ಗ್ರಾಮೀಣ ವಿದ್ಯಾರ್ಥಿಗಳ ಪ್ರತಿಭಾಪಲಾಯನ : ನಗರಗಳಿಗೆ ಗುಳೇ ಹೋಗುತ್ತಿರುವ ಪೋಷಕರು:

ತುಮಕೂರು:

     ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. ಫಲಿತಾಂಶ ಪ್ರಕಟವಾಯಿತೆಂದರೆ ಗ್ರಾಮೀಣ ಭಾಗದ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳು ನಗರದತ್ತ ಮುಖ ಮಾಡುವುದು ಸಾಮಾನ್ಯವಾಗಿ ಬಿಟ್ಟಿದೆ. ಇದು ಪೋಷಕರ ಒತ್ತಾಯವೊ, ಸ್ನೇಹಿತರು ಸೇರುತ್ತಿದ್ದಾರೆ ನಾನು ಅಲ್ಲಿಗೆ ಸೇರಬೇಕು ಎಂಬ ಉಮೇದಿಯೋ, ನಗರದಲ್ಲಿ ಓದಿದರೆ ಹೆಚ್ಚು ಅಂಕ ತೆಗೆಯಲು ಸಾಧ್ಯ ಎಂಬ ಭ್ರಮೆಯೋ, ಒಟ್ಟಾರೆ ಹಳ್ಳಿ ಮಕ್ಕಳು ಪಟ್ಣಣ ಸೇರುತ್ತಿದ್ದಾರೆ.

       ಮಕ್ಕಳ ಜೊತೆ ಪೋಷಕರು ಕುಟುಂಬ ಸಮೇತ ನಗರದತ್ತ ಗುಳೇ ಹೋಗುತ್ತಿದ್ದಾರೆ, ಇದರಿಂದ ನಗರದ ಶಾಲಾ ಕಾಲೇಜ್‍ಗಳು ತುಂಬಿ ತುಳುಕುತ್ತಿದ್ದರೆ, ಗ್ರಾಮೀಣ ಭಾಗದ ಶಾಲಾ ಕಾಲೇಜ್‍ಗಳು ಮಕ್ಕಳ ದಾಖಲಾತಿ ಸಂಖ್ಯೆ ಕ್ಷೀಣಿಸುತ್ತಾ ತರಗತಿ ಕೋಣೆಗಳು ಭಣ ಗುಡುತ್ತಿವೆ. ಆದರೆ ಪ್ರತಿ ಭಾರಿಯೂ ರಾಜ್ಯ ಮಟ್ಟದ ಪರೀಕ್ಷೆಗಳ ಫಲಿತಾಂಶ ಬಂದಾಗ “ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಸಾಧನೆಯೇ ಮೇಲುಗೈ” ಎಂಬ ಘೋಷ ವಾಕ್ಯ ಸದಾ ಸಿದ್ದವಿರುತ್ತದೆ.

ಗ್ರಾಮೀಣ ಭಾಗದವರೆ ಮೇಲುಗೈ ಸಾಧಿಸಲು ಕಾರಣವೇನು:

        ಇತ್ತೀಚಿನ ಐದು ವರ್ಷಗಳ ಎಸ್.ಎಸ್.ಎಲ್.ಸಿ. ಫಲಿತಾಂಶ ಗಮನಿಸಿದರೆ ನಮಗೆ ಸಿಗುವ ಮೊದಲ ಅಂಶವೆಂದರೆ ನಗರದ ಶಾಲೆಗಳಿಗಿಂತ ಗ್ರಾಮೀಣ ಭಾಗದ ಶಾಲೆಗಳ ಶೇಕಡ ಫಲಿತಾಂಶ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ.

       ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಪಡೆದು ಉನ್ನತ ದರ್ಜೆಯಲ್ಲಿ ಉತ್ತೀರ್ಣರಾಗುತ್ತಿದ್ದಾರೆ, ಇದಕ್ಕೆ ಕಾರಣವೇನೆಂದು ಹುಡುಕಿದಾಗ ನಮಗೆ ದೊರೆತ ಪ್ರಮುಖವಾದ ಅಂಶಗಳೆಂದರೆ, ಮೊದಲಿಗೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ಹುಟ್ಟುತ್ತಿರುವ ಉನ್ನತ ವ್ಯಾಸಂಗದ ದುಡಿತ, ಓದಿ ಮುಂದೆ ಬರಬೇಕೆಂಬ ಛಲ, ಓದಿನಿಂದಲೇ ಬದುಕು ಕಟ್ಟಿಕೊಳ್ಳುವ ಹಠ, ಪೋಷಕರ ತೀವ್ರ ನಿಗಾವಣೆ, ಪೋಷಕರ ಒತ್ತಾಸೆ ಈಡೇರಿಸಬೇಕೆಂಬ ಬಯಕೆ, ಓದಿನಲ್ಲಿ ಏಕಾಗ್ರತೆ ಉಂಟು ಮಾಡುವ ಶಾಲಾ ವಾತಾವರಣ, ಶಿಕ್ಷಕರ ಬದ್ಧತೆ, ಪ್ರತಿ ವಿದ್ಯಾರ್ಥಿಯ ಮೇಲೆ ಶಿಕ್ಷಕರ ಕಣ್ಗಾವಲು, ಕಡಿಮೆ ಫಲಿತಾಂಶ ಬಂದರೆ ಶಾಲೆಯ ಪ್ರಗತಿಗೆ ಹಿನ್ನಡೆಯ ಭಯ ಆಡಳಿತ ವರ್ಗಕ್ಕೆ,

         ಫಲಿತಾಂಶ ಕಡಿಮೆಯಾದರೆ ದಾಖಲಾತಿಗೆ ಒಡೆತ ಎಂಬ ಹೆದರಿಕೆ, ಶಿಕ್ಷಕರ ಮುಂಬಡ್ತಿಗೆ ಕತ್ತರಿ ಎಂಬ ಗುಮ್ಮ, ಜೊತೆಗೆ ಶಾಲೆಗಳ ಮೇಲೆ ಶಿಕ್ಷಣ ಇಲಾಖೆಯ ಹದ್ದಿನ ಕಣ್ಣು, ಇಲಾಖೆಯ ಮೇಲಧಿಕಾರಿಗಳು, ಶಾಸಕರು ನಡೆಸುವ ಫಲಿತಾಂಶ ಪ್ರಗತಿ ಪರಿಶೀಲನಾ ಸಭೆಗಳಲ್ಲಿ ಮುಖ್ಯ ಶಿಕ್ಷಕರಿಗೆ, ಕಡಿಮೆ ಪ್ರಗತಿ ತೋರಿರುವ ವಿಷಯದ ಶಿಕ್ಷಕರಿಗೆ ತೀಕ್ಷಣವಾದ ಮಾತಿನ ಬಾಣಗಳು, ಪ್ರತಿ ತಿಂಗಳು ಡಿ.ಡಿ.ಪಿ.ಐ, ಬಿ.ಇ.ಓ.ಹಾಗೂ ಎಸ್.ಎಸ್.ಎಲ್.ಸಿ.ಪರೀಕ್ಷಾ ನೋಡಲ್ ಅಧಿಕಾರಿಗಳು ಗ್ರಾಮೀಣ ಭಾಗದ ಶಾಲೆಗಳ ಫಲಿತಾಂಶ ಉತ್ತಮ ಪಡಿಸಲು ನಡೆಸುವ ಮಾರ್ಗದರ್ಶಿ ಸಭೆಗಳು ಶಿಕ್ಷಕರ ಮೇಲೆ ಪರಿಣಾಮ ಬೀರುವಂತೆ ಮಾಡಿರುವುದು, ಪ್ರತಿ ವಿಷಯಕ್ಕೆ ಸಂಬಂಧಿಸಿದ ಶಿಕ್ಷಕರ ಸಂಘಗಳು ನಡೆಸುವ ಕಾರ್ಯಾಗಾರಗಳು, ಈ ಎಲ್ಲಾ ಪ್ರಯತ್ನದ ಭಾಗವಾಗಿ ವಿದ್ಯಾರ್ಥಿಗಳಲ್ಲಿ ಓದಿನ ಆಸಕ್ತಿ ಹುಟ್ಟಿಸಿ, ಅಂಕಗಳಿಕೆಗೆ ಬೇಕಾದ ತಂತ್ರಗಾರಿಕೆಯನ್ನು ಬೆಳೆಸಿ ಫಲಿತಾಂಶ ಉತ್ತಮಗೊಳ್ಳುವಂತೆ ಮಾಡುತ್ತಿದೆ ಎಂಬುದು ಎಸ್.ಎಸ್.ಎಲ್.ಸಿ. ಫಲಿತಾಂಶವನ್ನು ಅವಲೋಕಿಸಿದವರ ಗ್ರಹಿಕೆ.

     ನಗರ ಭಾಗದ ಶಾಲೆಗಳ ಹಿನ್ನೆಡೆಗೆ ಕಾರಣಗಳು: ನಗರದಲ್ಲಿ ಕೆಲವೇ ಪ್ರತಿಷ್ಠಿತ ಶಾಲೆಗಳ ಫಲಿತಾಂಶ ಉತ್ತಮವಾಗಿವೆ, ಇಂತಹ ಪ್ರತಿಷ್ಠಿತ ಶಾಲೆಗಳು ಪ್ರತಿಭಾವಂತ ಮಕ್ಕಳಿಗೆ, ಶ್ರೀಮಂತರ ಮಕ್ಕಳಿಗೆ ಮಣೆ ಹಾಕುತ್ತವೆಯೇ ಹೊರತು, ಸಾಧಾರಣ ಬುದ್ಧಿಮತ್ತೆಯ, ಮಧ್ಯಮ ವರ್ಗದ ಮಕ್ಕಳನ್ನು ತಮ್ಮ ಆದ್ಯತೆಯಾಗಿ ಪರಿಗಣಿಸುವುದಿಲ್ಲ.

      ಈ ರೀತಿಯ ಮಕ್ಕಳು ತಮ್ಮ ಸ್ವಂತಃ ಸ್ಥಳಗಳಲ್ಲಿರುವ ಶಾಲಾ-ಕಾಲೇಜ್‍ಗಳನ್ನು ಬಿಟ್ಟು ನಗರಕ್ಕೆ ಬಂದು, ಕುರಿದೊಡ್ಡಿಯಂತಹ ಸಂಸ್ಥೆಗಳಿಗೆ ಸೇರಿ, ಶಿಕ್ಷಕರ ವೈಯಕ್ತಿಕ ಗಮನವಿಲ್ಲದೆ, ಆಡಳಿತ ವರ್ಗದ ತೀವ್ರ ನಿಗಾವಣೆ ಇಲ್ಲದೆ, ಉಳಿಯಲು ಸರಿಯಾದ ನೆಲೆ ಇಲ್ಲದೆ, ಹೊತ್ತು ಹೊತ್ತಿನ ಊಟಕ್ಕೂ ಪರದಾಡಿಕೊಂಡು, ನಗರದ ಆಕರ್ಷಣೆಯ ಸೆಳೆತಕ್ಕೆ ಸಿಕ್ಕಿ, ಪೋಷಕರಿಂದ ದೂರವೇ ಉಳಿದು, ಹಲವರು ‘ಹೋಂಸಿಕ್’ಗೆ ಒಳಗಾಗಿ, ಹಿರಿಯ ವಿದ್ಯಾರ್ಥಿಗಳ ಹುಚ್ಚಾಟಗಳಿಗೆ(ರ್ಯಾಂಗಿಂಗ್) ಬಲಿಯಾಗಿ ತೊಂದರೆ ಅನುಭವಿಸಿದ್ದೇ ಹೆಚ್ಚು ಗ್ರಾಮೀಣ ಭಾಗದ ವಿದ್ಯಾರ್ಥಿಗಳು.

       ಇನ್ನು ದೂರದ ಊರುಗಳಿಂದ ನಗರಕ್ಕೆ ದಿನವೂ ಬಸ್‍ನಲ್ಲಿ ಸಂಚರಿಸಿ ಓದುವ ಮಕ್ಕಳ ಪಾಡು ಇನ್ನೂ ದುಸ್ಥರ, ಇವರ ಹೆಚ್ಚಿನ ಸಮಯವೆಲ್ಲಾ ಟೆನ್ಷನ್‍ನಲ್ಲೇ ಮುಗಿಯುತ್ತದೆ, ಮನೆಯಲ್ಲಿ ಬೆಳಗ್ಗೆ ಎದ್ದಾಕ್ಷಣ ತಿಂಡಿ-ಊಟದಿಂದ ಶುರುವಾಗುವ ಟೆನ್ಷನ್ ಯಾತ್ರೆ ಇನ್ನು ರಾತ್ರಿ ಮನೆಗೆ ಬಂದು ಸೇರುವವರೆಗೂ ಟೆನ್ಷನಲ್ಲೇ ಮುಕ್ತಾಯವಾಗುತ್ತದೆ, ರಾತ್ರಿ ಮನೆಗೆ ಬರುವ ವೇಳೆಗೆ ಮನೆಯವರೆಲ್ಲಾ ಉಂಡು ಮಲಗುವ ಸಮಯ, ಇವರೂ ದಿನವೆಲ್ಲಾ ಬಸ್ ಸಂಚಾರ, ಪಾಠದ ಒತ್ತಡ, ನೋಟ್ಸ್-ರೆಕಾಡ್ಸ್ ಬರೆಯುವುದರೊಳಗೆ ‘ದೇಹಕ್ಕೆ ಆಯಾಸ, ಮನಸ್ಸಿಗೆ ಜಿಗುಪ್ಸೆ’ ಬಂದು ಆ ದಿನದ ಓದಿನ ಕಡೆಯ ಲಕ್ಷ್ಯವನ್ನೆ ಹಾಳುಗೆಡಿವಿರುತ್ತದೆ, ಹೀಗಾಗಿ ನಿದ್ರಾದೇವಿಗೆ ಬೇಗ ಈಡುಗುವ ಈ ವಿದ್ಯಾರ್ಥಿಗಳಿಗೆ ಈ ಜೀವನ ಶೈಲಿ ಪ್ರತಿದಿನದ ಕಾಯಕವಾಗಿ ಹೋಗಿರುತ್ತದೆ, ಇವರು ಫಲಿತಾಂಶ ಬಂದಾಗ ಮಮ್ಮಲ ಮರುಗುತ್ತಾರೆ.

        ಇಂತಹ ತೊಳಲಾಟಕ್ಕೆ ನಗರದ ವ್ಯಾಮೋಹ ಬೇಕಾ ಎನಿಸುವ ಮಟ್ಟಕ್ಕೆ ಹೋಗಿ, ಇತ್ತ ಉತ್ತಮ ಅಂಕವೂ ಬಾರದೆ, “ಆರಕ್ಕೆಹತ್ತಲಿಲ್ಲಾ-ಮೂರಕ್ಕಿಳಿಯಲಿಲ್ಲ” ಎಂಬತಹ ಸ್ಥಿತಿ ನಿರ್ಮಾಣ ಮಾಡಿಕೊಂಡು ಜೀವನದಲ್ಲಿ ಹತಾಶೆ ಒಳಗಾಗುವುದನ್ನು ಹತ್ತಿರದಿಂದ ಕಂಡಿದ್ದೇವೆ.

       ನಗರಕ್ಕೆ ಹೆಚ್ಚಾಗಿ ಹೋಗಲು ಬಯಸುವುದೇಕೆ: ನಗರಗಳಿಗೆ ಹೆಚ್ಚಿನದಾಗಿ ಹೋಗುವುದು ಎಸ್.ಎಸ್.ಎಲ್.ಸಿ.ನಂತರದ ಮಕ್ಕಳು ಮತ್ತು ಪೋಷಕರು, ಅವರು ನಗರಗಳಿಗೆ ಹೋಗುವುದಕ್ಕೆ ಕೊಡುವ ಮೊದಲ ಕಾರಣ ಅಲ್ಲಿ ಮೆಡಿಕಲ್, ಇಂಜಿನಿಯರಿಂಗ್ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉತ್ತಮ ಕೋಚಿಂಗ್ ಕೊಡುತ್ತಾರೆ ನಾವು ಅಲ್ಲಿಗೆ ಹೋಗುತ್ತೇವೆ ಎನ್ನುತ್ತಾರೆ, ಆದರೆ ತುಮಕೂರಿನಂತಹ ನಗರದ ಮಕ್ಕಳು ಪಿಯುಸಿಯನ್ನು ಇಲ್ಲಿಯೇ ಓದುತ್ತಾರೆ, “ನೀಟ್, ಸಿಇಟಿ, ಜೆಇಇ, ಏಮ್ಸ್”ನಂತಹ ಪರೀಕ್ಷೆಗಳ ಸಿದ್ಧತೆಗೆ ಮಾತ್ರ ಬೆಂಗಳೂರಿಗೆ ಕಳುಹಿಸುತ್ತಾರೆ ಎಂಬ ವಿಷಯ ಎಷ್ಟೋ ಪೋಷಕರಿಗೆ ತಿಳಿದಿಲ್ಲ, ಪಿಯುಸಿ ನಗರದಲ್ಲಿ ಓದಿದರೆ ನಮ್ಮ ಮಕ್ಕಳು ಡಾಕ್ಟ್ರು, ಇಂಜಿನಿಯರ್ ಆಕ್ತಾರೆ ಎಂಬ ಕಲ್ಪನೆಯಲ್ಲಿರುವುದೇ ಹೆಚ್ಚು.

       ಪಿ.ಯು.ಸಿ.ಬೋರ್ಡ್ ಎಕ್ಸಾಮ್ ಆಧರಿಸಿ ಉನ್ನತ ವ್ಯಾಸಂಗಕ್ಕೆ ಸೀಟ್ ಸಿಗುವುದಿಲ್ಲ, ನೀಟ್, ಜೆಇಇ, ಸಿಇಟಿಯಂತಹ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಹೆಚ್ಚಿನ ಅಂಕಗಳನ್ನು ಗಳಿಸಲು ವಿಶೇಷ ನೈಪುಣ್ಯತೆ ಬೇಕು, ಇದನ್ನು ತಯಾರಿ ಮಾಡಲು ಬೇರೆಯೇ ಆದ ಕೋಚಿಂಗ್ ವ್ಯವಸ್ಥೆ ಇದೆ, ಅದಕ್ಕೆ ನಾವು ಸಿದ್ದರಾಗಬೇಕು ಎಂಬ ಪ್ರಾಥಮಿಕ ತಿಳುವಳಿಕೆ ಇದ್ದವರು, ಪಿಯು ಬೋರ್ಡ್ ಎಕ್ಸಾಮ್ಗೆ ಹೆಚ್ಚು ಒತ್ತು ನೀಡುವುದಿಲ್ಲ.

        ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅಷ್ಟೋ ಇಷ್ಟೋ ಉತ್ತಮ ಅಂಕ ಪಡೆದ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ನಗರಗಳಿಗೆ ವಲಸೆ ಬಂದರೆ, ನಗರಗಳಲ್ಲಿರುವ ವಿದ್ಯಾರ್ಥಿಗಳು ಮಹಾನಗರ ಪಾಲಿಕೆಗಳಿಗೆ ವಲಸೆ ಹೋಗುತ್ತಾರೆ. ಇದು ತಪ್ಪ ಬೇಕು, ಪಿಯು ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳೂ ಸೇರಿದಂತೆ ಎಲ್ಲಾ ಬಗೆಯ ಶಿಕ್ಷಣ ತಾವಿರುವ ಜಾಗದಲ್ಲೇ ಸಿಗುವಂತಾಗಬೇಕು, ಈ ಕಾರಣಕ್ಕೆ ನಗರಗಳಿಗೆ ವಲಸೆ ಹೋಗುವುದನ್ನು ತಪ್ಪಿಸಬೇಕು, ತಮ್ಮ ಕ್ಷೇತ್ರಗಳನ್ನು ಶಿಕ್ಷಣ ಕ್ಷೇತ್ರದಲ್ಲಿ ಶಕ್ತಿ ಕೇಂದ್ರಗಳನ್ನಾಗಿಸುವ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಯೋಜನೆ ರೂಪಿಸಬೇಕು, ಅದನ್ನು ಅನುಷ್ಠಾನಗೊಳಿಸಬೇಕು. ಇಂತಹ ಸವಾಲುಗಳನ್ನು ಸ್ವೀಕರಿಸಿ ತಮ್ಮನ್ನು ಆರಿಸಿ ಕಳುಹಿಸಿರುವ ಹಲವು ಜನರ ಬಯಕೆಯನ್ನು ಈಡೇರಿಸುವರೇ ಎಂಬುದು ಸದ್ಯದ ಚಾಣಾಕ್ಷತನ. ಈ ಆಶಾಯ ಈಡೇರುವುದೇ……?!

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap