ಸೇವಾ ಭದ್ರತೆಗಾಗಿ ಅತಿಥಿ ಉಪನ್ಯಾಸಕರ ಆಗ್ರಹ

ದಾವಣಗೆರೆ:

      ಸೇವಾ ಭದ್ರತೆ ನೀಡಿ ಕಾಯಂಗೊಳಿಸುವಂತೆ ಆಗ್ರಹಿಸಿ ಜಿಲ್ಲೆಯ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರು, ಗುರುವಾರ ತರಗತಿ ಬಹಿಷ್ಕರಿಸಿ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಜಿಲ್ಲಾ ಸಮನ್ವಯ ಸಮಿತಿ ನೇತೃತ್ವದಲ್ಲಿ ಧರಣಿ ನಡೆಸಿದರು.
ತರಗತಿ ಬಹಿಷ್ಕರಿಸಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಜಮಾಯಿಸಿದ ಅತಿಥಿ ಉಪನ್ಯಸಕರು ತಮ್ಮ ಬೇಡಿಕೆ ಈಡೇರಿಸದ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿ, ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

      ಈ ಸಂದರ್ಭದಲ್ಲಿ ಮಾತನಾಡಿದ ಸಮಿತಿಯ ಜಿಲ್ಲಾ ಅಧ್ಯಕ್ಷ ಹೆಚ್.ಕೊಟ್ರೇಶ್, ರಾಜ್ಯದ 412 ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಳೆದ ಹಲವಾರು ವರ್ಷಗಳಿಂದ 13,500 ಜನ ಅತಿಥಿ ಉಪನ್ಯಾಸಕರು ಸೇವೆ ಸಲ್ಲಿಸುತ್ತಿದ್ದು, ತಮಗೆ ಯಾವುದೇ ಸೇವಾ ಭದ್ರತೆ ಇಲ್ಲವಾಗಿದೆ. ಆದ್ದರಿಂದ ನಿತ್ಯವೂ ಉದ್ಯೋಗ ಕೈತಪ್ಪುವ ಆತಂಕದಲ್ಲಿಯೇ ವಿದ್ಯಾರ್ಥಿಗಳಿಗೆ ಪಾಠ ಪ್ರವಚನ ಮಾಡಬೇಕಾಗಿದೆ ಎಂದು ಅಳಲು ತೋಡಿಕೊಂಡರು.

      ರಾಜ್ಯದ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಹಲವಾರು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರು, ಲಕ್ಷಾಂತರ ವಿದ್ಯಾರ್ಥಿಗಳಿಗೆ ಉತ್ತಮವಾಗಿ ಬೋಧನೆ ಮಾಡುತ್ತಿದ್ದಾರೆ. ಕೇವಲ 11ರಿಂದ 13 ಸಾವಿರ ರೂಗಳವರೆಗೆ ಸಂಬಳ ಪಡೆಯುತ್ತಿದ್ದಾರೆ. ಕೆಲಸವರಿಗೆ ಹಲವಾರು ತಿಂಗಳುಗಳಿಂದ ಸರಿಯಾಗಿ ವೇತನ ಸಹ ನೀಡಿಲ್ಲ. ಆದ್ದರಿಂದ ಜೀವನ ನಡೆಸುವುದೇ ದುಸ್ತರವಾಗಿದೆ ಎಂದು ಆರೋಪಿಸಿದರು.

      2016-17ನೇ ಸಾಲಿನಲ್ಲಿ ಕರ್ತವ್ಯ ನಿರ್ವಹಿಸಿ, 2017ನೇ ಸಾಲಿನಲ್ಲಿ ಸೇವೆಯಿಂದ ಹೊರಗುಳಿದವರು ಹಾಗೂ 2018-19ನೇ ಸಾಲಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅತಿಥಿ ಬೋಧಕರಿಗೆ ಸೇವೆ ಭದ್ರತೆ ನೀಡಿ ಖಾಯಂ ಮಾಡಬೇಕು. 7ನೇ ವೇತನ ಆಯೋಗದ ಶಿಫಾರಸ್ಸಿನ ಅನುಗುಣವಾಗಿ ಈ ಹಿಂದೆ ಸರ್ಕಾರದ ಪ್ರಧಾನ ಕಾರ್ಯದರ್ಶಿ, ಕಾಲೇಜು ಶಿಕ್ಷಣ ಇಲಾಖೆ, ಅವರು ದೇಶದ ವಿವಿಧ ರಾಜ್ಯಗಳಲ್ಲಿ ಅತಿಥಿ ಬೋಧಕರಿಗೆ ನೀಡುತ್ತಿರುವ ವೇತನ ತಃಖ್ತೆಯೊಂದಿಗೆ ಶಿಫಾರಸ್ಸು ಮಾಡಿದ್ದು, ಅದರಂತೆ 30 ಸಾವಿರ ರೂ. ಮಾಸಿಕ ವೇತನ ಪ್ರಸಕ್ತ ಸಾಲಿನಿಂದಲೇ ಜಾರಿಗೊಳಿಸಬೇಕು.

     ಮುಖ್ಯಮಂತ್ರಿ ಸಿಎಂ ಕುಮಾರಸ್ವಾಮಿ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದ್ದಂತೆಯೇ ಅತಿಥಿ ಬೋಧಕರ ಸೇವೆ ಖಾಯಂಗೊಳಿಸಬೇಕು. ಅತಿಥಿ ಉಪನ್ಯಾಸಕರಿಗೆ ಶಾಶ್ವತ ನಿಯಮಾವಳಿ ರೂಪಿಸಿ ದೆಹಲಿ, ಹರಿಯಾಣ, ತ್ರಿಪುರ ಮೊದಲಾದ ರಾಜ್ಯ ಸರ್ಕಾರಗಳ ಮಾದರಿಯಲ್ಲೇ ಐತಿಹಾಸಿಕ ನಿರ್ಧಾರ ಕೈಗೊಳ್ಳಬೇಕು. ಅತಿಥಿ ಉಪನ್ಯಾಸಕರು ಎಂಬ ಆಧುನಿಕ ಜೀತ ಪದ್ಧತಿ ಕೈಬಿಡಬೇಕೆಂದು ಆಗ್ರಹಿಸಿದರು.

     ಪ್ರತಿಭಟನೆಯಲ್ಲಿ ಸಮಿತಿ ಡಾ.ಕೆ.ಎಂ.ಪ್ರಶಾಂತ ಶರ್ಮ, ಶಿವಕುಮಾರ, ಶಂಕರಯ್ಯ, ಡಾ.ದೇವೇಂದ್ರಪ್ಪ, ಎ.ಕೆ.ಬಸವರಾಜ, ಡಾ.ದೇವೇಂದ್ರಪ್ಪ, ವಿ.ಹುಲಿಕುಂಟೇಶ್ವರ, ಡಾ.ಎಂ.ಪ್ರಭಾಕರ, ಎಂ.ಆರ್.ಧನಂಜಯ, ಎಂ.ಎಸ್.ರಾಘವೇಂದ್ರ, ಸಂತೋಷ್, ಡಾ.ಎಂ.ಸುರೇಶ, ಕೆ.ಮೋಹನ, ಸಿ.ರಾಜಕುಮಾರ, ಪಿ.ವಿ.ಸಿದ್ದಮ್ಮ, ಎ.ಎಂ.ಭಾರತಿ, ಶ್ವೇತಾ, ರೂಪಾಲಕ್ಷ್ಮಿ, ಡಿ.ಪಿ.ಗಂಗಾಧರ, ಕೆ.ಚಂದ್ರಶೇಖರ, ಗಜೇಂದ್ರ, ಕಾನೂನು ಸಲಹೆಗಾರ ಬಿ.ಎಸ್.ಗಣೇಶ ಸೇರಿದಂತೆ ಹಲವರು ಭಾಗವಹಿಸಿದ್ದರು.

           ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link