ಗ್ರಾಮೀಣ ಭಾಗದಲ್ಲಿ ಬೋರ್‍ವೆಲ್ ಲಾಭಿ!

ದಾವಣಗೆರೆ

      ಜಿಲ್ಲೆಯಲ್ಲಿ ಬೋರ್‍ವೆಲ್ ಲಾಭಿ ನಡೆಯುತ್ತಿದ್ದು, ಕುಡಿಯುವ ನೀರಿನ ಸಮಸ್ಯೆ ಇರುವ ಕಡೆಗಳಲ್ಲಿ ಟ್ಯಾಂಕರ್ ಮೂಲಕವೇ ನೀರು ಸರಬರಾಜು ಮಾಡಬೇಕೆಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಸ್.ಆರ್.ಉಮಾಶಂಕರ್ ಅಧಿಕಾರಿಗಳಿ ತಾಕೀತು ಮಾಡಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಜಿಲ್ಲೆಯ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ಮತ್ತು ಬರಪರಿಸ್ಥಿತಿಯ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬೇಸಿಗೆಯ ಸಂದರ್ಭದಕ್ಕು ಕುಡಿಯುವ ನೀರಿನ ಸಮಸ್ಯೆ ಇರುವುದನ್ನೇ ನೆಪವಾಗಿಟ್ಟುಕೊಂಡು ಬೋರ್‍ವೆಲ್ ಮಾಲೀಕರು ದುರುಪಯೋಗ ಪಡೆಸಿಕೊಂಡು, ಲಾಬಿ ನಡೆಸುತ್ತಾರೆ.

      ಅಲ್ಲದೇ, ಬೋರ್ ಹಾಕಿಸಿದರೂ ಒಂದು, ಒಂದೂವರೆ ಇಂಚು ನೀರು ಸಿಕ್ಕರೂ ಶಾಶ್ವತವಾಗಿ ನೀರು ಇರದೇ, ವಿಫಲ ಆಗುವ ಸಾಧ್ಯತದೆ ಇದೆ. ಆದ್ದರಿಂದ, ಬೋರ್‍ವೆಲ್‍ಗಳಿಗಿಂತ ಟ್ಯಾಂಕರ್ ಮೂಲಕವೇ ನೀರು ಪೂರೈಸುವುದು ಸೂಕ್ತ ಎಂದರು.ನೀರೇ ಸಿಗದಿರುವ ಕಡೆಯಲ್ಲಿ ಕೊಳವೆಬಾವಿ ಕೊರೆಸಿಯೂ ಉಪಯೋಗವಿಲ್ಲ. ಬೋರ್‍ವೆಲ್ ಕೊರೆಸಿದರೂ ಫ್ಲೊರೈಡ್‍ಯುಕ್ತ ಗಡಸು ನೀರು ಸಿಗುವ ಸಾಧ್ಯತೆ ಇದೆ.

       ಹೀಗಾಗಿ ಟ್ಯಾಂಕರ್ ಮೂಲಕವೇ ಶುದ್ಧ ಕುಡಿಯುವ ನೀರು ಪೂರೈಸಿ, ಕುಡಿಯುವ ನೀರಿಗೆ ಜಿಲ್ಲೆಗೆ ಬಿಡುಗಡೆಯಾಗಿರುವ ಅನುದಾನವನ್ನೇ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳನ್ನು ಪೂರ್ಣಗೊಳಿಸಿದರೆ, ಜಿಲ್ಲೆಯ ಸಾವಿರ ಹಳ್ಳಿಗಳಿಗೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವಂತಾಗಿ, ಕುಡಿಯುವ ನೀರಿಗೆ ಶಾಶ್ವತ ಪರಿಹಾರವೂ ದೊರೆಯುವಂತಾಗಲಿದೆ ಎಂದು ಹೇಳಿದರು.

        ಈ ವೇಳೆ ಮಾತನಾಡಿದ ದಾವಣಗೆರೆ ತಾ.ಪಂ. ಇಒ ಎಲ್.ಎಸ್.ಪ್ರಭುದೇವ್, ಕುಡಿಯುವ ನೀರಿನ ಸಮಸ್ಯೆ ಇರುವ ಹಳ್ಳಿಗಳ ಜನರು ಟ್ಯಾಂಕರ್‍ಗಿಂತ ಕೊಳವೆ ಬಾವಿಯೇ ಕೊರೆಸುವಂತೆ ಬಸುತ್ತಾರೆ ಎನ್ನುತ್ತಿದ್ದಂತೆ, ಮಧ್ಯ ಪ್ರವೇಶಿಸಿದ ಉಮಾಶಂಕರ್, ಎಲ್ಲವನ್ನೂ ಏಕೆ ಜನರ ಮೇಲೆ ಬಿಡುತ್ತೀರಿ, ಸರ್ಕಾರದ ಅನುದಾನ ಫೋಲಾಗದಂತೆ ಕಾರ್ಯನಿರ್ವಹಿಸಿ ಎಂದು ಸೂಚಿಸಿದರು.

         ಇದಕ್ಕೂ ಮುನ್ನ ಸಭೆಯಲ್ಲಿ ಮಾತನಾಡಿದ ಗ್ರಾಮೀಣ ಕುಡಿಯುವ ನೀರು ಸರಬರಾಜು ವಿಭಾಗದ ಕಾರ್ಯಪಾಲಕ ಅಭಿಯಂತರ ರಾಜು ಮಾತನಾಡಿ, ಜಿಲ್ಲೆಯಲ್ಲಿ 118 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಿದ್ದು, ಈ ಗ್ರಾಮಗಳ ಪೈಕಿ 58 ಗ್ರಾಮಗಳಲ್ಲಿ ಟ್ಯಾಂಕರ್‍ಗಳ ಮೂಲಕ ಹಾಗೂ 60 ಗ್ರಾಮಗಳಲ್ಲಿ ಖಾಸಗಿ ಬೊರವೆಲ್ ಮೂಲಕ ನೀರು ಪೂರೈಸಲಾಗುತ್ತಿದೆ. ಕಳೆದ ಮೂರು ತಿಂಗಳುಗಳಲ್ಲಿ 382 ಕೊಳವೆ ಬಾವಿ ಕೊರೆಸಲಾಗಿದ್ದು, ಈ ಪೈಕಿ 25 ಬೋರ್‍ವೆಲ್ ವಿಫಲಗೊಂಡಿದ್ದು, ಇನ್ನುಳಿದ ಎಲ್ಲಾ ಬೋರ್‍ವೆಲ್‍ಗಳು ಸಫಲವಾಗಿವೆ ಎಂದು ಮಾಹಿತಿ ನೀಡಿದರು.

         ನಗರ ಸ್ಥಳೀಯ ಸಂಸ್ಥೆಗಳ ಕುಡಿಯುವ ನೀರು ಸಬರಾಜು ವಿಭಾಗದ ಅಧಿಕಾರಿ ಮಾತನಾಡಿ, ನಗರ ಪ್ರದೇಶಗಳಲ್ಲಿ ಜಗಳೂರು ಒಂದರಲ್ಲಿ ಮಾತ್ರ ಕುಡಿಯುವ ನೀರಿನ ಸಮಸ್ಯೆ ಇದ್ದು, 15 ದಿನಗಳಿಗೊಮ್ಮೆ ನೀರು ಪೂರೈಸಲಾಗುತ್ತಿದೆ. ಇನ್ನೂ ಎಲ್ಲಾ ಕಡೆ ನೀರಿಗೆ ಯಾವುದೇ ಸಮಸ್ಯೆ ಇಲ್ಲ ಎಂದರು.

         ಈ ವೇಳೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಸ್.ಆರ್.ಉಮಾಶಂಕರ್ ಮಾತನಾಡಿ, ಕುಡಿಯುವ ನೀರನ್ನು ಸಬರಾಜು ಮಾಡುತ್ತಿರುವ ಕೆರೆಗಳನ್ನು ಭರ್ತಿ ಮಾಡಿಕೊಂಡು, ಮುಂದೆ ಕುಡಿಯುವ ನೀರಿನ ಸಮಸ್ಯೆ ಬಾರದಂತೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿ, ಭದ್ರಾ ಜಲಾಶಯದಲ್ಲಿ ಇನ್ನೂ ಎಷ್ಟು ನೀರು ಶೇಖರಣೆ ಇದೆ, ಎಷ್ಟು ದಿನ ಪೂರೈಸಬಹುದು ಎಂದು ಪ್ರಶ್ನಿಸಿದರು.

         ಇದಕ್ಕೆ ಉತ್ತರಿಸಿದ ಭದ್ರಾ ನಾಲಾ ವಿಭಾಗದ ಕಾರ್ಯಪಾಲಕ ಅಭಿಯಂತರ ಕೊಟ್ರೇಶ್, ಭದ್ರಾ ಜಲಾಶಯದಲ್ಲಿ ಇನ್ನೂ 159 ಅಡಿ ಅಂದರೆ, ಇನ್ನೂ 40 ಟಿಎಂಸಿ ನೀರಿದ್ದು, ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಯಾವುದೇ ಸಮಸ್ಯೆ ಎದುರಾಗುವುದಿಲ್ಲ. ಮೇ.7ರ ವರೆಗೂ ಭದ್ರಾ ನಾಲೆಯಲ್ಲಿ ನಿರಂತರವಾಗಿ ನೀರು ಹರಿಸಲಾಗುವುದು ಎಂದರು.

        ಉಸ್ತುವಾರಿ ಕಾರ್ಯದರ್ಶಿ ಉಮಾಶಂಕರ್ ಮಾತನಾಡಿ, ಜಿಲ್ಲೆಯಲ್ಲಿ ದನಕರುಗಳಿಗೆ ಮೇವು ಲಭ್ಯತೆ ಹೇಗಿದೆ ಎಂದು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಪಶುಸಂಗೋಪನಾ ಇಲಾಖೆಯ ಅಧಿಕಾರಿ, ಇನ್ನೂ 13 ವಾರಗಳಿಗೆ ಆಗುವಷ್ಟು ಮೇವು ದಾಸ್ತಾನಿದೆ. ಜಿಲ್ಲೆಯಲ್ಲಿ ಇಳುವರಿ ಬಂದಿಲ್ಲ. ಆದರೆ, ಜೋಳ ಮತ್ತು ಮೆಕ್ಕೆಜೋಳದ ಸಪ್ಪಿ ಬಂದಿರುವುದರಿಂದ ಮೇವಿಗೆ ಸಧ್ಯ ಸಮಸ್ಯೆ ಇಲ್ಲ. ಆದರೆ, ಮುಂದೆ ಸಮಸ್ಯೆ ಎದುರಾಗಬಹುದು ಎಂದರು.

         ಈ ವೇಳೆ ಮಾತನಾಡಿದ ಉಮಾಶಂಕರ್, ಜಿಲ್ಲೆ ಸತತವಾಗಿ ಬರಗಾಲಕ್ಕೆ ತುತ್ತಾಗಿರುವುದರಿಂದ ದನಕರುಗಳನ್ನು ಸಾಕದಷ್ಟು ರೈತರ ಪರಿಸ್ಥಿತಿ ಹದಗೆಟ್ಟು ಹೋಗಿದೆ. ಆದ್ದರಿಂದ ಜಗಳೂರು ಹಾಗೂ ಹರಪನಹಳ್ಳಿಗಳಲ್ಲಿ ಗೋಶಾಲೆ ತೆರೆಯಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.

         ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ ಸಂಬಂಧಸಿದಂತೆ ಮಾತನಾಡಿದ ಶಶಿಧರ್, ಯೋಜನೆಯಡಿಯಲ್ಲಿ ಇನ್ನೂ 21 ಕೋಟಿ ರೂ. ಕೂಲಿ ಹಣ ಹಾಗೂ 67 ಕೋಟಿ ರೂ. ಮೆಟಿರಿಯಲ್ ಖರೀದಿ ಹಣ ಬಾಕಿ ಬರಬೇಕಿದೆ ಎಂದು ಸಭೆಗೆ ಮಾಹಿತಿ ನೀಡಿದರು.

           ಜಗಳೂರು ತಾ.ಪಂ. ಇಒ ಮಾತನಾಡಿ, ತಾಲೂಕಿನಲ್ಲಿ ಇರುವ 43 ಸಾವಿರ ಜಾಬ್‍ಕಾರ್ಡ್‍ಗಳ ಪೈಕಿ, 32 ಸಾವಿರ ಜಾಬ್‍ಕಾರ್ಡ್‍ಗಳು ಆಕ್ಟೀವ್ ಆಗಿದ್ದು, 17.57 ಲಕ್ಷ ಮಾನವ ದಿನಗಳಲ್ಲಿ ಕೂಲಿಕಾರರಿಗೆ ಕೆಲಸ ನೀಡಲಾಗಿದೆ ಎಂದರು.
ಈ ವೇಳೆ ಮಾತನಾಡಿದ ಉಸ್ತುವಾರಿ ಕಾರ್ಯದರ್ಶಿ ಉಮಾಶಂಕರ್, ನಾಲ್ಕು ವರ್ಷದ ಹಿಂದೆ ಆಗಿದ್ದ ಸಮಸ್ಯೆಯಂತೆ ಕೆಲಸ ಆಗಿವೆಯೋ, ಹೇಗೆ? ಏಕೆಂದರೆ, ಹಿಂದೆ ನಿಮ್ಮ ತಾಲೂಕಿನಲ್ಲಿ ಅಕ್ರಮ ನಡೆದಿದ್ದ ಪರಿಣಾಮ ನಿಮ್ಮ ತಾಲೂಕು ಎಲ್ಲಾ ರಾಜ್ಯಗಳಿಗೂ ರಾಷ್ಟ್ರ ಮಟ್ಟದಲ್ಲಿ ಮುಂಚೂಣಿಯಲ್ಲಿದೆ. ಒಳ್ಳೆಯ ಕೆಲಸ ಮಾಡಿದರೆ ಪರವಾಗಿಲ್ಲ. ಆದರೆ, ತಪ್ಪು ಕೆಲಸ ಮಾಡಿದರೆ, ಬಹಳ ಕಷ್ಟ ಎಂದು ಅನುಮಾನ ವ್ಯಕ್ತಪಡಿಸಿದರು.

          ಈ ವೇಳೆ ಯೋಜನಾಧಿಕಾರಿ ಟಿ.ಆಂಜನೇಯ ಮಾತನಾಡಿ, ಈ ತಾಲೂಕಿನಲ್ಲಿ ಕೂಲಿ ಕಾರ್ಮಿಕರ ಸಂಖ್ಯೆ ಹೆಚ್ಚಿದೆ. ನಿನ್ನೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಏಳು ಕಡೆಗಳಲ್ಲಿ ಕೆರೆ ಹೂಳು ಎತ್ತುವ ಕಾಮಗಾರಿ ನಡೆಯುತಿತ್ತು ಎಂದರು. ಉಸ್ತುವಾರಿ ಕಾರ್ಯದರ್ಶಿ ಉಮಾಶಂಕರ್ ಮಾತನಾಡಿ, ಬೇಸಿಗೆ ಶಿಬಿರದ ಮಾದರಿಯಲ್ಲಿ ಸರ್ಕಾರಿ ಶಾಲೆಗಳಲ್ಲಿ ಕ್ಯಾಂಪ್ ಮಾಡಲಾಗುವುದು. ಆ ಕ್ಯಾಂಪ್‍ನಲ್ಲಿ ಯಾವುದೇ ಶಾಲೆಗಳ ಮಕ್ಕಳು ಭಾಗವಹಿಸಿದರೂ ಮುಕ್ತ ಅವಕಾಶ ನೀಡಬೇಕು. ಹಾಗೂ ಬರಗಾಲದ ಕಾರಣ ಬೇಸಿಗೆ ರಜೆಯಲ್ಲೂ ಶಾಲಾ ಮಕ್ಕಳಿಗೆ ಮಧ್ಯಾಹ್ನ ಉಪಹಾರ ಮುಂದುವರೆಸಿದ್ದು, ಯಾವುದೇ ಮಕ್ಕಳು ಬಂದು ಉಪಹಾರ ಕೇಳಿದರೂ ನೀಡಬೇಕು. ಏಕೆಂದರೆ, ಅವರೆಲ್ಲರೂ ನಮ್ಮ ದೇಶದ ಮಕ್ಕಳು ಎಂದರು.

         ಯಾವುದೇ ಸಮಸ್ಯೆ ಬಾರದಂತೆ, ಸುವ್ಯವಸ್ಥಿತವಾಗಿ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಬೇಕೆಂದು ಡಿಡಿಪಿಐ ಸಿ.ಆರ್.ಪರಮೇಶ್ವರಪ್ಪ ನವರಿಗೆ ಸೂಚಿಸಿದರು.ಸಭೆಯಲ್ಲಿ ಜಿಲ್ಲಾಧಿಕಾರಿ ಜಿ.ಎನ್.ಶಿವಮೂರ್ತಿ, ಜಿಲ್ಲಾ ಪಂಚಾಯತ್ ಸಿಇಒ ಹೆಚ್.ಬಸವರಾಜೇಂದ್ರ, ಉಪ ಕಾರ್ಯದರ್ಶಿ ಭೀಮಾ ನಾಯ್ಕ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಕೆ.ಹೆಚ್.ವಿಜಯಕುಮಾರ್, ಜಂಟಿ ಕೃಷಿ ನಿರ್ದೇಶಕ ಶರಣಪ್ಪ ಮುದಗಲ್, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಲಕ್ಷ್ಮೀಕಾಂತ್ ಬೊಮ್ಮಾನಾರ್, ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕಿ ಕೌಸರ್ ರೇಷ್, ಡಿಡಿಪಿಐ ಸಿ.ಆರ್.ಪರಮೇಶ್ವರಪ್ಪ, ಡಿಹೆಚ್‍ಒ ಡಾ.ತ್ರಿಪುಲಾಂಭ ಮತ್ತಿತರರು ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link