ಕಾಂಗ್ರೆಸ್ ವರಿಷ್ಠರಿಗೆ ದೂರು ನೀಡಲು ಮುಂದಾದ ಹೆಚ್ ವಿಶ್ವನಾಥ್..!!

ಬೆಂಗಳೂರು

       ಭೂ ಮಾಫಿಮಾ ಲಾಬಿಗೆ ಸಿಎಂ ಕುಮಾರಸ್ವಾಮಿ ಮಣಿಯದೆ ಇರುವುದರಿಂದ ಕಾಂಗ್ರೆಸ್ ನಾಯಕರೊಬ್ಬರನ್ನು ಹಿಡಿದುಕೊಂಡು ಸರ್ಕಾರವನ್ನು ಉರುಳಿಸಲು ಅವರು ಸಂಚು ನಡೆಸಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್ ಅವರು ಕೈ ಪಾಳೆಯದ ವರಿಷ್ಟರಿಗೆ ದೂರು ನೀಡಲು ನಿರ್ಧರಿಸಿದ್ದಾರೆ.

     ಉನ್ನತ ಮೂಲಗಳು ಈ ವಿಷಯವನ್ನು ತಿಳಿಸಿದ್ದು,ಹಿಂದಿನ ಸರ್ಕಾರದಲ್ಲಿ ಪ್ರಭಾವಿಯಾಗಿದ್ದ ಭೂ ಮಾಫಿಯಾ ಲಾಬಿ ಸಾವಿರಾರು ಕೋಟಿಯ ಪ್ರಾಜೆಕ್ಟುಗಳನ್ನು ಅನುಷ್ಟಾನಗೊಳಿಸುತ್ತಿದ್ದು ಇದರಲ್ಲಿ ಭಾರೀ ಪ್ರಮಾಣದ ಆಕ್ರಮ ನಡೆದಿದೆ.ಇದನ್ನು ಗುರುತಿಸಿರುವುದೇ ಕುಮಾರಸ್ವಾಮಿ ಅವರ ಅಪರಾಧ ಎಂದು ಕಾಂಗ್ರೆಸ್ ವರಿಷ್ಟರಿಗೆ ವಿವರಿಸಲು ವಿಶ್ವನಾಥ್ ತೀರ್ಮಾನಿಸಿದ್ದಾರೆ.

       ಭೂಮಾಫಿಯಾ ಜಾರಿಗೊಳಿಸುತ್ತಿರುವ ಬಹುತೇಕ ಯೋಜನೆಗಳು ಆಕ್ರಮವಾದ್ದರಿಂದ ಇವುಗಳಿಗೆ ಅಂಗೀಕಾರದ ಮುದ್ರೆಯೊತ್ತುವುದು ಕುಮಾರಸ್ವಾಮಿ ಅವರಿಗೆ ಇಷ್ಟವಿಲ್ಲ.ಹಾಗೊಂದು ವೇಳೆ ಅವರು ಅಂಗೀಕಾರದ ಮುದ್ರೆಯೊತ್ತಿದರೆ ಈ ಹಿಂದೆ ಸಿಎಂ ಆಗಿದ್ದವರೊಬ್ಬರು ಜೈಲು ಸೇರಿದಂತೆ ಅವರೂ ಜೈಲು ಸೇರಬೇಕಾಗುತ್ತದೆ.

         ಹೀಗಾಗಿ ಅವರು ಭೂಮಾಫಿಯಾ ಲಾಬಿಗೆ ಮಣಿಯುತ್ತಿಲ್ಲ.ಇದರಿಂದ ಹತಾಶರಾದ ಭೂಮಾಫಿಯಾದ ಹಲ ಪ್ರಮುಖರು ಕಾಂಗ್ರೆಸ್ ನಾಯಕರೊಬ್ಬರನ್ನು ಹಿಡಿದುಕೊಂಡು ಸರ್ಕಾರ ಉರುಳಿಸಲು ಸಂಚು ನಡೆಸಿದ್ದಾರೆ.ಹೇಗಾದರೂ ಮಾಡಿ ಕುಮಾರಸ್ವಾಮಿ ನೇತೃತ್ವದ ಸರ್ಕಾರ ಉರುಳಿಸಬೇಕು.ಯಡಿಯೂರಪ್ಪ ನೇತೃತ್ವದ ಬಿಜೆಪಿ ಅಧಿಕಾರಕ್ಕೆ ಬರುವಂತೆ ಮಾಡಬೇಕು.ಹಾಗೆ ಮಾಡಿದರೆ ನಮ್ಮ ಯೋಜನೆಗಳಿಗೆ ಅಂಗೀಕಾರದ ಮುದ್ರೆ ಬೀಳುತ್ತದೆ.

         ಹಾಗಿಲ್ಲದೆ ಹೋದರೆ ನಾವು ಹೂಡಿರುವ ಭಾರೀ ಪ್ರಮಾಣದ ಬಂಡವಾಳಕ್ಕೆ ತೊಂದರೆಯಾಗುತ್ತದೆ.ಸನ್ನಿವೇಶ ಬಂದಾಗ ನಾವು ನಿಮ್ಮ ಜತೆ ನಿಂತಿದ್ದೇವೆ.ಈಗ ನೀವು ನಮ್ಮ ಜತೆ ನಿಲ್ಲಿ ಎಂದು ಈ ಭೂಮಾಫಿಯಾ ಪ್ರಮುಖರು ಒತ್ತಾಯಿಸುತ್ತಿದ್ದಾರೆ.

         ನಿಮ್ಮ ಜತೆಗಿರುವ ಶಾಸಕರ ಪೈಕಿ ಹಲವರನ್ನು ಯಡಿಯೂರಪ್ಪ ಅವರು ಸಿಎಂ ಆಗಲು ಪೂರಕವಾಗುವಂತೆ ಬಿಜೆಪಿಯ ಕಡೆ ಕಳಿಸಿ.ಆ ಮೂಲಕ ಕುಮಾರಸ್ವಾಮಿ ನೇತೃತ್ವದ ಸರ್ಕಾರ ಉರುಳಿಸಿ ಎಂದು ಹಲ ಭೂಮಾಫಿಯಾ ಪ್ರಮುಖರು ಈ ಕಾಂಗ್ರೆಸ್ ನಾಯಕರ ಮೇಲೆ ಒತ್ತಡ ಹೇರಿದ್ದಾರೆ.

      ಅವರ ಒತ್ತಡಕ್ಕೆ ಸ್ಪಂದಿಸಿರುವ ಕಾಂಗ್ರೆಸ್‍ನ ಈ ನಾಯಕರು ಕೂಡಾ ಸರ್ಕಾರ ಉರುಳಿಸಲು ಪೂರಕವಾಗುವಂತೆ ಹಲ ಶಾಸಕರಿಗೆ ಬಿಜೆಪಿ ಕಡೆ ಹೋಗಲು ಗ್ರೀನ್ ಸಿಗ್ನಲ್ ತೋರಿಸಿದ್ದಾರೆ.ಹೀಗಾಗಿ ಮುಂದಿನ ಹೆಜ್ಜೆ ಇಡುವುದು ನಿಮಗೆ ಸೇರಿದ್ದು ಎಂದು ಕಾಂಗ್ರೆಸ್ ವರಿಷ್ಟರಿಗೆ ವಿವರಿಸುವುದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್ ಅವರ ಉದ್ದೇಶ.ಇದೇ ಕಾರಣಕ್ಕಾಗಿ ಈ ತಿಂಗಳ ಹದಿನೆಂಟರಂದು ಅವರು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರನ್ನು ಭೇಟಿ ಮಾಡುತ್ತಿದ್ದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ನೋಡಿಕೊಳ್ಳುತ್ತಿರುವ ಕೆ.ಸಿ.ವೇಣುಗೋಪಾಲ್ ಅವರನ್ನು ಭೇಟಿ ಮಾಡಿಸುವಂತೆ ಅವರು ಗೌಡರನ್ನು ಕೋರಿಕೊಳ್ಳಲಿದ್ದಾರೆ.

     ಇದಕ್ಕೆ ದೇವೇಗೌಡರು ಒಪ್ಪಿದರೆ ದಾಖಲೆಗಳ ಸಮೇತ ಕೆ.ಸಿ.ವೇಣುಗೋಪಾಲ್ ಅವರನ್ನು ಭೇಟಿ ಮಾಡಿ ಚರ್ಚಿಸಲು ವಿಶ್ವನಾಥ್ ನಿರ್ಧರಿಸಿದ್ದು,ಕಾಂಗ್ರೆಸ್‍ನ ಸದರಿ ನಾಯಕರು ಹೇರುತ್ತಿರುವ ಒತ್ತಡಕ್ಕೆ ಬಗ್ಗಿ,ಕುಮಾರಸ್ವಾಮಿ ಜೈಲಿಗೆ ಹೋಗಬೇಕೋ?ಅಥವಾ ಸರ್ಕಾರ ತಪ್ಪುಗಳಿಲ್ಲದಂತೆ ನಡೆಯಬೇಕೋ?ಎಂದು ಕೇಳಲಿದ್ದಾರೆ.

     ಉನ್ನತ ಮೂಲಗಳ ಪ್ರಕಾರ,ಕೆ.ಸಿ.ವೇಣುಗೋಪಾಲ್ ಅವರು ರಾಜ್ಯದಲ್ಲಿ ಮೈತ್ರಿಕೂಟ ಸರ್ಕಾರ ಮುಂದುವರಿಯುವ ಬಗ್ಗೆ ಕಾಳಜಿ ಹೊಂದಿದ್ದು ಕೇಂದ್ರದಲ್ಲಿ ಯುಪಿಎ ಮೈತ್ರಿಕೂಟ ಅಧಿಕಾರಕ್ಕೆ ಬಂದರೂ ಅದು ಸುಭದ್ರವಾಗಿರಬೇಕು.ಎನ್‍ಡಿಎ ಬಂದರಂತೂ ಮತ್ತಷ್ಟು ಗಟ್ಟಿಯಾಗಬೇಕು ಎಂದು ಬಯಸಿದ್ದಾರೆ.

      ಅವರ ಈ ಬಯಕೆಯ ಹಿನ್ನೆಲೆಯಲ್ಲಿ ವಿಶ್ವನಾಥ್ ಅವರು ದಾಖಲೆಗಳ ಸಮೇತ ಭೇಟಿ ಮಾಡಿ ವಿಷಯ ವಿವರಿಸಿದರೆ ಪರಿಸ್ಥಿತಿ ತಿಳಿಯಾಗುತ್ತದೆ ಎಂಬುದು ಒಂದು ಲೆಕ್ಕಾಚಾರ.ಈ ಲೆಕ್ಕಾಚಾರದೊಂದಿಗೇ ವಿಶ್ವನಾಥ್ ಅವರು ಕೆ.ಸಿ.ವೇಣುಗೋಪಾಲ್ ಅವರನ್ನು ಭೇಟಿಯಾಗಲು ಉತ್ಸುಕರಾಗಿದ್ದಾರೆ.ನಿಮಗೆ ಸರ್ಕಾರ ಬೇಕೋ?ಅಥವಾ ರಾಜ್ಯ ವಿಧಾನಸಭೆಯ ಪ್ರತಿಪಕ್ಷದ ನಾಯಕನ ಸ್ಥಾನಮಾನ ಬೇಕೋ?ಎಂದು ಕೆ.ಸಿ.ವೇಣುಗೋಪಾಲ್ ಅವರನ್ನು ಪ್ರಶ್ನಿಸಲು ಹೆಚ್.ವಿಶ್ವನಾಥ್ ನಿರ್ಧರಿಸಿದ್ದು ಈ ಬೆಳವಣಿಗೆ ರಾಜಕೀಯ ವಲಯಗಳಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap