ದಾವಣಗೆರೆ:
ನಗರ ದೇವತೆ ಶ್ರೀದುರ್ಗಾಂಬಿಕಾದೇವಿ ದೇವಸ್ಥಾನ ಟ್ರಸ್ಟ್ ವತಿಯಿಂದ ಪ್ರತಿ ವರ್ಷದಂತೆ ಈ ಬಾರಿಯೂ ದಸರಾ ಮಹೋತ್ಸವವನ್ನು ಪರಂಪರೆಗೆ ಅನುಗುಣವಾಗಿ ಅದ್ದೂರಿಯಾಗಿ ಆಚರಿಸಲು ದೇವಸ್ಥಾನದ ಪ್ರಸಾದ ನಿಲಯದಲ್ಲಿ ಶನಿವಾರ ಮಧ್ಯಾಹ್ನ ದೇವಸ್ಥಾನ ಟ್ರಸ್ಟ್‍ನ ಅಧ್ಯಕ್ಷ ಡಾ.ಶಾಮನೂರು ಶಿವಶಂಕರಪ್ಪನವರ ಅಧ್ಯಕ್ಷತೆಯಲ್ಲಿ ನಡೆದ ದಸರಾ ಮಹೋತ್ಸವ ಆಚರಣೆ ಕುರಿತ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಭೆಯಲ್ಲಿ ಅಕ್ಟೋಬರ್ 10ರಿಂದ 19ರವರೆಗೆ ನವರಾತ್ರಿಯ 9 ದಿನಗಳ ಕಾಲ ಮಹೋತ್ಸವ ಆಚರಣೆ ನಡೆಸುವ ಬಗ್ಗೆ ಎಲ್ಲರೂ ಸಹಮತ ವ್ಯಕ್ತಪಡಿಸಿದರು.
ಸಭೆಯಲ್ಲಿ ಮಾತನಾಡಿದ ಟ್ರಸ್ಟ್‍ನ ಅಧ್ಯಕ್ಷ ಡಾ.ಶಾಮನೂರು ಶಿವಶಂಕರಪ್ಪ, ದಸರಾ ಮಹೋತ್ಸವವನ್ನು ಅದ್ದೂರಿಯಾಗಿ ಆಚರಿಸಬೇಕಾಗಿದೆ. ಅಕ್ಟೋಬರ್ 10 ಮೊದಲ ದಿನದಂದು ಘಟ ಸ್ಥಾಪನೆ, ದೀಪ ಹಾಕುವುದರ ಮೂಲಕ ಮಹೋತ್ಸವದ ಆಚರಣೆಗೆ ಚಾಲನೆ ನೀಡಲಾಗುವುದು. 19ರವರೆಗೂ ಪ್ರತಿ ದಿನ ವಿಶೇಷ ಪೂಜೆ, ಅಭಿಷೇಕ, ವಿಶೇಷ ಅಲಂಕಾರ, ಪುರಾಣಗಳು ಸೇರಿದಂತೆ ಹಲವು ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಅ.20ರಂದು ಮಹೋತ್ಸವದ ಪ್ರಯುಕ್ತ ಸಾಮೂಹಿಕ ವಿವಾಹ ಮಹೋತ್ಸವ, ಅನ್ನ ಸಂತರ್ಪಣೆ ಏರ್ಪಡಿಸಲಾಗುವುದು ಎಂದು ಹೇಳಿದರು.
ಕರಿಗಾರ್ ಬಸಪ್ಪ ಮಾತನಾಡಿ, ದಸರಾ ಮಹೋತ್ಸವದ ಪ್ರಯುಕ್ತ ಈ ಬಾರಿ ವಿಜಯ ದಶಮಿ ದಿನವಾದ ಅ.19ರಂದು ಮೈಸೂರು ದಸರಾ ಮೆರವಣಿಗೆ ಮಾದರಿಯಲ್ಲಿ ಆನೆ ಮೇಲೆ ಅಂಬಾರಿ ಮೆರವಣಿಗೆ ನಡೆಸಬೇಕು. ಆದ್ದರಿಂದ ಮೆರವಣಿಗೆಗೆ ಉತ್ಸವ ಸಮಿತಿ ರಚಿಸಬೇಕೆಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ದೇವಸ್ಥಾನದಿಂದ ಆರಂಭಗೊಳ್ಳುವ ಅಂಬಾರಿ ಮೆರವಣಿಗೆಯು ರಾಜಬೀದಿಗಳಲ್ಲಿ ಸಂಚರಿಸಲು ತೀರ್ಮಾನಿಸಲಾಯಿತು.
ದೇವಸ್ಥಾನದ ಧರ್ಮದರ್ಶಿ ಗೌಡ್ರು ಚನ್ನಬಸಪ್ಪ, ದಸರಾ ಮಹೋತ್ಸವದ ವೇಳೆ ನಗರ ದೇವತೆ ದರ್ಶನಕ್ಕೆ ಅನೇಕ ಸಂಖ್ಯೆಯಲ್ಲಿ ಭಕ್ತರು ಆಗಮಿಸಲಿದ್ದು, ಈ ವೇಳೆ 2 ಕಡೆಗಳಲ್ಲಿ ಪೂಜೆ-ಅಭಿಷೇಕ ವ್ಯವಸ್ಥೆ ಮಾಡಬೇಕೆಂದು ಸಲಹೆ ನೀಡಿದರು.
ಸಭೆಯಲ್ಲಿ ಟ್ರಸ್ಟ್‍ನ ಅಥಣಿ ವೀರಣ್ಣ, ಯಜಮಾನ್ ಮೋತಿ ವೀರಣ್ಣ, ಹೆಚ್.ಬಿ. ಗೋಣೆಪ್ಪ ಸೇರಿದಂತೆ ಇತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
