ಬೆಂಗಳೂರು
ವರ್ತಕರಿಗೆ ಜಿಎಸ್‍ಟಿ ರಿಟನ್ರ್ಸ್ ಸಲ್ಲಿಕೆ ಪ್ರಕ್ರಿಯೆಯನ್ನು ಸರಳಗೊಳಿಸುವ ಉದ್ದೇಶದಿಂದ ಮುಂದಿನ 4ರಿಂದ 6 ತಿಂಗಳೊಳಗಾಗಿ ಹೊಸ ವಿಧಾನ ಜಾರಿಗೆ ಬರಲಿದೆ ಎಂದು ಬಿಹಾರ ಉಪಮುಖ್ಯಮಂತ್ರಿ ಹಾಗೂ ಜಿಎಸ್‍ಟಿ ಸಂಪರ್ಕ ಜಾಲ ಉನ್ನತೀಕರಣಗೊಳಿಸುವ ಸಚಿವರ ಸಮೂಹದ ಮುಖ್ಯಸ್ಥ ಸುಶೀಲ್ ಕುಮಾರ್ ಮೋದಿ ಹೇಳಿದ್ದಾರೆ.
ನಗರದಲ್ಲಿಂದು ಸಚಿವರ ಸಮೂಹದ 10ನೇ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರಳ ಮತ್ತು ಸುಲಭವಾಗಿ ಜಿಎಸ್‍ಟಿ ರಿಟನ್ರ್ಸ್ ಸಲ್ಲಿಸುವ ವಿಧಾನದ ವಿನ್ಯಾಸವನ್ನು ಸಿದ್ಧಪಡಿಸುವಂತೆ ಇನ್ಫೋಸಿಸ್ ಸಂಸ್ಥೆಗೆ ಸೂಚಿಸಲಾಗಿದೆ ಎಂದರು.
ಸಣ್ಣ ತೆರಿಗೆ ಪಾವತಿದಾರರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಸಾಮಾನ್ಯ ಲೆಕ್ಕಪತ್ರ ತಂತ್ರಾಂಶ ಅಭಿವೃದ್ಧಿಪಡಿಸುವ ಸಲುವಾಗಿ 18 ಕಂಪನಿಗಳನ್ನು ಗುರುತಿಸಲಾಗಿದೆ. ತಂತ್ರಾಂಶ ಸಿದ್ಧವಾದ ನಂತರ ಇದು ಸಣ್ಣ ವ್ಯಾಪಾರಿಗಳ ಬಳಕೆಗೆ ಲಭ್ಯವಾಗಲಿದೆ ಎಂದರು.
ಅಕ್ಟೋಬರ್ ಒಂದರಿಂದ ಇ-ವಾಣಿಜ್ಯ ವಲಯದಲ್ಲಿ ಟಿಡಿಎಸ್ ಅಂದರೆ ತೆರಿಗೆ ಕಡಿತ ವ್ಯವಸ್ಥೆ ಹಾಗೂ ಟಿಸಿಎಸ್ ಅಂದರೆ ತೆರಿಗೆ ಸಂಗ್ರಹ ವ್ಯವಸ್ಥೆ ಜಾರಿಗೆ ಬರಲಿದೆ. ತಂತ್ರಜ್ಞಾನದಲ್ಲಿ ಸುಧಾರಣೆಯಾದ ನಂತರ ಆದಾಯ ಸಂಗ್ರಹಣೆಯಲ್ಲಿ ಏರಿಕೆ ಕಂಡುಬಂದಿದೆ.
ರಾಜ್ಯಗಳಿಗೆ ನೀಡುವ ಆದಾಯ ಕೊರತೆ ಪ್ರಮಾಣ ಶೇಕಡ 17ರಿಂದ 13ಕ್ಕೆ ಇಳಿಕೆಯಾಗಿದೆ. ಭವಿಷ್ಯದಲ್ಲಿ ತೆರಿಗೆ ಸಂಗ್ರಹ ಪ್ರಮಾಣ ಒಂದು ಲಕ್ಷ 30 ಸಾವಿರ ಕೋಟಿ ರೂಪಾಯಿಗೆ ಏರಿಕೆಯಾಗುವ ವಿಶ್ವಾಸವಿದೆ ಎಂದು ಹೇಳಿದರು.
ಜಿಎಸ್‍ಟಿ ಸಂಪರ್ಕ ಜಾಲದಲ್ಲಿ ದತ್ತಾಂಶ ಮತ್ತು ವ್ಯಾಪಾರ ಗುಪ್ತಮಾಹಿತಿ ಸಂಗ್ರಹ ವ್ಯವಸ್ಥೆಯನ್ನು ಅಳವಡಿಸಿದ್ದು, ಇದರಿಂದ ತೆರಿಗೆ ತಪ್ಪಿಸುವವರನ್ನು ಪತ್ತೆ ಮಾಡುವ ಜೊತೆಗೆ ವ್ಯಾಪಾರಸ್ಥರು ನಕಲಿ ಬಿಲ್ ಸೃಷ್ಟಿಸುವುದನ್ನು ಪತ್ತೆ ಮಾಡಲು ಸಹಕಾರಿಯಾಗಲಿದೆ ಎಂದು ಸುಶೀಲ್‍ಕುಮಾರ್ ಮೋದಿ ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ