ಹರಿಹರ :
ಇಂದಿನಿಂದ ಒಂದು ವಾರ ವಿಜೃಂಭಣೆಯ ಗ್ರಾಮದೇವತೆ ಜಾತ್ರೆ, ಇಂದು ಮಂಗಳವಾರದಿಂದ ಒಂದು ವಾರಗಳ ಕಾಲ ಗ್ರಾಮದೇವತೆ (ಈಗಿನ ನಗರ ದೇವತೆ) 66 ಹಳ್ಳಿಯ ಒಡತಿ ಎಂದೇ ಖ್ಯಾತಿ ಹೊಂದಿರುವ ಊರಮ್ಮನ ಜಾತ್ರೆಯು ಅತ್ಯಂತ ವಿಜೃಂಭಣೆಯಿಂದ ನಡೆಸಲು ಸಕಲ ರೀತಿಯಿಂದ ಸಜ್ಜಾಗಿದೆ.ಊರಮ್ಮನ ಜಾತ್ರೆಯ ದೃಷ್ಟಿಯಿಂದ ನಗರವು ಮುಖ್ಯವಾಗಿ ಮಾಜೇನಹಳ್ಳಿ ಹಾಗೂ ಕಸಬಾ ಎಂಬ ಎರಡು ಗ್ರಾಮಗಳಿಂದ ಆಚರಿಸಲಾಗುತ್ತದೆ.
ಎರಡು ಗ್ರಾಮಗಳು ಸಂಗಮಿಸುವ ಗಡಿ ರೇಖೆಯಲ್ಲಿ ಗ್ರಾಮದೇವತೆಯ ಮಂಟಪವನ್ನು ಹಾಕಲಾಗುತ್ತದೆ.ಈ ಗಡಿರೇಖೆಯು ಶ್ರೀ ಹರಿಹರೇಶ್ವರ ದೇವಸ್ಥಾನದ ರಸ್ತೆಯಲ್ಲಿ ಬರುತ್ತದೆ.ಸಾಮಾನ್ಯವಾಗಿ ಗ್ರಾಮದೇವತೆ ಹಬ್ಬ ಆಚರಣೆಯ ಸಂದರ್ಭದಲ್ಲಿ ಒಂದು ಚರಗವನ್ನು ಊರಿನ ಸುತ್ತಲೂ ಚಲ್ಲಲಾಗುತ್ತದೆ.ಆದರೆ ಹರಿಹರದಲ್ಲಿ ಎರಡು ಚರಗಗಳು ನಡೆಯುವುದರಿಂದ ಈ ಹಬ್ಬವುತುಂಬಾ ವಿಶಿಷ್ಟವಾಗಿದ್ದು,ರೊಮಾಂಚನಕಾರಿಯಾಗಿರುತ್ತದೆ.
ಆ ಕಾಲದಲ್ಲಿ ಮಾರಿ ಬೇನೆಗಳು ಎಂದು ಕರೆಸಿಕೊಳ್ಳುತ್ತಿದ್ದ ಪ್ಲೇಗ್ (ಇಲಿ ಜ್ವರ) ಕಾಲರ (ವಾಂತಿ-ಭೇದಿ) ದಂತಹ ಮಾರಕ ಬೇನೆಗಳು ಬಂದಾಗ ಜನರು ಹೆದರಿ ಊರಿನ ದೇವತೆಗೆ ಹಬ್ಬ ಜಾತ್ರೆ ಆಚರಿಸುವ ಸಂಪ್ರದಾಯಗಳು ಬೆಳೆದು ಬಂದಿರುತ್ತವೆ.
ಶತಮಾನಗಳಿಂದ ಹರಿಹರ ಗ್ರಾಮದೇವತೆಯ ಜಾತ್ರೆಯನ್ನು ಎರಡು ವರ್ಷ ತುಂಬಿ ಮೂರನೇ ವರ್ಷದ ಆರಂಭದಲ್ಲಿ ಆಚರಿಸಲಾಗುತ್ತಿತ್ತು, ಆದರೆ ಈ ಸಾರಿಯಿಂದ ಕೆಲವು ಕಾರಣಗಳಿಗಾಗಿ ನಾಲ್ಕು ವರ್ಷ ತುಂಬಿ ಐದನೇ ವರ್ಷದ ಆರಂಭದಲ್ಲಿ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ.
ಈ ಬಾರಿಯ ಜಾತ್ರೆಯ ವಿಶೇಷವೆಂದರೆ ನಗರದಲ್ಲಿ ಸಿಬಾರ ವೃತ್ತದ ಬಳಿ ಮೂಲ ದೇವತೆ ದೇವಸ್ಥಾನ (ಕಸಬಾ ಗ್ರಾಮದೇವತೆ),ನಗರದ ಮಧ್ಯಭಾಗದಲ್ಲಿ ಕಸಬಾದ ಗ್ರಾಮದೇವತೆ ಹಾಗೂ ಶಿವಮೊಗ್ಗ ರಸ್ತೆಯಲ್ಲಿ ಮಾಜೇನಹಳ್ಳಿ ಗ್ರಾಮ ದೇವತೆ(ಗೋಲ್ಡನ್ ಟೆಂಪಲ್)ಎಂಬುದಾಗಿ ಮೂರು ದೇವಸ್ಥಾನಗಳಿವೆ.
(ನಗರದ ಇತರೆ ಭಾಗಗಳಲ್ಲಿ ಹಲವಾರು ಗ್ರಾಮದೇವತೆಯ ದೇವಸ್ಥಾನಗಳಿದ್ದು ಅವುಗಳು ಮುಖ್ಯ ದೇವಸ್ಥಾನದ ಪರಿಮಿತಿಯಲ್ಲಿ ಇರುವುದಿಲ್ಲ)ಕಳೆದ ಬಾರಿ ಮುಖ್ಯ ದೇವತೆಗೆ ನಿರ್ಮಿಸಲಾಗಿರುತ್ತದೆ.ಈ ಸಾರಿ ವಿಶೇಷವಾಗಿ ಕಸಬಾ ಹಾಗೂ ಮಾಜೇನಹಳ್ಳಿ ದೇವತೆಗಳಿಗೆ ಸುಮಾರು 27 ಲಕ್ಷ ರೂ ವೆಚ್ಚದಲ್ಲಿ ಎರಡು ಸುವರ್ಣ ಕಿರೀಟಗಳನ್ನು ದೇವತೆಗಳಿಗೆ ಸಮರ್ಪಿಸಲಾಗುವುದು.ವಿಶೇಷವಾಗಿ ಎರಡು ಕಡೆ ಬಂಡಿ ಗಾಲಿ (ಗಾಡಾ)ಓಟದ ಸ್ಪರ್ಧೆಗಳು ನಡೆಯುತ್ತವೆ.28 ರ ಗುರುವಾರದಿಂದ 30 ರ ಶನಿವಾರದವರೆಗೆ ಗಾಂಧಿ ಮೈದಾನದಲ್ಲಿ ಕುಸ್ತಿ ಪಂದ್ಯಗಳನ್ನು ನಡೆಸಲಾಗುವುದು.
ಶಿವಮೊಗ್ಗ ರಸ್ತೆಯ ಫಕೀರ ಸ್ವಾಮಿ ಮಠದ ಹತ್ತಿರ ನಿರ್ಮಿಸಿರುವ ಸುಂದರ ರಂಗಮಂಟಪದಲ್ಲಿ ವಿವಿಧ ಮನೋರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.26 ರ ಮಂಗಳವಾರ ಬೆಳಗಿನ ಜಾವ 3 ಗಂಟೆಗೆ ಅಮ್ಮನವರಿಗೆ ವಿಶೇಷ ಅಭಿಷೇಕ ಅಲಂಕಾರ ಉಡಿ ತುಂಬುವ ಕಾರ್ಯಕ್ರಮ, ಬೆಳಗ್ಗೆ ಕಸಬಾ ಹಾಗೂ ಮಾಜೆನಹಳ್ಳಿ ಗ್ರಾಮದ ವತಿಯಿಂದ ಬಳೆ ಪೂಜೆ, ಕೊಪ್ಪರಿಗೆ ಪೂಜೆ ನಂತರ ಬಂಡಿಯೊಂದಿಗೆ ಚರಗದ ಜೋಳವನ್ನು ಚೌಕಿ ಮನೆಗೆ ತರಲಾಗುತ್ತದೆ.ಸಂಜೆ 4 ಗಂಟೆಗೆ ಭವ್ಯವಾದ ಮಂಟಪಕ್ಕೆ ಮೆರವಣಿಗೆ ಮೂಲಕ ಚೌಕಿಮನೆಗೆ ಅಮ್ಮನವರನ್ನು ಕರೆತರಲಾಗುವುದು.
27 ರ ಬುಧವಾರದಂದು ಬೆಳಗಿನ ಜಾವ ಹರಿಜನ ಕೇರಿಯಿಂದ ಘಟ್ಟಿ ಗಡಿಗೆ ಹಾಗೂ ಕಣಕದ ಹಿಟ್ಟಿನಿಂದ ಮಾಡಿದ ಕೋಣವನ್ನು ಮೆರವಣಿಗೆ ಮೂಲಕ ಚೌಕಿ ಮನೆಗೆ ಕರೆತಂದು ನಂತರ ಕಣಕದ ಹಿಟ್ಟಿನಿಂದ ಮಾಡಿದ ಕಾರಣ ಕೋಣನ ವದೆ (ಬಲಿ)ಕೊಡಲಾಗುವುದು ನಂತರ ಚರಗ ಚೆಲ್ಲುವುದು.
28ರ ಗುರುವಾರದಂದು ಕಸಬಾ ಹಾಗೂ ಮಾದೇನಹಳ್ಳಿ ಗ್ರಾಮಸ್ಥರಿಂದ ಬೆಲ್ಲದ ಬಂಡಿಗಳ ಮೆರವಣಿಗೆ ಹಾಗೂ ರೈತ ಬಾಂಧವರಿಂದ ಹೊಲಸು ಪಡೆಯುವ ಕಾರ್ಯಕ್ರಮ ನಡೆಯಲಿದೆ.30 ರ ಶನಿವಾರದಂದು ಸಂಜೆ 7 ಗಂಟೆಗೆ ವಿದ್ಯುತ್ ದೀಪಾಲಂಕಾರಗಳಿಂದ ಹೂವಿನಿಂದ ನಿರ್ಮಿತವಾದ ಭವ್ಯ ಮಂಟಪದಲ್ಲಿ ಗ್ರಾಮದೇವತೆಯ ಮೆರವಣಿಗೆಯನ್ನು ನಗರದ ಮುಖ್ಯ ಬೀದಿಗಳಲ್ಲಿ ನಡೆಸಲಾಗುವುದು.
ಶ್ರೀಗ್ರಾಮ ದೇವತೆ ಉತ್ಸವ ಸಮಿತಿಯವರು ವತಿಯಿಂದ ನಡೆಸಲಾಗುವ ಈ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗುವರು ಎಂಬ ಮಾಹಿತಿ ಲಭ್ಯವಾಗಿರುತ್ತದೆ.