ಹುಳಿಯಾರು
ಪಟ್ಟಣದ ಕೇಶವ ವಿದ್ಯಾಮಂದಿರ ಹೆಚ್‍ಪಿಎಸ್ ಶಾಲೆಯಲ್ಲಿ ಆರೋಗ್ಯ ಇಲಾಖೆ ವತಿಯಿಂದ ಹೆಚ್ 1 ಎನ್ 1 ಕಾಯಿಲೆ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ಎಲ್‍ಹೆಚ್‍ವಿ ಅನುಸೂಯಮ್ಮನವರು ಮಕ್ಕಳಿಗೆ ಹೆಚ್ 1 ಎನ್ 1 ರೋಗವು ಯಾವ ರೀತಿ ಎಲ್ಲಾ ಕಡೆ ಹರಡುತ್ತಿದೆ, ಅದನ್ನು ತಡೆಗಟ್ಟುವಲ್ಲಿ ವಿದ್ಯಾರ್ಥಿಗಳ ಪಾತ್ರ ಎಷ್ಟು ಮುಖ್ಯ ಎಂಬುದರ ಬಗ್ಗೆ ಮಾಹಿತಿ ನೀಡಿದರು. ಈ ಕಾಯಿಲೆಯ ಲಕ್ಷಣಗಳಾದ ಶೀತ, ತಲೆನೋವು, ಗಂಟಲು ನೋವು, ಕೆಮ್ಮು ಮತ್ತು ಜ್ವರ ಕಾಣಿಸಿಕೊಳ್ಳುವುದು , ಚಳಿಯಿಂದ ದೇಹ ಬಳಲುವುದು, ಉಸಿರಾಟದ ತೊಂದರೆ ಉಂಟಾಗುವುದು ಕಾಣಿಸಿಕೊಂಡಲ್ಲಿ ಕೂಡಲೇ ವೈದ್ಯರನ್ನು ಸಂಪರ್ಕಿಸಿ ಎಂದರು. ಜೊತೆಗೆ ಈ ಎಲ್ಲಾ ಲಕ್ಷಣಗಳಿರುವ ವ್ಯಕ್ತಿಯು ಕೆಮ್ಮಿದಾಗ, ಸೀನಿದಾಗ ಇತರರಿಗೆ ವೈರಸ್ ಹರಡುತ್ತದೆ. ಆದ ಕಾರಣ ಮಕ್ಕಳು ಊಟ ಮಾಡುವುದಕ್ಕಿಂತ ಮುಂಚಿತವಾಗಿ ಕೈತೊಳೆದುಕೊಳ್ಳುವುದು, ಕೆಮ್ಮುವಾಗ ಬೇರೆಯವರಿಗೆ ತೊಂದರೆಯಾಗದಂತೆ , ಕಂಡ ಕಂಡ ಸ್ಥಳಗಳಲ್ಲಿ ಸೀನುವುದು ಕಾಯಿಲೆಗೆ ದಾರಿ ಮಾಡಿಕೊಟ್ಟಂತಾಗುತ್ತದೆ ಎಂದರು. ಮಕ್ಕಳು ಮನೆಗಳಲ್ಲಿ ಹಾಗೂ ಶಾಲೆಗಳಲ್ಲಿ ಊಟದಲ್ಲಿರುವ ತರಕಾರಿಯನ್ನು ಹೆಚ್ಚಿನ ರೀತಿಯಲ್ಲಿ ತಿನ್ನಬೇಕು. ಪೌಷ್ಟಿಕ ಆಹಾರವಾದ ಹಾಲನ್ನು ಎಲ್ಲಾ ಮಕ್ಕಳು ಸರಿಯಾದ ರೀತಿಯಲ್ಲಿ ಕುಡಿಯಬೇಕು ಎಂದು ತಿಳಿಸಿದರು.
ಶಾಲೆಯ ಮುಖ್ಯೋಪಾಧ್ಯಾಯ ಹೆಚ್.ಬಿ.ಸನತ್ ಕುಮಾರ್ ಮಾತನಾಡಿ ಉತ್ತಮವಾದ ಆಹಾರ ಸೇವನೆ ಇದ್ದಲ್ಲಿ ಯಾವುದೇ ರೋಗರುಜಿನಗಳು ಇರುವುದಿಲ್ಲ ಹಾಗೂ ಸದೃಢವಾದ ದೇಹದಲ್ಲಿ ಸದೃಢವಾದ ಮನಸ್ಸು ಇರುತ್ತದೆ. ಆಗ ಇಡೀ ವಾತಾವರಣವೇ ರೋಗಮುಕ್ತವಾಗಿರುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಆರೋಗ್ಯ ಸಿಬ್ಬಂದಿಗಳಾದ ಮಹಾಲಕ್ಷ್ಮಿ, ಉಮಾ, ಚಂದ್ರಕಾಂತ ನಂದವಾಡಗಿ, ಜ್ಯೋತಿ ಕಲಾ ಹಾಗೂ ಶಾಲೆಯ ಶಿಕ್ಷಕರುಗಳಾದ ರವಿಶಂಕರ್, ಶ್ರೀನಿವಾಸ , ಮಧು, ಚಂದ್ರಕಲಾ, ಆಶಾ, ಸುಗುಣ ಸೇರಿದಂತೆ ಎಲ್ಲಾ ಮಕ್ಕಳು ಉಪಸ್ಥಿತರಿದ್ದರು.
.ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
