ರೈತನ ಬದುಕು ಬೀದಿಗೆ ತರಲು ಹೊರಟಿರುವ ಜಿ ಎಸ್ ಬಿ : ಆರೋಪ

ಗುಬ್ಬಿ

    ಬಡ ರೈತನ ಜಮೀನು ಕಿತ್ತುಕೊಳ್ಳುವ ಮೂಲಕ ದೌರ್ಜನ್ಯವೆಸಗಿದವರ ಪರ ಮಾತನಾಡುವ ಸಂಸದ ಜಿ.ಎಸ್.ಬಸವರಾಜು ಅವರು ತಿಗಳ ಸಮುದಾಯದ ಬಡ ರೈತನ ಬದುಕು ಬೀದಿಗೆ ತರುತ್ತಿದ್ದಾರೆ ಎಂದು ಬಿಜೆಪಿ ಹಿರಿಯ ಮುಖಂಡ ಹಾಗೂ ಅಗ್ನಿವಂಶ ಸಮಾಜದ ವಿದ್ಯಾಭಿವೃದ್ದಿ ಸಂಘದ ನಿರ್ದೇಶಕ ಸಾಗರನಹಳ್ಳಿ ನಂಜೇಗೌಡ ನೇರ ಆರೋಪ ಮಾಡಿದರು.

   ಪಟ್ಟಣದ ವಿದ್ಯಾಭಿವೃದ್ದಿ ಸಂಘದ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ನಿಟ್ಟೂರು ಹೋಬಳಿ ಬಂಡಿಹಳ್ಳಿ ಗ್ರಾಮದ ಬಡ ರೈತ ಭೋಗಯ್ಯ ಎಂಬುವರರು ಕಳೆದ 30 ವರ್ಷದಿಂದ ಅಮ್ಮನಹಳ್ಳಿ ಸರ್ವೆ ನಂ 28 ರಲ್ಲಿ ಅನುಭವದಲ್ಲಿದ್ದಾರೆ. ಬೇರೆ ಉದ್ಯೋಗ ತಿಳಿಯದ ಈ ಮುಗ್ದ ರೈತರ ಜಮೀನು ಕಬಳಿಕೆಗೆ ಸಹಕಾರ ನೀಡಿದ ಸಂಸದರು ತಿಗಳ ಸಮುದಾಯದ ರೈತರನ್ನು ಒಕ್ಕಲೆಬ್ಬಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಗುಡುಗಿದರು.

    ಈ ಜಮೀನು ವಿವಾದವು ಈಗಾಗಲೇ ಜಿಲ್ಲಾಧಿಕಾರಿಗಳ ಬಳಿ ಇತ್ಯರ್ಥಗೊಂಡಿದೆ. ಸರ್ವೆ ನಂಬರ್ ಬದಲಿಸುವ ಕೆಲಸ ಮಾಡಲು ಸೂಚಿಸಲಾಗಿತ್ತು. ಉಪವಿಭಾಗಾಧಿಕಾರಿಗಳು ಸ್ಥಳ ಮಹಜರು ಮಾಡಿ ಈ ಹಿಂದೆ ಆಗಿರುವ ಕೈಬರಹದ ತಪ್ಪುಗಳನ್ನು ತಿದ್ದಿ ನಂಬರ್ ಬದಲಿಸುವ ಕೆಲಸ ಮಾಡಲು ತಾಲ್ಲೂಕು ಆಡಳಿತ ಹಿಂದೇಟು ಹಾಕಿದೆ. ಎಂದೂ ಗ್ರಾಮದಲ್ಲಿ ಕಾಣಿಸಿಕೊಳ್ಳದ ದ್ರಾಕ್ಷಾಯಣಮ್ಮ ಎಂಬುವವರಿಗೆ ಮಂಜೂರು ಮಾಡಲಾಗಿದೆ ಎಂದು ವಾಸ್ತವದಲ್ಲಿದ್ದ ಭೋಗಯ್ಯ ಅವರ ಕುಟುಂಬವನ್ನು ಒಕ್ಕಲೆಬ್ಬಿಸುವ ಕೆಲಸವನ್ನು ರಾಜಕೀಯ ಒತ್ತಡದಲ್ಲಿ ಮಾಡಲಾಗಿದೆ.

   ಅಧಿಕಾರಿವರ್ಗ ಕೂಡಾ ರಾಜಕಾರಣಿಗಳ ಕೈಗೊಂಬೆಯಾಗಿದ್ದಾರೆ ಎಂದು ದೂರಿದರು.ಸಂಸದರು ಈ ಬಡ ರೈತನ ವಾಸ್ತವತೆ ತಿಳಿದುಕೊಳ್ಳದೆ ಅವರ ಬಳಿ ತೆರಳಿದ್ದ ವೇಳೆ ದೌರ್ಜನ್ಯದ ಮಾತುಗಳಾಡಿ ಜಿಲ್ಲಾಧಿಕಾರಿಗಳಿಗೆ ಕರೆ ಮಾಡಿ ಈ ರೈತನ ಜಮೀನಿನಿಂದ ಒಕ್ಕಲೆಬ್ಬಿಸಲು ಸೂಚಿಸಿದ್ದಾರೆ. ಈ ಕಾರ್ಯಕ್ಕೆ ಸಾಥ್ ನೀಡಿದ ಪೊಲೀಸ್ ಇಲಾಖೆ ಮುಂದೆ ನಿಂತು ಬಡ ರೈತನನ್ನು ಬೆದರಿಸಿದ್ದಾರೆ. ದ್ರಾಕ್ಷಾಯಣಮ್ಮ ಎಂಬವವರ ಪರ ನಿಲ್ಲುವ ನಿಟ್ಟೂರು ಜಗದೀಶ್ ಎಂಬಾತ ಸುಮಾರು 100 ಕ್ಕೂ ಅಧಿಕ ಮಂದಿ ಅಪರಿಚಿತರೊಂದಿಗೆ ಬಂದು ಸ್ಥಳದಲ್ಲಿದ್ದ ಅಡಕೆ ಸಸಿಗಳನ್ನು ಕಿತ್ತು ದೌರ್ಜನ್ಯ ಮೆರೆದಿದ್ದಾರೆ.

    ಈ ಸಂದರ್ಭದಲ್ಲಿ ಪೊಲೀಸ್ ನಮ್ಮ ಪರ ನಿಲ್ಲಲಿಲ್ಲ ಎಂದ ಅವರು ಈ ಕೃತ್ಯಕ್ಕೆ ಮಾಜಿ ಶಾಸಕ ಶಿವನಂಜಪ್ಪ ಅವರ ಪುತ್ರರೊಬ್ಬರ ಸಹಕಾರ ಇದೆ ಎಂದು ಆರೋಪಿಸಿದರು. ನ್ಯಾಯಾಲಯದ ಆದೇಶವನ್ನೇ ಧಿಕ್ಕರಿಸಿದ ತಾಲ್ಲೂಕು ಆಡಳಿತ ಜಿಲ್ಲಾಧಿಕಾರಿಗಳ ಆದೇಶಕ್ಕೂ ಕಿಮ್ಮತ್ತಿನ ಬೆಲೆ ನೀಡಿಲ್ಲ. ನ್ಯಾಯಾಲಯದಲ್ಲಿದ್ದರೂ ಈ ಜಮೀನಿಗೆ ಅತಿಕ್ರಮಣ ಮಾಡಿದ ಕೆಲವರು ಇಲ್ಲಿನ ಸಸಿಗಳನ್ನು ಕಿತ್ತಿರುವ ಬಗ್ಗೆ ಪೊಲೀಸ್ ತನಿಖೆ ನಡೆಸಬೇಕಿದೆ ಎಂದು ಆಗ್ರಹಿಸಿದ ಅವರು ಸಂಸದರು ವಾಸ್ತವ ಅರಿಯದೇ ಬಡ ರೈತನ ವಿರುದ್ದ ಹರಿಹಾಯ್ದ ಬಗ್ಗೆ ತಿಗಳ ಸಮಾಜ ತೀವ್ರ ವಿರೋಧ ವ್ಯಕ್ತಪಡಿಸಿದೆ.

   ಅಗ್ನಿವಂಶ ವಿದ್ಯಾಭಿವೃದ್ದಿ ಸಂಘದ ಅಧ್ಯಕ್ಷ ಕೆ.ಸಿ.ಕೃಷ್ಣಮೂರ್ತಿ ಮಾತನಾಡಿ ರಾಜಕಾರಣಿಗಳು ತಿಗಳ ಸಮುದಾಯದ ಮೇಲೆ ಸವಾರಿ ನಡೆಸಲು ಸಂಘ ಬಿಡುವುದಿಲ್ಲ. ಶ್ರಮಿಕ ವರ್ಗ ತಿಗಳ ಸಮಾಜದ ಜೀವನಕ್ಕೆ ದಾರಿಯಾದ ಅಲ್ಪ ಜಮೀನಿನ ಮೇಲೆ ಕಣ್ಣು ಹಾಕಿರುವವರ ವಿರುದ್ದ ಉಗ್ರ ಹೋರಾಟವನ್ನು ನಡೆಸಲಾಗುವುದು. ಬಡ ರೈತ ಭೋಗಯ್ಯ ಅವರ ಜಮೀನು ಅವರಿಗೆ ಬಿಟ್ಟುಕೊಡಲು ಜಿಲ್ಲಾಡಳಿತ ಮುಂದಾಗಬೇಕು. ಸೂಕ್ತ ದಾಖಲೆ ಇರುವ ಬಡವನ ಪರ ಸರ್ಕಾರ ನಿಲ್ಲಬೇಕು ಎಂದು ಆಗ್ರಹಿಸಿದರು.ಈ ಸಂದರ್ಭದಲ್ಲಿ ತಿಗಳ ಸಮುದಾಯದ ಮುಖಂಡರಾದ ರಾಮಯ್ಯ, ಜಿ.ಬಿ.ಮಲ್ಲಪ್ಪ, ಹುಚ್ಚೇಗೌಡ, ಎನ್.ಸಿ.ಶಿವಣ್ಣ, ರಾಮಚಂದ್ರು ಮುಂತಾದವರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link