ದಾವಣಗೆರೆ
ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಪ್ರದೇಶದಲ್ಲೂ ಕನ್ನಡ ಮಾಯಾವಾಗುತ್ತಿದೆ ಎಂದು ಹಿರಿಯ ಸಾಹಿತಿ, 8ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಆರ್.ಜಿ.ಹಳ್ಳಿ ನಾಗರಾಜ್ ಆತಂಕ ವ್ಯಕ್ತಪಡಿಸಿದರು.
ತಾಲೂಕಿನ ಆನಗೋಡು ಗ್ರಾಮದ ಶ್ರೀಮರುಳುಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ಶುಕ್ರವಾರ ನಡೆದ ಎಂಟನೇ ದಾವಣಗೆರೆ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೆಲವು ವರ್ಷಗಳಿಂದ ಕನ್ನಡವನ್ನು ಗ್ರಾಮೀಣ ಪ್ರದೇಶದ ಮಕ್ಕಳಷ್ಟೇ ಉಳಿಸುತ್ತಿದ್ದಾರೆಂಬ ಮಾತನ್ನು ಕೇಳುತ್ತಲೇ ಬಂದಿದ್ದೇವೆ. ಆದರೆ, ಇತ್ತೀಚಿನ ವಿದ್ಯಮಾನ ಗಮನಿಸಿದರೆ, ಗ್ರಾಮೀಣ ಪ್ರದೇಶಗಳಲ್ಲಿಯೂ ಕನ್ನಡ ಮಾಯಾವಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಕನ್ನಡ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕ್ಷೀಣಿಸಲು ಪೋಷಕರಿಗೆ ಇಂಗ್ಲೀಷ್ ಭಾಷೆಯ ಮೇಲಿರುವ ವ್ಯಾಮೋಹವೇ ಪ್ರಮುಖ ಕಾರಣವಾಗಿದೆ. ಇಂಗ್ಲೀಷ್ ಕಲಿತರೆ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗ ದೊರೆಯುತ್ತದೆಂಬ ಹಸಿ ಸುಳ್ಳನ್ನು ಹಬ್ಬಿ ಸುತ್ತಿರುವುದು ನಿಜಕ್ಕೂ ದುರಂತವಾಗಿದೆ ಎಂದ ಅವರು, ನಮ್ಮ ಹಳ್ಳಿಯಲ್ಲಿ ಆರೇಳು ದಶಕಗಳ ಹಿಂದೆಯೇ ಕನ್ನಡ ಮಾಧ್ಯಮದಲ್ಲಿ ಕಲಿತವರು ಡಾಕ್ಟರ್, ಉಪನ್ಯಾಸಕರು, ಇಂಜಿನಿಯರ್ ಆಗಿ ಬದುಕು ಕಟ್ಟಿಕೊಂಡಿರುವ ಸಾಕಷ್ಟು ನಿದರ್ಶನಗಳಿವೆ ಎಂದರು.
ಭಾರತರತ್ನ ಪುರಸ್ಕತ ಪ್ರೊ.ಸಿ.ಎನ್.ಆರ್. ರಾವ್ ಅವರು ಜಗತ್ತಿನ ದೊಡ್ಡ ವಿಜ್ಞಾನಿಯಾಗಿದ್ದಾರೆ. ಅವರು ಸಹ ಕನ್ನಡ ಮಾಧ್ಯಮದಲ್ಲೇ ಕಲಿತವರಾಗಿದ್ದು, ಮಾತೃ ಭಾಷೆಯಲ್ಲಿಯೇ ಶಿಕ್ಷಣ ಪಡೆಯಬೇಕೆಂಬುದು ಅವರ ಆಶಯವೂ ಆಗಿದೆ. ಇಂಗ್ಲೀಷನ್ನು ಕೇವಲ ಒಂದು ಭಾಷೆಯಾಗಿ ಮಾತ್ರ ಪ್ರಾಥಮಿಕ ಹಂತದಲ್ಲಿ ಕಲಿಸಬೇಕೇ, ಹೊರತು ಮೀಡಿಯಂ ಆಗಿ ಕಲಿಸಬಾರದೆಂಬುದು ತಜ್ಞರು ಅಭಿಪ್ರಾಯವೂ ಆಗಿದೆ. ಆದರೆ, ನ್ಯಾಯಾಲಯಗಳ ಆದೇಶಗಳು ಮಕ್ಕಳ ಶಿಕ್ಷಣದ ಹಕ್ಕನ್ನೇ ಮೊಟಕುಗೊಳಿಸುತ್ತಿವೆ ಎಂದು ಆರೋಪಿಸಿದರು.
ಕನ್ನಡ ಕಲಿತರೆ ನಾನು ಬದುಕಬಲ್ಲೆ, ಕನ್ನಡವೂ ಅನ್ನದ ಭಾಷೆ ಎಂಬ ಆತ್ಮವಿಶ್ವಾಸವನ್ನು ಮಕ್ಕಳಲ್ಲಿ ತುಂಬಬೇಕು. ಅಲ್ಲದೆ, ನಶಿಸುತ್ತಿರುವ ಕನ್ನಡ ಶಾಲೆಗಳನ್ನು ಉಳಿಸಿ ಅಭಿಯಾನವನ್ನು ಕಸಾಪ ಕೈಗೆತ್ತಿಕೊಂಡು ಕನ್ನಡ ಕಟ್ಟುವ ಕೆಲಸದಲ್ಲಿ ತೊಡಗಬೇಕೆಂದು ಕರೆ ನೀಡಿದರು.
ರಾಜ್ಯದ ಬಹುತೇಕ ಜಿಲ್ಲೆಗಳು ಬರಗಾಲಕ್ಕೆ ತುತ್ತಾಗಿವೆ. ಫೆಬ್ರವರಿಯ ಆರಂಭದ ದಿನಗಳಲ್ಲಿಯೇ ಜಾನುವಾರುಗಳಿಗೆ ನೀರು-ಮೇವಿನ ಚಿಂತೆ ಕಾಡಲಾರಂಭಿಸಿದೆ. ಇಂತಹ ಸಂದರ್ಭದಲ್ಲಿ ಕೆರೆಗಳಿಗೆ ನೀರು ತುಂಬಿಸುವ ಕೆಲಸ ನಡೆಸುತ್ತಿರುವುದು ರೈತನ ಬದುಕಿಗೆ ಆಶಾಕಿರಣವಾಗಿದೆ ಎಂದ ಅವರು, ರೈತರ ಬಗ್ಗೆ ಎಲ್ಲಾ ಸರ್ಕಾರಗಳು ಮೊಸಳೆ ಕಣ್ಣೀರು ಸುರಿಸುತ್ತಿವೆ. ಸಾಲಮನ್ನಾ ಮಾಡುವುದಾಗಿ ಹೇಳುತ್ತಿವೆ. ಕೇಂದ್ರ ಬಜೆಟ್‍ನಲ್ಲಿ ಸಣ್ಣ ರೈತನಿಗೆ ವರ್ಷಕ್ಕೆ ಆರು ಸಾವಿರ ನೀಡುವುದಾಗಿ ಹೇಳಿದ್ದು, ಇದು ದಿನಕ್ಕೆ 17 ರೂಗಳಷ್ಟೆಯಾಗಲಿದ್ದು, ಮೂಗಿಗೆ ತುಪ್ಪ ಸವರಿದಂತಾಗಿದೆ ಎಂದರು.
ಭಾರತದಲ್ಲಿ ರೈತರಷ್ಟು ಶೋಷಣೆಗೆ ಒಳಗಾದ ದುಡಿಯುವ ವ್ಯಕ್ತಿ ಮೊತ್ತೊಬ್ಬನಿಲ್ಲ. ರೈತರ ಆತ್ಮಹತ್ಯೆ ನಿಲ್ಲಬೇಕಾದರೆ ಸಾಲಮನ್ನಾ ಬೇಕಿಲ್ಲ. ಬದಲಿಗೆ ಗೊಬ್ಬರ, ಬೀಜ, ಕ್ರಿಮಿನಾಶಕಗಳು, ಟ್ರ್ಯಾಕ್ಟರ್, ಟ್ರಿಲ್ಲರ್, ವ್ಯವಸಾಯದ ಉಪಕರಣಗಳಿಗೆ ವಿಶೇಷ ಸಬ್ಸಿಡಿ ನೀಡುವುದರ ಜತೆಗೆ ಅವುಗಳ ಮೇಲಿನ ತೆರಿಗೆ ಮನ್ನಾ ಮಾಡಬೇಕು. ರೈತ ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿಗೊಳಿಸಬೇಕು. ಆಗ ರೈತನ ಮೊಗದಲ್ಲಿ ಮಂದಹಾಸ ಮೂಡಿ, ಆತ್ಮಹತ್ಯೆಯಂತಹ ಕೆಟ್ಟ ಆಲೋಚನೆಯಿಂದ ರೈತರನ್ನು ಹೊರ ತರಲು ಸಾಧ್ಯವಾಗಲಿದೆ ಎಂದು ಹೇಳಿದರು.
ಸಮ್ಮೇಳನಾಧ್ಯಕ್ಷರಾದ ಆರ್.ಜಿ. ಹಳ್ಳಿ ನಾಗರಾಜ್ ಅವರಿಗೆ ನಿಕಟಪೂರ್ವ ಅಧ್ಯಕ್ಷ ಪ್ರೊ.ಎಚ್.ಎಸ್. ಹರಿಶಂಕರ್ ಸರ್ವಾಧ್ಯಕ್ಷತೆ ಹಸ್ತಾಂತರಿಸಿದರು.
ಇದೇ ಸಂದರ್ಭ ತಾಪಂ ಕಾರ್ಯನಿರ್ವಹಣಾಧಿಕಾರಿ ಎಲ್.ಎಸ್. ಪ್ರಭುದೇವ್‍ಗೆ ಪ್ರಜಾಸ್ನೇಹಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಸಮ್ಮೇಳನದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಆನಗೋಡು ಕ್ಷೇತ್ರದ ಜಿಪಂ ಸದಸ್ಯ ಕೆ.ಎಸ್.ಬಸವಂತಪ್ಪ ವಹಿಸಿದ್ದರು. ಕಸಾಪ ಜಿಲ್ಲಾಧ್ಯಕ್ಷ ಡಾ.ಎಚ್.ಎಸ್. ಮಂಜುನಾಥ ಕುರ್ಕಿ ಆಶಯ ನುಡಿಗಳನ್ನಾಡಿದರು. ಕಸಾಪ ತಾಲೂಕು ಅಧ್ಯಕ್ಷ ಬಿ. ವಾಮದೇವಪ್ಪ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕತ ಪ್ರೊ.ಎಸ್.ಬಿ. ರಂಗನಾಥ್, ಕಸಾಪ ನಿಕಟಪೂರ್ವ ಅಧ್ಯಕ್ಷ ಎ.ಆರ್. ಉಜ್ಜಿನಪ್ಪ, ಸಾಹಿತಿ ಎಂ.ಕೆ. ಬಕ್ಕಪ್ಪ, ಲೇಖಕ ಎಸ್. ಸಿದ್ದೇಶ್ ಕುರ್ಕಿ, ಉಪನ್ಯಾಸಕಿ ಎಂ.ಸಿ. ಗೀತಾ ಬಸವರಾಜ್, ಎಪಿಎಂಸಿ ಅಧ್ಯಕ್ಷ ವೀರಣ್ಣ, ಆನಗೋಡು ಗ್ರಾಪಂ ಅಧ್ಯಕ್ಷ ಕೆ. ರವಿ, ನೇರ್ಲಿಗೆ ಗ್ರಾಪಂ ಅಧ್ಯಕ್ಷೆ ಎಸ್. ಅಕ್ಕಮಹಾದೇವಿ, ಅಣಜಿ ಚಂದ್ರಪ್ಪ, ಎಸ್.ಕೆ. ಚಂದ್ರಶೇಖರ್, ರುದ್ರೇಶ್‍ನಾಯ್ಕ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕೆ. ರಾಘವೇಂದ್ರ ನಾಯರಿ ನಿರೂಪಿಸಿದರು. ಗಣೇಶ್ ಶಣೈ ಸ್ವಾಗತಿಸಿದರು.
ನಂತರ ಕವಿಗೋಷ್ಠಿ, ಬಹಿರಂಗ ಅಧಿವೇಶನ ಮತ್ತು ಸಮಾರೋಪ, ಸನ್ಮಾನ ಸಮಾರಂಭ ನಡೆದವು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
