ಚಿತ್ರದುರ್ಗ
ತಾಲ್ಲೂಕಿನ ಚಿಕ್ಕಪ್ಪನಹಳ್ಳಿ ಗ್ರಾಮದ ಶ್ರೀ ಗುರು ಕೊಟ್ರುಸ್ವಾಮಿ ರಥೋತ್ಸವ ಮಂಗಳವಾರ ಅದ್ದೂರಿಯಾಗಿ, ಅತೀ ವಿಜೃಂಭಣೆಯಿಂದ ಸಾವಿರಾರು ಭಕ್ತರ ಸಮ್ಮುಖದಲ್ಲಿ ಜರುಗಿತು.
ಸ್ವಾಮಿಯ ತೇರಿಗೆ ಊರಿನ ಹಿರಿಯ ತಲೆ ಶ್ರೀ ಎಸ್.ಎಂ. ನಾಗೇಂದ್ರಯ್ಯ ನವರಿಂದ ತೇರಿಗೆ ಅಲಂಕಾರ ನಡೆಯಿತು. ಬಣ್ಣ ಬಣ್ಣದ ಬಟ್ಟೆ, ದೊಡ್ಡ ಆಕಾರದ ಹೂವಿನ ಹಾರಗಳು, ಬಾವುಟಗಳಿಂದ ಅಲಂಕರಿಸಿದ್ದ ರಥದ ಮೇಲೆ ಶ್ರೀ ಗುರು ಕೋಟ್ರುಸ್ವಾಮಿಯನ್ನು ಪ್ರತಿಷ್ಠಾಪಿಸಲಾಯಿತು.
ದೊಡ್ಡೆಡೆ ಸೇವೆ:
ಬಾಳೆ ಎಲೆಗಳ ಮೇಲೆ ಅನ್ನ, ಹಾಲು, ಮೊಸರು, ತುಪ್ಪ, ಬೆಲ್ಲದ ಹಾಲು, ಸಾಂಬಾರು ಮತ್ತು ಬಾಳೆಹಣ್ಣುಗಳನ್ನು ಎಡೆಗೆ ಹಾಕಿ ಊರಿನ ಗೌಡ್ರು ವಂಶಸ್ಥರು ಮೊದಲು ದೇವರಿಗೆ ಮತ್ತು ರಥಕ್ಕೆ ಪೂಜೆ ಸಲ್ಲಿಸಿ ದೊಡ್ಡೆಡೆ ನೈವೇದ್ಯ ಮಾಡಿದರು.
ಸ್ವಾಮಿಗೆ ಹಾಕಿದ ಹಾರ ಮತ್ತು ಮುಕ್ತಿ ಬಾವುಟಗಳ ಹರಾಜು ಕಾರ್ಯಕ್ರಮವು ಊರಿನ ಮುಖಂಡರಾದ ತಿಪ್ಪೇಸ್ವಾಮಿ ಅವರಿಂದ ನಡೆಯಿತು. ನಂತರ ದೇವರಿಗೆ ಮಹಾಮಂಗಳಾರತಿ ಮಾಡಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಸುತ್ತ ಮುತ್ತಲಿನ ಗ್ರಾಮಗಳ ಭಕ್ತರು ರಥ ಎಳೆದು ಭಕ್ತಿ ಮೆರೆದರು.
ರಥ ಮುಂದಕ್ಕೆ ಸಾಗುತ್ತಿದ್ದಂತೆ ಭಕ್ತಾಧಿಗಳು ಭಕ್ತಿಯಿಂದ ದೇವರಿಗೆ ಬಾಳೆ ಹಣ್ಣು ಎಸೆಯತೊಡಗಿದರು. ರಸ್ತೆಯುದ್ದಕ್ಕೂ ನಂದಿ ಕೋಲು, ಡೊಳ್ಳು, ವೀರಗಾಸೆ ಕುಣಿತ ಕುಣಿಯುವುದು ಗಮನ ಸೆಳೆಯಿತು. ಮದ್ಯಾಹ್ನ 1 ಗಂಟೆ ಸುಮಾರಿಗೆ ಓಕಳಿ ಕಾರ್ಯಕ್ರಮವು ಅದ್ದೂರಿಯಾಗಿ ನಡೆಯಿತು. ಸ್ವಾಮಿಯ ಪಲ್ಲಕ್ಕಿ ಉತ್ಸವವನ್ನು ಪ್ರತಿ ಮನೆ ಮನೆಗೂ ತೆಗೆದುಕೊಂಡು ಹೋಗಿ ಸ್ವಾಮಿಗೆ ಪೂಜೆ ಸಲ್ಲಿಸಿ ಭಕ್ತಿಗೆ ಪಾತ್ರರಾದರು.
ಜಾತ್ರೆ ವಿಶೇಷ: ಚಂದ್ರಮಾನ ಯುಗಾದಿ ಹಬ್ಬವಾಗಿ 15 ದಿನಕ್ಕೆ ನಡೆಯುವ ಶ್ರೀ ಗುರು ಕೊಟ್ರುಸ್ವಾಮಿ ಉತ್ಸವ, ಚಂದ್ರ ವೀಕ್ಷಣೆ ಮಾಡಿದ ನಂತರ ಅಂದು ಸಂಜೆಯಿಂದ ಗ್ರಾಮದ ಮನೆಗಳಲ್ಲಿ ಶ್ರೀ ಗುರು ಕೊಟ್ರುಸ್ವಾಮಿ ಕಂತೇ ಬೀಕ್ಷೆಯ ಅನುಗುಣವಾಗಿ 15 ದಿನಗಳ ಕಾಲ ಭಕ್ತಾಧಿಗಳು ನೀಡಿದ ಅನ್ನ, ಸಾಂಬಾರು, ಮುದ್ದೆ, ರೊಟ್ಟಿ, ಹೋಳಿಗೆ, ಪಾಯಸ ಇತ್ಯಾದಿ ತಂದು ದೇವಸ್ಥಾನದಲ್ಲಿ ಊರಿನ ಗ್ರಾಮಸ್ಥರು ಮತ್ತು ಮಕ್ಕಳು ಪ್ರಸಾದವನ್ನು ಸ್ವೀಕರಿಸುತ್ತಾರೆ.
14 ನೇ ದಿನ ಸ್ವಾಮಿಯ ಗಣಾರಾಧನೆ ನಿಮಿತ್ತ ಮದ್ಯಾಹ್ನ ಹೊತ್ತು ಬೇಳೆ, ಹುಣುಸೇಹಣ್ಣು, ಬೆಲ್ಲ, ಉಪ್ಪು, ಒಣಮೆಣಸಿನಕಾಯಿ, ಅಕ್ಕಿ ಇನ್ನು ಇತ್ಯಾದಿ ದವಸ ಧಾನ್ಯಗಳನ್ನು ಮಕ್ಕಳು ಕಂತೇ ಬೀಕ್ಷೆ ನಡೆಸಿ ಸಂಜೆ ಅಡುಗೆಗೆ ಮತ್ತು ಗಣಾರಾಧನೆಗೆ ಸಿದ್ದತೆ ಮಾಡಿಕೊಂಡರು.
ಚಿಕ್ಕಪ್ಪನಹಳ್ಳಿ ಗ್ರಾಮದ ಸುತ್ತಮುತ್ತ ಗ್ರಾಮದ ಜನಗಳು ಗಣಾರಾಧನೆಯಲ್ಲಿ ಭಾಗಿ ಆಗಿ ಪ್ರಸಾದವನ್ನು ಸ್ವೀಕರಿಸುತ್ತಾರೆ. ವಿಶೇಷವೆನೆಂದರೆ ಹಿಂದಿನ ಕಾಲದಿಂದ ನಡೆದುಕೊಂಡು ಬಂದ ಸಂಸ್ಕತಿ ಪದ್ದತಿ ಪ್ರಕಾರ ಗೌಡ್ರು ವಂಶಸ್ಥರು ಪೂಜೆಯನ್ನು ಸಲ್ಲಿಸುತ್ತಾರೆಂದು ವಾಡಿಕೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
