ರಾಮೀಣಾಭಿವೃದ್ಧಿ ಚಟುವಟಿಕೆಗಳಿಗೆ ಅವಕಾಶ ಮಾಡಿಕೊಟ್ಟಿದೆ. ಗ್ರಾಮೀಣ ಪ್ರದೇಶದಲ್ಲಿ ಲಭ್ಯವಾಗುವ ಸಾಕಷ್ಟು ಸಂಪನ್ಮೂಲಗಳನ್ನು ಸದ್ಭಳಕೆ ಮಾಡಿಕೊಂಡು ಗ್ರಾಮೀಣ ಆರ್ಥಿಕ ಚಟುವಟಿಕೆಗಳು ವೃದ್ಧಿಸಲು ಗ್ರಾಮ ಪಂಚಾಯಿತಿಗಳು ಮುಂದಾಗಬೇಕೆಂದು ಕರೆ ನೀಡಿದರು.