ಹುಳಿಯಾರು
ಹುಳಿಯಾರು ಕೋಡಿಪಾಳ್ಯದ ಧ್ಯಾನನಗರಿಯ ಕಂಕಾಳಿ ಮತ್ತು ತುಳಜಾ ಭವಾನಿ ದೇಗುಲದ ಎರಡನೇ ವರ್ಷದ ವಾರ್ಷಿಕೋತ್ಸವಕ್ಕೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಖ್ಯಾತ ಚಲನಚಿತ್ರನಟ ಹ್ಯಾಟ್ರಿಕ್ ಹಿರೋ ಶಿವರಾಜ್‍ಕುಮಾರ್ ಅವರನ್ನು ಆಹ್ವಾನಿಸಲಾಗುವುದು ಎಂದು ಮಾತಾ ಟ್ರಸ್ಟ್‍ನ ಅಧ್ಯಕ್ಷ ಗಂಗಾಧರ್ ತಿಳಿಸಿದರು.
ಭಾನುವಾರ ಈ ಸಂಬಂಧ ಕರೆಯಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿ ಮೇ 14 ಕ್ಕೆ ಕಂಕಾಳಿ ಮತ್ತು ತುಳಜಾ ಭವಾನಿ ದೇಗುಲ ಪ್ರಾರಂಭೋತ್ಸವಗೊಂಡು 2 ವರ್ಷ ತುಂಬುತ್ತದೆ. ಹಾಗಾಗಿ ಮೇ.13 ರಂದು ಚಂಡಿಕಾ ಯಾಗ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಗಳು ನಡೆಯಲಿವೆ.
ಮೇ. 14 ರಂದು ಸಂಜೆ ಜೀ ಕನ್ನಡ ವಾಹಿನಿಯ ಸರಿಗಮಪ ಸ್ಟಾರ್ ಸಿಂಗರ್ಸ್ ಅವರಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಸರಿಗಮಪ ಖ್ಯಾತಿಯ ಹನುಮಂತ ಸೇರಿದಂತೆ ಹೆಸರಾಂತ ಗಾಯಕರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಹುಳಿಯಾರನ್ನು ಜಿಲ್ಲೆಯಲ್ಲಿಯೇ ಪ್ರಖ್ಯಾತ ಸಾಂಸ್ಕೃತಿಕ ಕೇಂದ್ರವನ್ನಾಗಿಸುವ ದೃಷ್ಟಿಯಿಂದ ವರ್ಷಪೂರ್ತಿ ಜನಪದ ಸೇರಿದಂತೆ ಇತರ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ರಂಗ ಪಂಚಮಿ ಸಂಸ್ಥೆಯ ತೊಟ್ಟವಾಡಿ ನಂಜುಂಡಸ್ವಾಮಿ ತಿಳಿಸಿದರು.
ಮಾತಾ ಚಾರಿಟಬಲ್ ಟ್ರಸ್ಟ್ ಸಹಕಾರದೊಂದಿಗೆ ಮೇ.30 ರಿಂದ ಏ.4 ರವರೆಗೆ 5 ದಿನ ಜನಪರ ಸಂಸ್ಕೃತಿ ಉತ್ಸವ ನಡೆಯಲಿದೆ. ಶೇಕ್ಸ್‍ಪೀಯರ್, ಕುವೆಂಪು, ಶರೀಫ್ ಸೇರಿದಂತೆ ಶರಣರ ನಾಟಕಗಳ ಪ್ರದರ್ಶನ ನಡೆಯಲಿದೆ. ಅಲ್ಲದೆ ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಜೂನ್ 15 ರಂದು ಚಲನಚಿತ್ರೋತ್ಸವ ಕೂಡ ನಡೆಯಲಿದೆ ಎಂದರು.
ಪೂರ್ವಭಾವಿ ಸಭೆಯಲ್ಲಿ ದಾನಿಗಳಾದ ಬ್ಯಾಂಕ್ ಮರುಳಯ್ಯ, ರೈತ ಸಂಘದ ಕೆಂಕೆರೆ ಸತೀಶ್, ದಾಸಪ್ಪ, ಕಲಾವಿದ ಗೌಡಿ, ಪಟ್ಟಣ ಪಂಚಾಯಿತಿ ಸದಸ್ಯರಾದ ಎಲ್.ಆರ್.ಚಂದ್ರಶೇಖರ್, ಡಾಬಾಸೂರಪ್ಪ, ಮುಖಂಡರಾದ ಎಚ್.ಕೆ.ವಿಶ್ವನಾಥ್, ಬಡಗಿ ರಾಮಣ್ಣ, ಕೆ.ಸಿ.ಉಮೇಶ್, ನಂದಿಹಳ್ಳಿ ಶಿವಣ್ಣ, ಜಲಾಲ್ ಸಾಬ್, ಕಾಯಿಬಸವರಾಜು, ಚಂದ್ರಶೇಖರ್, ಪಪಂ ಆನಂದ್, ಸ್ಟುಡಿಯೋ ದರ್ಶನ್ ಮತ್ತಿತರರು ಇದ್ದರು.