ದಾವಣಗೆರೆ
ನಗರದ ಜೆ.ಹೆಚ್. ಪಟೇಲ್ ಬಡಾವಣೆಯ ಎ ಬ್ಲಾಕ್‍ನ ಜಿಲ್ಲಾ ಬಾಲಭವನದಲ್ಲಿ ಪುಟಾಣಿ ರೈಲಿಗೆ ಸೋಮವಾರ ಸಂಸದ ಜಿ.ಎಂ.ಸಿದ್ದೇಶ್ವರ ಹಾಗೂ ಶಾಸಕ ಎಸ್.ಎ. ರವೀಂದ್ರನಾಥ ಹಸಿರು ನಿಶಾನೆ ತೋರಿಸಿದರು.
ಜಿಲ್ಲಾಡಳಿತ, ಜಿ.ಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬಾಲಭವನ ಸೊಸೈಟಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪುಟಾಣಿ ರೈಲಿಗೆ ಸಂಸದ ಜಿ.ಎಂ. ಸಿದ್ದೇಶ್ವರ ಹಾಗೂ ಶಾಸಕ ಎಸ್.ಎ.ರವೀಂದ್ರನಾಥ್ ಅವರು ಹಸಿರು ನಿಶಾನೆ ತೋರಿಸುವ ಮೂಲಕ ಪುಟಾಣಿ ರೈಲು ಲೋಕಾರ್ಪಣೆ ಮಾಡಿದರು.
ಮೂರು ಬೋಗಿಗಳಿರುವ ಈ ಪುಟಾಣಿ ರೈಲಿಗೆ 1.86 ಕೋಟಿ ರೂಪಾಯಿ ವೆಚ್ಚ ತಗುಲಿದೆ. ರೈಲ್ವೆ ಇಲಾಖೆಯಿಂದ ನಿರ್ಮಾಣವಾಗಿ 2016ರಲ್ಲಿ ಜಿಲ್ಲೆಗೆ ಲಭ್ಯವಾಯಿತು. ಇದನ್ನು ಓಡಿಸಲು 300 ಮೀ.ನಷ್ಟು ವೃತ್ತಾಕಾರದ ಹಳಿ ನಿರ್ಮಾಣ ಮಾಡಲಾಗಿದೆ. ಜಿಲ್ಲೆಯ ಮಕ್ಕಳ ಮನರಂಜನೆಗಾಗಿ ಈ ರೈಲು ಸಿದ್ಧವಾಗಿದೆ. ಪ್ರತಿ ಶನಿವಾರ ಮತ್ತು ಭಾನುವಾರ ಈ ರೈಲನ್ನು ಓಡಿಸಲಾಗುತ್ತದೆ. ಇದರಲ್ಲಿ ಪ್ರಯಾಣಿಸಲು 10 ರೂ. ಪಾವತಿಸಿ ಟಿಕೇಟ್ ಖರೀದಿಸಬೇಕು.
ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ವಿಜಯಕುಮಾರ್ ಮಾತನಾಡಿ, ರೈಲ್ವೆ ಇಲಾಖೆಯ ಮೈಸೂರು ವಲಯದಿಂದ ಪುಟಾಣಿ ರೈಲು ಸಿದ್ಧ ಪಡಿಸಲಾಗುತ್ತದೆ. ಟ್ರ್ಯಾಕ್ ಮೆಂಟೇನೆನ್ಸ್, ರೈಲು ಎಂಜಿನ್ ರಿಪೇರಿ ಎಲ್ಲವನ್ನು ನೋಡಿಕೊಳ್ಳಲಾಗುತ್ತದೆ. ಸುಮಾರು 1.86 ಕೋಟಿ ರೂ. ವೆಚ್ಚ ಮಾಡಲಾಗಿದೆ. ಈ ಪುಟಾಣಿ ರೈಲಿನಲ್ಲಿ ಕಿರಿಯರಿಂದ ಹಿರಿಯವರು ಸೇರಿದಂತೆ ಸುಮಾರು 70 ಜನರು ಕುಳಿತುಕೊಂಡು ಸಂಚರಿಸಬಹುದು ಎಂದರು.
ಇನ್ನೂ ಬಾಲಭವನದ ಮೇಲ್ಭಾಗದಲ್ಲಿ ಜನ್ಮ ದಿನಾಚರಣೆ ಆಚರಣೆಗೆ ಮತ್ತು ಸಾಮಾಜಿಕ ನಾಟಕ, ಕಾರ್ಯಕ್ರಮಗಳನ್ನು ಮಾಡುವುದಕ್ಕಾಗಿ ಸಭಾಂಗಣ ನಿರ್ಮಾಣ ಮಾಡಲಾಗಿದೆ. ಬಾಲಭವನಕ್ಕೆ ಎರಡು ಗಾರ್ಡನ್ ನೀಡಲಾಗಿದ್ದು, ಸಧ್ಯಕ್ಕೆ ನೀರಿನ ಸಮಸ್ಯೆ ಇದೆ. ಬೇರೆ ಪಾರ್ಕಿನಿಂದ ತಾತ್ಕಾಲಿಕವಾಗಿ ನೀರು ಪಡೆಯಲಾಗುತ್ತಿದೆ. ಬಾಲಭವನದಲ್ಲಿ ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕ ಹೈಟೆಕ್ ಶೌಚಾಲಯ ನಿರ್ಮಿಸಲಾಗುವುದು ಎಂದು ಮಾಹಿತಿ ನೀಡಿದರು.
ಬಾಲಭವನದಲ್ಲಿ ಎಲ್ಲಾ ಸೌಲಭ್ಯ ನೀಡುವುದಕ್ಕೆ ಇನ್ನೂ 25 ಲಕ್ಷ ರೂ. ಅಗತ್ಯವಿದ್ದು, ಸಂಗೀತ, ಒಳಾಂಗಣ ಕ್ರೀಡಾಂಗಣದ ಆಟಿಕೆ ಸಾಮಾನುಗಳನ್ನು ಅಳವಡಿಸಲಾಗುವುದು. ಮುಂದಿನ ದಿನಗಳಲ್ಲಿ ಶಾಸಕರು ಬಾಲಭವನಕ್ಕೆ ಸಾರಿಗೆ ವ್ಯವಸ್ಥೆ ಕಲ್ಪಿಸುವುದಾಗಿ ಹೇಳಿದ್ದು, ಈ ಬಾರಿ 100ಕ್ಕೂ ಹೆಚ್ಚು ಮಕ್ಕಳನ್ನು ಸೇರಿಸಿ ಬೇಸಿಗೆ ಶಿಬಿರ ಆಯೋಜಿಸಲಾಗುವುದು ಎಂದು ಅವರು ವಿವರಿಸಿದರು.ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಅಧ್ಯಕ್ಷೆ ಮಮತಾ ಮಲ್ಲೇಶಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ ಶೃತಿ, ಬಿಜೆಪಿ ಮುಖಂಡರಾದ ಕಲ್ಲೇಶಪ್ಪ, ಶಿವರಾಜ್ ಪಾಟೀಲ್ ಮತ್ತಿತರರು ಹಾಜರಿದ್ದರು.