ಸಚಿವ ಸಂಪುಟ ವಿಸ್ತರಣೆ : ಹೆಚ್ ವಿಶ್ವನಾಥ ಸೇರ್ಪಡೆ ಸಾಧ್ಯತೆ ..!!

ಬೆಂಗಳೂರು

    ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ರಾಜ್ಯ ಸಚಿವ ಸಂಪುಟ ಶುಕ್ರವಾರ ವಿಸ್ತರಣೆಯಾಗಲಿದ್ದು ಅನಿರೀಕ್ಷಿತ ಬೆಳವಣಿಗೆಯಲ್ಲಿ ಹಿರಿಯ ನಾಯಕ ಹೆಚ್.ವಿಶ್ವನಾಥ್‌ ಮಂತ್ರಿ ಮಂಡಲಕ್ಕೆ ಸೇರ್ಪಡೆಯಾಗುವ ಲಕ್ಷಣಗಳು ಕಾಣತೊಡಗಿವೆ.

    ಶುಕ್ರವಾರ ಮಧ್ಯಾಹ್ನ ೧:೩೦ ಕ್ಕೆ ರಾಜಭವನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪಕ್ಷೇತರ ಶಾಸಕರಿಬ್ಬರು ಮಂತ್ರಿಗಳಾಗುವುದು ನಿಶ್ಚಿತವಾಗಿದೆಯಾದರೂ ಕೊನೆಯ ಕ್ಷಣದಲ್ಲಿ ಜೆಡಿಎಸ್‌ ವತಿಯಿಂದ ವಿಶ್ವನಾಥ್‌ ಅವರು ಮಂತ್ರಿಯಾಗುವ ಸಾಧ್ಯತೆಗಳಿವೆ.ಜೆಡಿಎಸ್‌ ಕೋಟಾದಲ್ಲಿ ಎರಡು ಮಂತ್ರಿ ಸ್ಥಾನಗಳು ಖಾಲಿ ಉಳಿದಿದ್ದು ಈ ಪೈಕಿ ಒಂದನ್ನು ಅದು ಪಕ್ಷೇತರ ಶಾಸಕರಿಗೆ ಬಿಟ್ಟು ಕೊಡಲು ನಿರ್ಧರಿಸಿದೆ.

    ಕಾಂಗ್ರೆಸ್‌ ಕೋಟಾದಲ್ಲಿ ಕೇವಲ ಒಂದು ಸ್ಥಾನ ಮಾತ್ರ ಬಾಕಿ ಇದ್ದು,ಈ ಹಿನ್ನೆಲೆಯಲ್ಲಿ ಅದು ಜೆಡಿಎಸ್‌ ಕೋಟಾದ ಎರಡು ಸ್ಥಾನಗಳ ಪೈಕಿ ಒಂದನ್ನು ಕೇಳಿ ಪಡೆದಿದೆ.ಜೆಡಿಎಸ್‌ ವತಿಯಿಂದ ಖಾಲಿ ಉಳಿದಿರುವ ಎರಡು ಮಂತ್ರಿ ಸ್ಥಾನಗಳನ್ನು ತನಗೇ ಬಿಟ್ಟುಕೊಡುವಂತೆ ಅದು ಕೇಳಿತಾದರೂ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು ಇದಕ್ಕೊಪ್ಪಲಿಲ್ಲ.

     ಈ ಹಿನ್ನೆಲೆಯಲ್ಲಿ ಜೆಡಿಎಸ್‌ ಬಿಟ್ಟು ಕೊಟ್ಟ ಒಂದು ಸ್ಥಾನವನ್ನು ಭರ್ತಿ ಮಾಡಲು ನಿರ್ಧರಿಸಿರುವ ಕಾಂಗ್ರೆಸ್‌ ಪಕ್ಷ ತನ್ನ ಕೋಟಾವನ್ನು ಭರ್ತಿ ಮಾಡದೆ ಇರಲು ನಿರ್ಧರಿಸಿದೆ.ಆದರೆ ಈ ಒಂದು ಸ್ಥಾನವನ್ನು ರಾಮಲಿಂಗಾರೆಡ್ಡಿ ಅವರಿಗೆ ನೀಡಬೇಕು ಎಂಬ ಒತ್ತಡ ಹೆಚ್ಚಿದೆಯಾದರೂ ಈ ಸ್ಥಾನವನ್ನು ಭರ್ತಿ ಮಾಡಿದರೆ ಹೆಚ್.ಕೆ.ಪಾಟೀಲ್‌ ಸೇರಿದಂತೆ ಇನ್ನುಳಿದ ಹಿರಿಯ ನಾಯಕರು ಬಂಡಾಯ ಏಳಬಹುದು ಎಂಬುದು ಕಾಂಗ್ರೆಸ್‌ ಲೆಕ್ಕಾಚಾರ.

     ಈ ಹಿನ್ನೆಲೆಯಲ್ಲಿ ಶುಕ್ರವಾರ ನಡೆಯಲಿರುವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಪಕ್ಷೇತರ ಶಾಸಕರಿಬ್ಬರು ಮಂತ್ರಿಗಳಾಗುವ ಸಾಧ್ಯತೆ ನಿಚ್ಚಳವಾಗಿದೆ.ಕುತೂಹಲದ ಬೆಳವಣಿಗೆ ಎಂದರೆ ಇಂದು ಜೆಡಿಎಸ್‌ ತನ್ನ ಲೆಕ್ಕಾಚಾರವನ್ನು ಪರಿವರ್ತಿಸಿಕೊಂಡಿರುವುದು.ಅದರ ಪ್ರಕಾರ,ಅದು ಸಚಿವ ಸಂಪುಟಕ್ಕೆ ಹಿರಿಯ ನಾಯಕ,ಹುಣಸೂರು ಕ್ಷೇತ್ರದ ಶಾಸಕ ಹೆಚ್.ವಿಶ್ವನಾಥ್‌ ಅವರನ್ನು ಸೇರ್ಪಡೆ ಮಾಡಿಕೊಳ್ಳಲು ಯೋಚಿಸಿದೆ.

      ಈ ಸಂಬಂಧ ಖುದ್ದು ಮಾಜಿ ಪ್ರಧಾನಿ ದೇವೇಗೌಡ ಅವರು ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಜತೆ ಚರ್ಚೆ ನಡೆಸಿದ್ದು,ಈಗಾಗಲೇ ಸಚಿವ ಸಂಪುಟದಲ್ಲಿರುವ ಕುರುಬ ಸಮುದಾಯದ ಬಂಡೆಪ್ಪ ಕಾಶೆಂಪೂರ್‌ ಅವರನ್ನು ಕೈ ಬಿಟ್ಟು ಹೆಚ್.ವಿಶ್ವನಾಥ್‌ ಅವರನ್ನು ಮಂತ್ರಿ ಮಾಡುವುದು ಒಳ್ಳೆಯದು ಎಂದಿದ್ದಾರೆ.ಉನ್ನತ ಮೂಲಗಳು ಈ ವಿಷಯವನ್ನು ತಿಳಿಸಿದ್ದು,ಹೀಗೆ ಬಂಡೆಪ್ಪ ಕಾಶೆಂಪೂರ್‌ ಅವರನ್ನು ಮಂತ್ರಿ ಮಂಡಲದಿಂದ ಕೈ ಬಿಟ್ಟು ವಿಶ್ವನಾಥ್‌ ಅವರನ್ನು ಮಂತ್ರಿ ಮಾಡುವುದು.ಹಾಗೆಯೇ ವಿಶ್ವನಾಥ್‌ ಅವರ ರಾಜೀನಾಮೆಯಿಂದ ತೆರವಾಗಿರುವ ಜೆಡಿಎಸ್‌ ರಾಜ್ಯಾಧ್ಯಕ್ಷ ಸ್ಥಾನವನ್ನು ಬಂಡೆಪ್ಪ ಕಾಶೆಂಪೂರ್‌ ಅವರಿಗೆ ನೀಡುವುದು ಸೂಕ್ತ.

     ಅಲ್ಲಿಗೆ ಮಂತ್ರಿಮಂಡಲದಿಂದ ಕೈ ಬಿಟ್ಟರೂ ಬಂಡೆಪ್ಪ ಕಾಶೆಂಪೂರ್‌ ಅವರಿಗೆ ನಿರಾಸೆಯಾಗುವುದಿಲ್ಲ.ಹಾಗೆಯೇ ವಿಶ್ವನಾಥ್‌ ಅವರಿಗೂ ಸಚಿವ ಸ್ಥಾನ ದೊರಕಿಸಿಕೊಟ್ಟರೆ ಅವರಿಗಿರುವ ಬೇಸರವೂ ನಿವಾರಣೆಯಾಗುತ್ತದೆ ಎಂಬುದು ದೇವೇಗೌಡರ ಯೋಚನೆ.ಈ ಬೆಳವಣಿಗೆ ರಾಜಕೀಯ ವಲಯಗಳಲ್ಲಿ ಕುತೂಹಲ ಕೆರಳಿಸಿದ್ದು ವಿಶ್ವನಾಥ್‌ ಮಂತ್ರಿಯಾಗುತ್ತಾರೆಯೇ?ಎಂಬುದನ್ನು ಕಾದು ನೋಡಬೇಕು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap