ಚಳ್ಳಕೆರೆ
ಕಳೆದ ಎಂಟ್ಹತ್ತು ವರ್ಷಗಳಿಂದ ಬರದ ಬೇಗುದಿಗೆ ಸಿಕ್ಕು ನಲುಗಿದ್ದ ಈ ಭಾಗದ ರೈತರಿಗೆ ಕಳೆದ ಎರಡು ತಿಂಗಳ ಹಿಂದೆ ಬಂದ ಮಳೆ ಸ್ವಲ್ಪ ಆಸರೆಯಾಗುವ ನಿರೀಕ್ಷೆಯಲ್ಲಿದ್ದ. ಆದರೆ, ಕಳೆದ ಮೂರು ದಿನಗಳಿಂದ ಬರುತ್ತಿರುವ ಜಿಟಿ, ಜಿಟಿ ಮಳೆ, ಮೋಡ ಮುಸುಕಿದ ವಾತಾವರಣ ರೈತರ ಆಸೆಗೆ ತನ್ನೀರು ಎರಚಿದೆ.
ಚಳ್ಳಕೆರೆ ತಾಲ್ಲೂಕಿನಾದ್ಯಂತ ಕಳೆದ ಮೂರು ದಿನಗಳಿಂದ ಜಿಟಿ, ಜಿಟಿ ಮಳೆ ಹಿಡಿದುಕೊಂಡಿದ್ದು ರೈತರಲ್ಲಿ ಆತಂಕ ಮೂಡಿಸಿದೆ. ತಾಲ್ಲೂಕಿನಾದ್ಯಂತ ಸುಮಾರು ಶೇ.30ರಷ್ಟು ಮಾತ್ರ ಶೇಂಗಾ ಬಿತ್ತನೆಯಾಗಿದೆ. ಕಳೆದ ತಿಂಗಳ ಮಳೆಯಿಂದ ಉತ್ತಮ ಫಸಲು ಕೈಸೇರುವದು ಎಂಬ ಹಲವಾರು ಕನಸು ಕಟ್ಟಿಕೊಂಡಿದ್ದ ರೈತರಿಗೆ ಮೊಡ ಮುಸುಕಿದ ವಾತಾವರಣ, ಮೂರು ದಿನದ ಮಳೆಯಿಂದ ಫಸಲು ಕೈ ಸೇರುವುದಿಲ್ಲ ಎಂದು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಭೂಮಿಯಿಂದ ಶೇಂಗಾವನ್ನು ಕಿತ್ತ ಕೆಲವರು ನಿರಂತರ ಮಳೆಯಿಂದ ಬೀಜ, ಮೇವು ಕಪ್ಪು ಬಣ್ಣಕ್ಕೆವಾಗುವ ಆತಂಕದಲ್ಲಿದ್ದಾರೆ. ಬಣವೆಗಳಲ್ಲಿ ಹಾಕಿದ ಶೇಂಗಾಕ್ಕೆ ತಾಡಪಾಲು ಮುಚ್ಚಿ ಮಳೆಯಿಂದ ರಕ್ಷಣೆ ಮಾಡಬಹುದು ಆದರೆ, ಉಷ್ಣಾಂಶ ಹೆಚ್ಚಿ ಶೇಂಗಾ ಬೂದು, ಕಪ್ಪು ಬಣ್ಣ ತಿರುಗುತ್ತದೆ. ಕಪ್ಪು ಬಣ್ಣವಾದ ಶೇಂಗಾ ಬಳ್ಳಿಯನ್ನು ದನ ಕರುಗಳು ತಿನ್ನುವುದಿಲ್ಲ, ಮೇವು ಆಗುವುದಿಲ್ಲ. ಶೇಂಗಾದ ಬೀಜಗಳು ಕಪ್ಪು ಬಣ್ಣವಾಗುವುದರಿಂದ ಶೇಂಗಾ ಬೀಜದ ಬೆಲೆಯೂ ಕುಸಿತ ಕಾಣುತ್ತದೆ.
ಮಳೆಯ ಅವಾಂತರದಿಂದ ಕೈಸೇರುತ್ತದೆ ಎಂಬ ನಿರೀಕ್ಷೆಯಲ್ಲಿ ಅಲ್ಪಸ್ವಲ್ಪ ಬೆಳೆಯೂ ಕೈಸೇರುವುದಿಲ್ಲ ಎಂಬ ಆತಂಕ ಒಂದು ಕಡೆಯಾದರೆ, ಮತ್ತೊಂದು ಕಡೆ ಹೊಲದಲ್ಲೇ ಇರುವ ಶೇಂಗಾಗಳು ಅಕಾಲಿಕ ಮಳೆಯಿಂದ ಬೀಜಗಳು ಮೊಳಕೆ ಹೊಡೆಯುತ್ತಿವೆ. ಅತ್ತ ಭೂಮಿಯಿಂದ ಕಿತ್ತರೂ ಕಷ್ಟ, ಭೂಮಿಯಲ್ಲೇ ಬಿಟ್ಟರೂ ಕಷ್ಟವಾಗಿದೆ ರೈತರ ಬದುಕು.
ಈ ಬಗ್ಗೆ ಪತ್ರಿಕೆಗೆ ತನ್ನ ನೋವು ಹಂಚಿಕೊಂಡ ತಾಲ್ಲೂಕಿನ ಚನ್ನಮ್ಮನಾಗತಿಹಳ್ಳಿ ಗ್ರಾಮದ ರೈತ ಜಿ.ಕೆ.ರಾಘವೇಂದ್ರ, ಕಳೆದ ಐದು ವರ್ಷಗಳಿಂದ ಮಳೆ ವೈಪಲ್ಯದಿಂದ ಭೂಮಿಗೆ ಯಾವುದೇ ಫಸಲು ಹಾಕಲಿಲ್ಲ. ಈ ಬಾರಿ ಬಂದ ಮಳೆಯಿಂದ ತಮ್ಮ ಐದು ಎಕರೆ ಭೂಮಿಗೂ ಶೇಂಗಾವನ್ನು ಬಿತ್ತನೆ ಮಾಡಿದ್ದೇವೆ.
ಅದರಲ್ಲೂ ಗಿಡಕ್ಕೆ ನಾಲ್ಕೈದು ಕಾಯಿ ಹಿಡಿದಿದೆ. ಅದನ್ನಾದರೂ ಉಳಿಸಿಕೊಂಡು ಹಾಕಿದ ಬಂಡವಾಳವಾದರೂ ತೆಗೆದುಕೊಳ್ಳುವ ನಿರೀಕ್ಷೆಯಲ್ಲಿದ್ದ ನಮಗೆ ಕಳೆದ ಮೂರು ದಿನಗಳಿಂದ ಬರುತ್ತಿರುವ ಮಳೆ ನಿರೀಕ್ಷೆಯನ್ನು ಹುಸಿ ಮಾಡಿದೆ. ಇನ್ನೂ ಎರಡು ದಿನ ಇದೇ ರೀತಿ ಮಳೆ ಹಿಡಿದುಕೊಂಡಲ್ಲಿ ಕೈಸೇರುತ್ತದೆ ಎಂದುಕೊಂಡಿದ್ದ ಬೆಳೆಯೂ ಕೈಸೇರುವುದಿಲ್ಲ. ಕಳೆದ ಬಾರಿ ಮಾಡಿದ ಸಾಲವನ್ನು ಈ ಬಾರಿ ತೀರಿಸಬಹುದು ಎಂದಕೊಂಡ ರೈತರ ಬದುಕಿಗೆ ಮಳೆ ಶಾಪವಾಗಿ ಪರಿಣಮಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
