ತುಮಕೂರು
ಗುಬ್ಬಿ ಶಾಸಕರು ಎ.ಕೃಷ್ಣಪ್ಪನವರನ್ನು ಕಳೆದ ಲೋಕಸಭಾ ಚುನಾವಣೆಯಲ್ಲಿ ತುಮಕೂರು ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗುವಂತೆ ಪುಸಲಾಯಿಸಿ, ಅವರಿಂದ ಕೋಟ್ಯಂತರ ರೂ.ಗಳನ್ನು ಖರ್ಚು ಮಾಡಿಸಿ ಮಾರಮ್ಮನ ಜಾತ್ರೆಯ ಹರಕೆಯ ಕುರಿಯನ್ನಾಗಿ ಮಾಡಿದರು. ತನ್ನ ಕ್ಷೇತ್ರದಲ್ಲಿ 80 ಸಾವಿರಕ್ಕೂ ಆಧಿಕ ಮತಗಳನ್ನು ಹಾಕಿಸುವುದಾಗಿ ನಂಬಿಸಿ ಬೆಂಗಳೂರಿನಿಂದ ಕರೆತಂದು ನಂಬಿಕೆ ದ್ರೋಹ ಮಾಡಿ ಅವರ ಸಾವಿಗೆ ಕಾರಣರಾಗಿದ್ದಾರೆ.
ಚುನಾವಣೆಯು ಮುಗಿದ ನಂತರ ಕೆಲವೇ ತಿಂಗಳುಗಳಲ್ಲಿ ಮುದ್ದಹನುಮೇಗೌಡರವರನ್ನು ಗೆಲ್ಲಿಸಿದ್ದೇ ನಾವು ಎಂದು ಗುಬ್ಬಿ ಶಾಸಕರು ಖಾಸಗಿ ಸಮಾರಂಭದಲ್ಲಿ ಹೇಳಿಕೆ ನೀಡಿದ್ದು ಪತ್ರಿಕೆಗಳಲ್ಲಿ ಬಂದಿದೆ. ಇಂತಹ ನೀಚ ರಾಜಕಾರಣ ಮಾಡಿದ ಶಾಸಕರು ನಮ್ಮ ಬಗ್ಗೆ ಹಗುರವಾಗಿ ಮಾತನಾಡಲು ನೈತಿಕತೆಯಾದರೂ ಇದೆಯೇ ಎಂದು ಪ್ರಶ್ನಿಸಿದರು. ನಮ್ಮ ಜೀವನದಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ರಾಜಕರಣ ಮಾಡಿಕೊಂಡು ಬಂದಿದ್ದೇನೆ.
ಇದು ನನ್ನ ಕೊನೆಯ ಚುನಾವಣೆ, ಮೋದಿಯವರ ನೇತೃತ್ವದಲ್ಲಿ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬರಲಿದ್ದು, ತುಮಕೂರು ಜಿಲ್ಲೆಯ ಅಭಿವೃದ್ಧಿ ಕಾಮಗಾರಿಗಳನ್ನು ಹಾಗೂ ನೆನೆಗುದಿಗೆ ಬಿದ್ದಿರುವ ಯೋಜನೆಗಳನ್ನು ಪೂರ್ಣಗೊಳಿಸಿ ರಾಜಕೀಯವಾಗಿ ವಿರಮಿಸುತ್ತೇನೆ ಎಂದು ತುಮಕೂರು ಲೋಕಸಭಾ ಬಿಜೆಪಿ ಅಭ್ಯರ್ಥಿ ಜಿ.ಎಸ್. ಬಸವರಾಜ್ರವರು ತಿಳಿಸಿದರು.
ಅವರು ಗುಬ್ಬಿ ವಿಧಾನಸಭಾ ಕ್ಷೇತ್ರದ ಚೇಳೂರಿನಲ್ಲಿ ರೋಡ್ ಶೋ ನಡೆಸಿ ಮಾತನಾಡುತ್ತಾ, ಮಕ್ಕಳು ಸೊಸೆಯಂದಿರು ಹಾಗೂ ಮೊಮ್ಮಕ್ಕಳ ಗಲಾಟೆಗೆ ಹೆದರಿ ಹಾಸನ ಜಿಲ್ಲೆಯಿಂದ ತುಮಕೂರು ಜಿಲ್ಲೆಗೆ ವಲಸೆ ಬಂದಿರುವ ಮಾನ್ಯ ದೇವೇಗೌಡರವರು ರಾಜಕೀಯವಾಗಿ ಹಲವಾರು ರಾಜಕಾರಣಿಗಳನ್ನು ಮುಗಿಸಿದ್ದಾರೆ. ಇಂತಹವರಲ್ಲಿ ವೈ.ಕೆ. ರಾಮಯ್ಯ, ಪುಟ್ಟಸ್ವಾಮಿಗೌಡ, ನಂಜೇಗೌಡ, ನಾಗೇಗೌಡ ಇನ್ನೂ ಪಟ್ಟಿ ದೊಡ್ಡದಿದೆ.
ಮಾನ್ಯ ದೇವೆಗೌಡರ ಬಗ್ಗೆ ತುಮಕೂರು ರಾಜಕಾರಣಿಗಳು ಕುರುಡು ಪ್ರೇಮ ತೋರಿದರೆ ತುಮಕೂರಿನ ತಾಲ್ಲೂಕು ಪಂಚಾಯ್ತಿ ಟಿಕೆಟ್ ಹಾಸನದವರ ಪಾಲಾಗಿ, ಜಿಲ್ಲಾ ಪಂಚಾಯ್ತಿ ಟಿಕೆಟ್ ಬೆಂಗಳೂರಿಗರ ಪಾಲಾಗಿ ಎಂ.ಎಲ್.ಎ. ಟಿಕೆಟ್ ಬೆಂಗಳೂರು ಹಾಸನ ಮಂಡ್ಯದ ರಾಜಕಾರಣಿಗೆ ದುಡ್ಡಿಗೆ ಹರಾಜು ಆಗಲಿದೆ. ಈಗಲಾದರೂ ನಮ್ಮ ಜಿಲ್ಲೆಯ ರಾಜಕಾರಣಿಗಳು ತಮ್ಮ ಭವಿಷ್ಯಕ್ಕಾದರೂ ವಲಸೆ ಬಂದಿರುವ ರಾಜಕಾರಣಿಗಳನ್ನು ಅವರ ತವರು ಮನೆಗೆ ಸೋಲಿಸಿ ವಾಪಸ್ಸು ಕಳುಹಿಸಿ ಎಂದರು.
ಮಾಜಿ ಸಚಿವ ವಿ.ಸೋಮಣ್ಣ ನವರು ರ್ಯಾಲಿಯಲ್ಲಿ ಮಾತನಾಡುತ್ತಾ, ಜಿ.ಎಸ್. ಬಸವರಾಜುರವರು ಹಿರಿಯ ರಾಜಕಾರಣಿ. ರಾಜ್ಯದಲ್ಲೆ ವಿರಳ. ಜಿಲ್ಲೆಯ ಯಾವುದೇ ಗ್ರಾಮ ಪಂಚಾಯ್ತಿ ಮಟ್ಟದ ರಾಜಕಾರಣಿಗಳನ್ನು ಗುರುತು ಹಿಡಿದು ಮಾತನಾಡಿಸಿ, ತಮ್ಮ ಜೊತೆ ಇರಿಸಿಕೊಂಡಿರುವ ರಾಜಕೀಯ ಒಡನಾಟದ ಬಗ್ಗೆ ಕಂಡರೆ ನಿಜಕ್ಕೂ ಆಶ್ಚರ್ಯವಾಗುತ್ತದೆ. ತುಮಕೂರು ಜಿಲ್ಲೆಯ ಹಿರಿಯ ರಾಜಕೀಯ ಮುತ್ಸದ್ಧಿಯು ಈ ಬಾರಿ ವಿಜಯಶಾಲಿಯಾದರೆ ಉನ್ನತ ಸ್ಥಾನವನ್ನು ಪಡೆದು ಈ ಜಿಲ್ಲೆಗೆ ಕೀರ್ತಿ ತರಲಿದ್ದಾರೆ. ಯಾವುದೇ ಆಸೆ ಆಮಿಷಗಳಿಗೆ ಬಲಿಯಾಗದೆ ನಿಮ್ಮ ಜಿಲ್ಲೆಯ ಮುತ್ಸದ್ಧಿಯನ್ನು ಲೋಕಸಭಾ ಚುನಾವಣೆ ಆಶೀರ್ವಾದ ಮಾಡಿ ಕಳಿಸಿ ತುಮಕೂರು ಜಿಲ್ಲೆಯ ಹೆಸರನ್ನು ಉಳಿಸುವ ಜೊತೆಗೆ ನಿಮ್ಮ ಕಷ್ಟ ಸುಖಗಳಿಗೆ ಆಸರೆಯಾಗಿ ನಿಲ್ಲುತ್ತಾರೆ ಎಂದು ತಿಳಿಸಿದರು.ಈ ರ್ಯಾಲಿಯಲ್ಲಿ ಚಿಕ್ಕನಾಯಕನಹಳ್ಳಿ ಶಾಸಕರಾದ ಜೆ.ಸಿ.ಮಾಧುಸ್ವಾಮಿ, ಬಿಜೆಪಿ ಜಿಲ್ಲಾ ಒಬಿಸಿ ಅಧ್ಯಕ್ಷ ಜಿ.ಎನ್. ಬೆಟ್ಟಸ್ವಾಮಿ, ಬಿಜೆಪಿ ಮುಖಂಡರಾದ ದಿಲೀಪ್ ಕುಮಾರ್, ಅ.ನಾ.ಲಿಂಗಪ್ಪ, ಮುಂತಾದ ಮುಖಂಡರು ಈ ರೋಡ್ ಷೋನಲ್ಲಿ ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ