ಹಿರಿಯೂರು :
ಪ್ರತಿಯೊಬ್ಬರಲ್ಲೂ ವಿಶೇಷ ಆಸಕ್ತಿ ಮತ್ತು ಹವ್ಯಾಸಗಳಿರುತ್ತವೆ. ಇಂದಿನ ಮೊಬೈಲ್ ಹಾಗೂ ವಿದ್ಯುನ್ಮಾನ ಯುಗದಲ್ಲಿ ಗ್ರಾಮೀಣ ಕಲೆಗಳಾದ ಹಾಡುಗಾರಿಕೆ, ನೃತ್ಯ, ವಾದ್ಯಗಳನ್ನು ನುಡಿಸುವುದು, ಸೋಬಾನೆ ಪದ, ಕಥೆ ಹೇಳುವ ಕಲೆಗಳು ಜನರಿಂದ ದೂರವಾಗುತ್ತಿವೆ. ಅದಕ್ಕಾಗಿ ಗ್ರಾಮೀಣ ಕಲೆಗಳನ್ನು ಉಳಿಸಿ, ಬೆಳೆಸುವ ಮೂಲಕ ಮುಂದಿನ ತಲೆಮಾರಿಗೂ ಪರಿಚಯಿಸಬೇಕಾಗಿದೆ ಎಂಬುದಾಗಿ ಮಸ್ಕಲ್ ಜಿಲ್ಲಾ ಪಂಚಾಯತ್ ಸದಸ್ಯೆ ಶ್ರೀಮತಿ ಶಶಿಕಲಾ ಸುರೇಶ್ಬಾಬು ಹೇಳಿದರು.
ತಾಲ್ಲೂಕಿನ ಸೊಂಡೇಕೆರೆ ಗ್ರಾಮದಲ್ಲಿ ಸದ್ಗುರು ನರಹರಿ ಭಜನಾ ಮಂಡಳಿ ವತಿಯಿಂದ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಭಜನೆ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಈ ನಿಟ್ಟಿನಲ್ಲಿ ಗ್ರಾಮೀಣ ಕಲೆಗಳನ್ನು ಉಳಿಸಬೇಕಾದರೆ ಈ ಗ್ರಾಮೀಣ ಕಲೆಗಳನ್ನು ಕುರಿತು ಕಾರ್ಯಕ್ರಮಗಳು, ಸ್ಪರ್ಧೆಗಳು, ಹೆಚ್ಚೆಚ್ಚು ನಡೆಯಬೇಕು ಅಲ್ಲದೆ ಗ್ರಾಮೀಣ ಕಲಾವಿದರಿಗೆ ಅವರ ಕಲೆಗಳನ್ನು ಪರಿಚಯಿಸಲು ಸಂಘಸಂಸ್ಥೆಗಳು ಹಾಗೂ ಸರ್ಕಾರ ಉತ್ತಮ ಅವಕಾಶಗಳನ್ನು ಕಲ್ಪಿಸಬೇಕಿದೆ ಎಂಬುದಾಗಿ ಅವರು ಹೇಳಿದರು.
ಈ ಕಾರ್ಯಕ್ರಮದ ದಿವ್ಯಸಾನಿಧ್ಯವನ್ನು ಸಕ್ರಪ್ಪ ಸದ್ಗುರುಗಳು ವಹಿಸಿದ್ದರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಲಕ್ಷ್ಮೀದೇವಿ, ಮಹಂತೇಶ್, ನಿಂಗಪ್ಪ, ಸುರೇಶ್, ನಾಗರಾಜು, ಗ್ರಾಮದ ಮುಖಂಡರಾದ ಮಂಜಣ್ಣ, ಮಹಾಂತೇಶ್, ತಿಪ್ಪೇರುದ್ರಪ್ಪ, ನಾಗರತ್ನಮ್ಮ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
