ಬೆಳಗಾವಿ
ಮೈತ್ರಿ ಸರ್ಕಾರ ತನ್ನ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ವಿರೋಧ ಪಕ್ಷಗಳನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲು ಹೊರಟಿದ್ದು, ಸರ್ಕಾರಕ್ಕೆ ಅಧಿವೇಶನ ಬಗ್ಗೆ ಗಂಭೀರತೆಯೇ ಇಲ್ಲ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಬಿ.ಎಸ್ ಯಡಿಯೂರಪ್ಪ ವಾಗ್ದಾಳಿ ನಡೆಸಿದ್ದಾರೆ
ವಿಧಾನಸಭೆಯ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನಪರ ಸಮಸ್ಯೆಗಳನ್ನು ಬಗೆ ಹರಿಸುವುದು ಸರ್ಕಾರಕ್ಕೆ ಬೇಕಾಗಿಲ್ಲ. ಕೊನೆಯ ದಿನದ ಅಧಿವೇಶನದಲ್ಲಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಕಲಾಪದಲ್ಲಿ ಪಾಲ್ಗೊಂಡು ಸರ್ಕಾರದಿಂದ ಆಗಿರುವ ತಪ್ಪುಗಳ ಬಗ್ಗೆ ವಿಷಾದ ವ್ಯಕ್ತಪಡಿಸುವ ಕನಿಷ್ಟ ಸೌಜನ್ಯವನ್ನು ತೋರಿಲ್ಲ. ಸೊಕ್ಕು ಮತ್ತು ಅಹಂಕಾರದಿಂದ ವರ್ತಿಸಿದ್ದಾರೆ. ಧಿಮಾಕಿನ ಮಾತು ಮುಂದುವರಿಸಿರುವುದು ಸರಿಯಲ್ಲ. ಇಂಥ ಸರ್ಕಾರಕ್ಕೆ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.
ಸಾಲ ಮನ್ನಾ ವಿಚಾರದಲ್ಲಿ ಸರ್ಕಾರ ಸ್ಪಷ್ಟ ಉತ್ತರ ನೀಡಲಿಲ್ಲ. ಬದಲಾಗಿ ರಾಷ್ಟ್ರೀಕೃತ ಬ್ಯಾಂಕ್‍ಗಳ ಜತೆ ಬಿಜೆಪಿ ನಾಯಕರು ಶಾಮಿಲಾಗಿ ಸಾಲಮನ್ನಾ ಜಾರಿಗೆ ಅಡ್ಡಿಪಡಿಸುತ್ತಿದ್ದಾರೆ ಎಂದು ಸರ್ಕಾರ ಇಲ್ಲ ಸಲ್ಲದ ಆರೋಪ ಮಾಡಿದೆ.
ರೈತರ ಸಾಲಮನ್ನಾ ವಿಚಾರದಲ್ಲಿ ಸರ್ಕಾರಕ್ಕೆ ಸ್ಪಷ್ಟತೆ ಇಲ್ಲ. ಮುಖ್ಯಮಂತ್ರಿಗಳು ವಿಭಿನ್ನ ಹೇಳಿಕೆ ನೀಡಿ ರೈತರನ್ನು ದಾರಿ ತಪ್ಪಿಸಿದ್ದಾರೆ. ಸೌಜನ್ಯಕ್ಕಾದರೂ ವಿರೋಧ ಪಕ್ಷಗಳ ಜತೆ ಚರ್ಚೆ ಮಾಡಲಿಲ್ಲ ಎಂದರು.ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆಯೂ ಸರಿಯಾಗಿ ಚರ್ಚೆ ಮಾಡಲು ಅವಕಾಶ ಕಲ್ಪಿಸಲಿಲ್ಲ. ಸರ್ಕಾರ ಕಾಟಾಚರಕ್ಕೆ ಅಧಿವೇಶನ ಮಾಡಿದೆ. ರಾಜ್ಯದ ಆರೂವರೆ ಕೋಟಿ ಜನ ಇದನ್ನು ನೋಡಿದ್ದಾರೆ ಎಂದು ಯಡಿಯೂರಪ್ಪ ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
