ಸಣ್ಣ ಸಮುದಾಯಗಳನ್ನು ಪ್ರತ್ಯೇಕ ಪ್ರವರ್ಗಕ್ಕೆ ಸೇರಿಸಿ

ತುಮಕೂರು

     ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ತೀರಾ ಹಿಂದುಳಿದ ಸಣ್ಣ ಸಣ್ಣ ಸಮುದಾಯಗಳನ್ನು ಪ್ರತ್ಯೇಕ ಪ್ರವರ್ಗಕ್ಕೆ ಸೇರಿಸಿ ಅವರಿಗೆ ಸಿಗಬೇಕಾದ ಸೌಲಭ್ಯ ನೀಡಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಸರ್ಕಾರ ಮುಂದಾಗಬೇಕು ಎಂದು ಕಮ್ಮಾರ ಸಮುದಾಯದ ಮುಖಂಡರು ಸರ್ಕಾರವನ್ನು ಒತ್ತಾಯಿಸಿದರು.

    ಸಿದ್ಧಗಂಗಾ ಮಠದಲ್ಲಿ ಭಾನುವಾರ ಡಿ. ದೇವರಾಜ ಅರಸು ಸಂಶೋಧನಾ ಸಂಸ್ಥೆ, ಹಿಂದುಳಿದ ವರ್ಗಗಳ ಇಲಾಖೆ ಹಾಗೂ ರಾಜ್ಯ ಕಮ್ಮಾರ ಸಂಘಗಳ ಒಕ್ಕೂಟದ ಆಶ್ರಯದಲ್ಲಿ ನಡೆದ ಕಮ್ಮಾರ ಸುಮುದಾಯದ ರಾಜ್ಯ ಮಟ್ಟದ ವಿಚಾರ ಸಂಕಿರಣದಲ್ಲಿ ಮಾತನಾಡಿದ ತುಮಕೂರು ವಿವಿ ಪ್ರಾಧ್ಯಾಪಕ ಪ್ರೊ. ಕೊಟ್ರೇಶ್, ಆರ್ಥಿಕವಾಗಿ ಹಿಂದುಳಿದ, ಸಾಮಾಜಿಕವಾಗಿ ನಿರ್ಲಕ್ಷಕ್ಕೊಳಗಾದ ಅನೇಕ ಸಮುದಾಯಗಳಿಗೆ ನ್ಯಾಯ, ಸವಲತ್ತು ಸಿಗುತ್ತಿಲ್ಲ. ಸರ್ಕಾರಗಳಿಂದಲೂ ಅಂತಹ ಸಮಾಜಗಳನ್ನು ಗುರುತಿಸುವ ಕೆಲಸ ಆಗಿಲ್ಲ ಎಂದರು.

   ಕಮ್ಮಾರರಂತಹ ಸಮುದಾಯಗಳಿಗೆ ಸಾಮಾಜಿಕ ಪರಿಗಣನೆ ಸಿಗಬೇಕು, ಅವರ ಮಕ್ಕಳಿಗೆ ಶಿಕ್ಷಣ ಸೌಲಭ್ಯ ದೊರೆಯಬೇಕು. ಈ ಬಗ್ಗೆ ಸರ್ಕಾರದ ಗಮನ ಸೆಳೆಯಲು ಇಂತಹ ಕಾರ್ಯಾಗಾರಗಳು ಹೆಚ್ಚು ನಡೆಯಬೇಕು. ಸಮಾದಾಯದವರು ಸಂಘಟಿತರಾಗಿ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಬೇಕು ಇಲ್ಲವಾದರೆ ನ್ಯಾಯ ಸಿಗುವುದಿಲ್ಲ ಎಂದರು.

    ನಾಟ್ಯ ರಾಣಿ ಶಾಂತಲೆ, ಅಮರ ಶಿಲ್ಪಿ ಜಕಣಾಚಾರಿ ಮೊದಲಾದವರು ಹಿಂದುಳಿದ ವರ್ಗಗಳ ಸಮುದಾಯಕ್ಕೆ ಸೇರಿದವರು ತಮ್ಮ ಕಲೆ ಮೂಲಕ ಪ್ರಸಿದ್ಧರಾದವರು ಸಣ್ಣ ಸಮುದಾಯಗಳ ಅನೇಕರು ಸಮಾಜದ ಅಭ್ಯುದಯಕ್ಕಾಗಿ ಶ್ರಮಿಸಿದ್ದಾರೆ. ಆದರ ಸಾಧನೆ ದಾಖಲು ಮಾಡದ ಕಾರಣ ಅವರು ಮರೆತೇ ಹೋಗಿದ್ದಾರೆ. ಇಂತಹ ಸಮುದಾಯಗಳ ಸ್ಥಿತಿಗತಿ, ಸಾಧಕರ ಬಗ್ಗೆ ಅಧ್ಯಯನಗಳು ನಡೆದು, ಪುಸ್ತಕ ರೂಪದಲ್ಲಿ ದಾಖಲು ಮಾಡಬೇಕು ಎಂದು ಪ್ರೊ. ಕೊಟ್ರೇಶ್ ಸಲಹೆ ಮಾಡಿದರು.

    ಕಮ್ಮಾರ ಹಾಗೂ ಇಂತಹ ಸಮುದಾಯಗಳು ಸಮಾಜದ ಮುಖ್ಯವಾಹಿನಿಗೆ ಬರಲು ಪ್ರತಿ ಸಮುದಾಯಕ್ಕೆ ಪ್ರತ್ಯೇಕ ಅಭಿವೃದ್ಧಿ ನಿಗಮಗಳನ್ನು ಸರ್ಕಾರ ಸ್ಥಾಪನೆ ಮಾಡಿ ನೆರವಾಗಬೇಕು, ಇಂತಹವರ ಮಕ್ಕಳ ಶಿಕ್ಷಣಕ್ಕೆ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಿಬೇಕು ಎಂದು ಹೇಳಿದರು.

    ನಿವೃತ್ತ ಪ್ರಾಧ್ಯಾಪಕ ಹಾಗೂ ದೇವರಾಜ ಅರಸು ಸಂಶೋಧನಾ ಕೇಂದ್ರದ ಮಾಜಿ ನಿರ್ದೇಶಕ ಪ್ರೊ. ಎನ್. ವಿ. ನರಸಿಂಹಯ್ಯ ಮಾತನಾಡಿ, ಕಮ್ಮಾರರಂತಹ ಸಣ್ಣ ಸಮುದಾಯವನ್ನು ಹಿಂದುಳಿದ ವರ್ಗದಲ್ಲಿ ಬಲಾಢ್ಯರಿರುವ ವರ್ಗಕ್ಕೆ ಸೇರಿಸುವುದರಿಂದ ಇವರಿಗೆ ನಿರೀಕ್ಷಿತ ಸೌಕರ್ಯ ಸಿಗಲಾರದು ಪ್ರತ್ಯೇಕ ಪ್ರವರ್ಗಗಳಲ್ಲಿ ಗುರುತಿಸಬೇಕು ಎಂದರು.

    ಕಮ್ಮಾರ ಸಮುದಾಯದವರು ಸಂಘಟಿತರಾಗಬೇಕು, ಜನಸಂಖ್ಯೆ, ಬಹುಮತಕ್ಕೆ ಪ್ರಜಾಪ್ರಭುತ್ವದಲ್ಲಿ ಬೆಲೆ ಎಂದ ಅವರು, ರಾಜಕೀಯ ನಾಯಕರು ಕೆಳ ಹಂತದ ಸಮುದಾಯಗಳನ್ನು ಸಮಾಜದ ಮುಖ್ಯವಾಹಿನಿಗೆ ತರುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಕೋರಿದರು.

   ದೇವರಾಜ ಅರಸು ಸಂಶೋಧನಾ ಕೇಂದ್ರದ ನಿರ್ದೇಶಕಿ ರೇಣುಕಾಂಬ ಮಾತನಾಡಿ, ಕಮ್ಮಾರ ಜನಾಂಗದ ಆರ್ಥಿಕ ಪರಿಸ್ಥಿತಿ, ಸಾಮಾಜಿಕ ಹಿನ್ನೆಲೆ ಅಧ್ಯಯನ ಮಾಡಬೇಕು. ಅವರ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಆದ್ಯತೆ ನೀಡುವ ಕಾರ್ಯಕ್ರಮಗಳು ಜಾರಿಯಾಗಬೇಕು ಈ ಬಗ್ಗೆ ಸರ್ಕಾರದ ಗಮನ ಸೆಳೆಯುವ ಪ್ರಯತ್ನಗಳಾಗಬೇಕು ಎಂದರು.

   ರಾಜ್ಯ ಕಮ್ಮಾರ ಸಂಘಗಳ ಒಕ್ಕೂಟದ ಅಧ್ಯಕ್ಷ ಹನುಮಂತಯ್ಯ, ಪ್ರಧಾನ ಕಾರ್ಯದರ್ಶಿ ಎಲ್. ಎನ್. ಮಂಜುನಾಥ್, ಮುಖಂಡರಾದ ಅನಂತರಾಜು ಮೊದಲಾದವರು ಭಾಗವಹಿಸಿದ್ದರು.ನಂತರ ಕಮ್ಮಾರ ಸಮುದಾಯದ ಶೈಕ್ಷಣಿಕ ಸಮಸ್ಯೆಗಳು ಎಂಬ ವಿಚಾರವಾಗಿ ಪ್ರೊ. ಗಂಗಾಧರ ದೈವಜ್ಞ, ಕಮ್ಮಾರರ ಮೀಸಲಾತಿ ಸಮಸ್ಯೆಗಳು ಕುರಿತು ಡಾ. ಆರ್. ಬಿ. ಕುಮಾರ್, ಪ್ರೊ. ವಾಸುದೇವ ಬಡಿಗೇರ ಮಾತನಾಡಿದರು.

   ಕಮ್ಮಾರಿಕೆ ಹಾಗೂ ಕಮ್ಮಾರರ ಪ್ರಾಚೀನತೆ, ಆಧುನಿಕತೆ ಮತ್ತು ಕಮ್ಮಾರಿಕೆ, ಕಮ್ಮಾರಿಕೆ ಕೌಶಲ್ಯಗಳು ಮತ್ತಿತರ ವಿಚಾರಗಳ ಬಗ್ಗೆ ವಿಷಯ ತಜ್ಞರು ವಿಚಾರ ಮಂಡಿಸಿದರು.ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಡಾ. ಸುಬ್ರಾನಾಯಕ, ಮುಖಂಡರಾದ ಕೆ. ಪಿ ನಾಗೇಂದ್ರ, ಕೆ. ತಿಮ್ಮರಾಜು, ಜಿ ಎಸ್ ಕಮ್ಮಾರ್, ಕೆ ಹೆಚ್ ಕೃಷ್ಣಮೂರ್ತಿ ಟಿ. ನಾಗರಾಜು ಮತ್ತಿತರರು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link