ತುಮಕೂರು
ಜನಸಂಖ್ಯೆ ಹೆಚ್ಚಳದಿಂದ ದೇಶದ ಅಭಿವೃದ್ಧಿಗೆ ಮಾರಕ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಲತಾ ರವಿಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾಸ್ಪತ್ರೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸರ್ಕಾರಿ ಹಾಗೂ ಖಾಸಗಿ ನರ್ಸಿಂಗ್ ಕಾಲೇಜು, ರೆಡ್‍ಕ್ರಾಸ್ ಸಂಸ್ಥೆಗಳ ಸಹಯೋಗದಲ್ಲಿ ನಗರದ ಬಾಲಭವನದಲ್ಲಿಂದು ನಡೆದ “ವಿಶ್ವ ಜನಸಂಖ್ಯಾ ದಿನಾಚರಣೆ”ಯನ್ನು ಉದ್ಘಾಟಿಸಿ ಮಾತನಾಡಿದ ಅವರು ಜನಸಂಖ್ಯೆ ಹೆಚ್ಚಳದಲ್ಲಿ ಭಾರತವು ವಿಶ್ವದಲ್ಲಿಯೇ 2ನೇ ಸ್ಥಾನದಲ್ಲಿದೆ.
ಚೀನಾ ದೇಶದಂತೆ ನಮ್ಮ ದೇಶದಲ್ಲಿಯೂ ಸಹ ಒಂದು ಕುಟುಂಬಕ್ಕೆ ಒಂದು ಮಗು ಎಂಬ ಪದ್ಧತಿಯನ್ನು ಪಾಲಿಸಿಕೊಂಡರೆ ಜನಸಂಖ್ಯಾ ನಿಯಂತ್ರಣ ಮಾಡಲು ಸಾಧ್ಯವಾಗವುದು ಎಂದು ತಿಳಿಸಿದರು.
ಸಮಾಜದಲ್ಲಿ ಮೂಢನಂಬಿಕೆಯಲ್ಲಿಯೇ ಜೀವನ ನಡೆಸುತ್ತಿರುವ ಜನರು ಹೆಚ್ಚಾಗಿ ಗಂಡು ಮಗುವಿನ ವ್ಯಾಮೋಹಕ್ಕೆ ಒಳಗಾಗುತ್ತಿದ್ದಾರೆ. ದೇಶ ಅಭಿವೃದ್ಧಿ ಹೊಂದಲು ಹೆಣ್ಣು ಮಕ್ಕಳನ್ನು ವಿದ್ಯಾವಂತರಾಗಿ ಮಾಡಬೇಕು. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯು ಜನಸಂಖ್ಯಾ ಹೆಚ್ಚಳದಿಂದಾಗುವ ತೊಂದರೆಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಡಾ|| ಪ್ರೇಮ್‍ಕುಮಾರ್ ಮಾತನಾಡಿ ದೇಶದಲ್ಲಿ ಏರುತ್ತಿರುವ ಜನಸಂಖ್ಯೆಯಿಂದ ಮಾನವ ಸಂಪನ್ಮೂಲದ ಕೊರತೆಯಾಗುತ್ತಿರುವುದರಿಂದ ಅಭಿವೃದ್ಧಿ ಕುಂಠಿತವಾಗುತ್ತಿದೆ. ಹಿಂದಿನ ಕಾಲದಲ್ಲಿ ಯಾವುದೇ ತಾಂತ್ರಿಕ ಸೌಲಭ್ಯ ಗಳಿರಲಿಲ್ಲ. ಆದರೆ ಇಂದು ಸೌಲಭ್ಯಗಳಿದ್ದರೂ ಸಹ ಅದನ್ನು ಸರಿಯಾಗಿ ಉಪಯೋಗಿಸಿಕೊಳ್ಳುತ್ತಿಲ್ಲ. ಜನಸಂಖ್ಯೆ ಹೆಚ್ಚಾದಂತೆ ಆಹಾರದ ಕೊರತೆ, ನಿರುದ್ಯೋಗ ಹಾಗೂ ಅಪೌಷ್ಟಿಕತೆ ಸಮಸ್ಯೆ ಹೆಚ್ಚುತ್ತದೆ. ಜನಸಂಖ್ಯಾ ನಿಯಂತ್ರಣದಲ್ಲಿ ಯುವಜನರ ಸಹಕಾರ ಮುಖ್ಯವಾಗಿದೆ ಎಂದು ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಚಂದ್ರಿಕಾ ಅವರು ಈ ವರ್ಷ ಜನಸಂಖ್ಯಾ ದಿನಾಚರಣೆಯನ್ನು “ಕುಟುಂಬ ಕಲ್ಯಾಣ ನಿಭಾಯಿಸುವ ಜವಾಬ್ದಾರಿ, ತಾಯಿ ಮತ್ತು ಮಗುವಿನ ಆರೋಗ್ಯದ ಪೂರ್ಣ ತಯಾರಿ” ಎಂಬ ಘೋಷಣೆಯೊಂದಿಗೆ ಆಚರಿಸಲಾಗುತ್ತಿದೆ.
ಜಿಲ್ಲೆಯಲ್ಲಿ ಕೆಲ ದಂಪತಿಗಳು ಕುಟುಂಬ ಕಲ್ಯಾಣ ವಿಧಾನ, ತಾತ್ಕಾಲಿಕ ವಿಧಾನಗಳನ್ನು ಅಳವಡಿಸಿಕೊಂಡಿದ್ದು, ಅನಕ್ಷರತೆ ಹೊಂದಿರುವ ದಂಪತಿಗಳು ಪ್ರಾಥಮಿಕ ಅಥವಾ ದ್ವಿತೀಯ ಹಂತದ ಬಂಜೆತನಕ್ಕೆ ಒಳಗಾಗಿ ಅಥವಾ ಮಾಹಿತಿ ಇಲ್ಲದೆ, ಸೂಕ್ತ ಸಮಯದಲ್ಲಿ ಕುಟುಂಬ ಕಲ್ಯಾಣ ಅಳವಡಿಕೆಯಾಗದೆ ಅನಪೇಕ್ಷಿತ ಗರ್ಭಪಾತಕ್ಕೆ ತುತ್ತಾಗುತ್ತಿದ್ದಾರೆ. ಇದರಿಂದ ತಾಯಂದಿರ ಆರೋಗ್ಯದಲ್ಲಿ ತೊಂದರೆ ಉಂಟಾಗಿ ಶೇ.8ರಷ್ಟು ತಾಯಿ ಮರಣಕ್ಕೆ ಕಾರಣವಾಗುತ್ತಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕುಟುಂಬ ಕಲ್ಯಾಣ ವಿಧಾನಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ತಿಳಿಸಿದರು.
ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ|| ಟಿ.ಎ. ವೀರಭದ್ರಯ್ಯ ಮಾತನಾಡಿ ದೇಶದ ಜನಸಂಖ್ಯೆ ಪ್ರಸ್ತುತ 134 ಕೋಟಿ ಇದ್ದು, ಪ್ರತಿ ವರ್ಷ 1.55 ಕೋಟಿಯಷ್ಟು ಹೆಚ್ಚಳವಾಗುತ್ತಿದೆ. ದೇಶದ ಅಭಿವೃದ್ಧಿಗೆ ಮಿತ ಜನಸಂಖ್ಯೆ ಅಗತ್ಯ. ಜನತೆಯಲ್ಲಿ ಗುಣಾತ್ಮಕತೆ ಹೆಚ್ಚಾಗಿರಬೇಕು. ಸಾರ್ವಜನಿಕರು ಕುಟುಂಬ ಕಲ್ಯಾಣ ಯೋಜನೆಯ ನೂತನ ಸುರಕ್ಷಿತ ವಿಧಾನಗಳನ್ನು ಅಳವಡಿಸಿಕೊಳ್ಳುವುದರಿಂದ ಜನಸಂಖ್ಯಾ ಸ್ಫೋಟವನ್ನು ನಿಯಂತ್ರಣಕ್ಕೆ ತರಬಹುದು ಎಂದು ತಿಳಿಸಿದರು.
ಇದಕ್ಕೂ ಮುನ್ನ ವಿಶ್ವ ಜನಸಂಖ್ಯಾ ದಿನಾಚರಣೆ ಅಂಗವಾಗಿ ಜಿಲ್ಲಾಸ್ಪತ್ರೆಯಿಂದ ಎಂ.ಜಿ ರಸ್ತೆಯಲ್ಲಿರುವ ಬಾಲಭವನದವರೆಗೆ ಏರ್ಪಡಿಸಿದ್ದ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಡಾ|| ಪ್ರೇಮ್‍ಕುಮಾರ್, ಡಿಹೆಚ್‍ಒ ಡಾ|| ಚಂದ್ರಿಕಾ, ಜಿಲ್ಲಾ ಸರ್ಜನ್ ಡಾ|| ವೀರಭದ್ರಯ್ಯ ಚಾಲನೆ ನೀಡಿದರು. ಜಾಥಾದಲ್ಲಿ ನಗರದ ವಿವಿಧ ನರ್ಸಿಂಗ್ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ|| ಮಹಿಮಾ, ಜಿಲ್ಲಾ ಆಶ್ರಿತ ರೋಗವಾಹಕ ನಿಯಂತ್ರಣಾಧಿಕಾರಿ ಡಾ|| ಪುರುಷೋತ್ತಮ್, ಆರ್‍ಸಿಹೆಚ್ ಡಾ|| ಕೇಶವರಾಜ್, ಟಿಹೆಚ್‍ಒ ಡಾ|| ಶರತ್‍ಚಂದ್ರ, ರೋಟರಿ ಸಂಸ್ಥೆಯ ಮುಸ್ತಕ್ ಅಹಮ್ಮದ್ ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.