ವೈಭವೋಪೇತವಾಗಿ ನೆರವೇರಿದ ಗೂಳೂರು ಗಣಪತಿ ವಿಸರ್ಜನೆ

ತುಮಕೂರು

    ಕಳೆದ 15 ದಿನಗಳ ಹಿಂದೆ ಮಳೆಯಿಂದ ರದ್ದಾಗಿದ್ದ ಐತಿಹಾಸಿಕ ಪ್ರಸಿದ್ಧ ಗೂಳೂರು ಶ್ರೀ ಮಹಾಗಣಪತಿಯ ವಿಸರ್ಜನಾ ಮಹೋತ್ಸವ ಸಹಸ್ರಾರು ಭಕ್ತಾದಿಗಳ ಸಮ್ಮುಖದಲ್ಲಿ ಅತ್ಯಂತ ವೈಭವಯುತವಾಗಿ ನಡೆಯಿತು.

    ಬಲಿಪಾಢ್ಯಮಿಯಂದು ಆರಂಭವಾದ ಗೂಳೂರು ಗಣಪನ ಪೂಜಾ ಕೈಂಕರ್ಯಗಳು ಕಾರ್ತಿಕ ಮಾಸದಲ್ಲಿ ಸಂಪೂರ್ಣಗೊಂಡು, ಸಕಲ ಧಾರ್ಮಿಕ ವಿಧಿ ವಿಧಾನಗಳ ಮೂಲಕ ಗೂಳೂರು ಕೆರೆಯಲ್ಲಿ ವರ್ಣರಂಜಿತ ಸಿಡ್ಡಿಮದ್ದಿನ ಅಬ್ಬರದ ನಡುವೆ ಗಣೇಶ ಮೂರ್ತಿಯನ್ನು ವಿಸರ್ಜಿಸಲಾಯಿತು.

    ಎರಡು ದಿನಗಳ ಕಾಲ ನಡೆದ ಗೂಳೂರು ಗಣೇಶ ಜಾತ್ರೆಯಲ್ಲಿ ನಾಡಿನ ವಿವಿಧೆಡೆಗಳಿಂದ ಸಹಸ್ರಾರು ಭಕ್ತಾದಿಗಳು ಪಾಲ್ಗೊಂಡು ಸ್ವಾಮಿಯ ದರ್ಶನ ಪಡೆದು ಪುನೀತರಾದರು. ಶನಿವಾರ ಸಂಜೆ 7 ಗಂಟೆಗೆ ಊರಿನ ಯಜಮಾನರ ಮನೆಯಿಂದ ನಂದಿಧ್ವಜ ಮತ್ತು ಕರಡಿ ವಾದ್ಯದೊಂದಿಗೆ ಗಣಪತಿ ದೇವಾಲಯಕ್ಕೆ ಕಳಸ ತಂದು ಮಹಾಗಣಪತಿಗೆ ಮಹಾ ಮಂಗಳಾರತಿ ನೆರವೇರಿಸಲಾಯಿತು.

     ಕಳೆದ 15 ದಿನಗಳ ಹಿಂದೆ ನ. 30 ರಂದು ರಾತ್ರಿ ಶ್ರೀ ಗಣೇಶಮೂರ್ತಿಯನ್ನು ದೇವಾಲಯದ ಹೊಸ್ತಿಲು ದಾಟಿಸಿ ಹೊರ ತರಲಾಗಿತ್ತು. ಆದರೆ ಮಳೆ ಹಿನ್ನೆಲೆಯಲ್ಲಿ ಜಾತ್ರೆ ರದ್ದುಗೊಂಡಿತ್ತು. ಅಂದಿನಿಂದ 15 ದಿನಗಳ ಕಾಲ ದೇವಾಲಯದ ಬಾಗಿಲು ಮುಂಭಾಗದ ಗೋಪುರದ ಕೆಳಗೆಯೇ ಗಣೇಶಮೂರ್ತಿ ಪೂಜಾ ಕೈಂಕರ್ಯಗಳು ನೆರವೇರಿದವು.

    ಹೊನ್ನೇನಹಳ್ಳಿಯ ಭೋವಿ ಸಮುದಾಯ ಸೇರಿದಂತೆ ಗ್ರಾಮದ 18 ಕೋಮಿನ ಜನರು ಒಗ್ಗೂಡಿ ಮಹಾಗಣಪತಿಯನ್ನು ದೇವಾಲಯಲದ ಗೋಪುರದಿಂದ ಹೊರತಂದು ಸರ್ವಾಲಂಕೃತ ವಾಹನದಲ್ಲಿ ಕೂರಿಸಿ ಮಧ್ಯರಾತ್ರಿವರೆಗೂ ಗ್ರಾಮದ ರಾಜಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.

     ನಂತರ ಭಾನುವಾರ ಮಧ್ಯಾಹ್ನದಿಂದ ಜಾನಪದ ಸಿರಿಗೆಜ್ಜೆ ಕಲಾತಂಡದಿಂದ ನಂದಿ, ನವಿಲು, ಜಿರಾಫೆ, ಕವಾಡಿ ಡ್ಯಾನ್ಸ್, ನಾದಸ್ವರ, ಕರಡಿ ಮಜಲು, ನಾಸಿಕ್ ಡೋಲ್, ನಂದಿಕೋಲು, ಕೀಲು ಕುದುರೆ, ಬೊಂಬೆ ಕುಣಿತ, ವೀರಭದ್ರನ ಕುಣಿತ, ಡೊಳ್ಳುಕುಣಿತ, ಪೂಜಾಕುಣಿತ, ಸೋಮನ ಕುಣಿತದಂತಹ ಜನಪದ ಕಲಾತಂಡಗಳ ಜತೆಗೆ ಆಕರ್ಷಕ ಬಾಣ ಬಿರುಸು, ಸಿಡಿಮದ್ದಿನ ಸದ್ದಿನೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಗಣೇಶಮೂರ್ತಿಯ ಮೆರವಣಿಗೆ ನಡೆಸಲಾಯಿತು. ಗಣೇಶಮೂರ್ತಿಯ ಮೆರವಣಿಗೆ ಸಾಗಿದ ದಾರಿಯುದ್ದಕ್ಕೂ ಗ್ರಾಮದ ಜನತೆ ಮತ್ತು ಭಕ್ತಾದಿಗಳು ವಿಘ್ನೇಶ್ವರಿಗೆ ಪೂಜೆ ಸಲ್ಲಿಸಿ ಧನ್ಯತೆ ಮೆರೆದರು.

     ಬೆಳಗಿನ ಜಾವ 2 ಗಂಟೆಗೆ 500 ಅಡಿ ಉದ್ದದ ಜೋಗ್‍ಪಾಲ್, 4 ಗಂಟೆಗೆ ನಡೆದ ಆಕರ್ಷಕ ವರ್ಣರಂಜಿತ ಸಿಡಿಮದ್ದಿನ ಪ್ರದರ್ಶನ ನೆರೆದಿದ್ದ ಭಕ್ತಾದಿಗಳಲ್ಲಿ ರೋಮಾಂಚನ ಉಂಟು ಮಾಡಿತು.ವೈಭವೋಪೇತ ಮೆರವಣಿಗೆಯಲ್ಲಿ ಗೂಳೂರು ಕೆರೆ ಬಳಿ ಸಾಗಿದ ಗಣೇಶಮೂರ್ತಿಯನ್ನು ಆಕರ್ಷಕ ಸಿಡ್ಡಿಮದ್ದನ್ನು ಸಿಡಿಸಿ ಸಂಭ್ರಮಿಸಿದ ನಂತರ ಕೆರೆಯಲ್ಲಿ ವಿಸರ್ಜಿಸಲಾಯಿತು.ಗೂಳೂರು ಶ್ರೀ ಮಹಾಗಣಪತಿ ಭಕ್ತಮಂಡಳಿಯ ಶಿವಕುಮಾರ್ ಅವರ ನೇತೃತ್ವದಲ್ಲಿ ನಡೆದ ಈ ವಿಸರ್ಜನಾ ಮಹೋತ್ಸವದಲ್ಲಿ ನಾಡಿನ ವಿವಿಧೆಡೆಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link