ಹುಳಿಯಾರು
ರಾಜ್ಯ ಬರಗಾಲದಿಂದ ತತ್ತರಿಸುತ್ತಿದ್ದು ಸಮಪರ್ಕವಾಗಿ ವಿದ್ಯುತ್ ಪೂರೈಸುವುದು ಬೆಸ್ಕಾಂಗೆ ಸವಾಲಿನ ಕೆಲಸವಾಗಿದೆ. ಇಂತಹ ದುಸ್ಥಿತಿಯಲ್ಲೂ ಹುಳಿಯಾರು ಪಪಂ ವ್ಯಾಪ್ತಿಯ ಅನೇಕ ಕಂಬಗಳಲ್ಲಿ ವಿದ್ಯುತ್ ದೀಪಗಳು ಸೂರ್ಯನನ್ನು ನಾಚಿಸುವಂತೆ ಉರಿಯುತ್ತಿವೆ.
ಹುಳಿಯಾರಿನ ರಾಜ್ ಕುಮಾರ್ ರಸ್ತೆ, ಬ್ರಾಹ್ಮಣರ ಬೀದಿ, ಲಿಂಗಾಯಿತರ ಬೀದಿ ಸೇರಿದಂಥೆ ಅನೇಕ ಬಡಾವಣೆಗಳಲ್ಲಿ ವಿದ್ಯುತ್ ಕಂಬಗಳಿಗೆ ಜೋಡಿಸಿದ ಬೀದಿ ದೀಪಗಳು ಬೆಳಿಗ್ಗೆ 8 ಗಂಟೆಯಾದರೂ ಆಫ್ ಆಗದೆ ನಿರಂತರವಾಗಿ ಉರಿಯುತ್ತವೆ. ವಿದ್ಯುತ್ ಉರಿಯುವದನ್ನು ಪಪಂ ಸದಸ್ಯರು ಕಂಡೂ ಕಾಣದಂತೆ ತಮ್ಮ ಪಾಡಿಗೆ ತಾವು ಓಡಾಡುತ್ತಿರುತ್ತಾರೆ. ಈ ವಿದ್ಯುತ್ ದೀಪ ಉರಿಯುವ ಬಗ್ಗೆ ಹತ್ತು ಹಲವು ಸಲ ಗ್ರಾಮ ಪಂಚಾಯ್ತಿ, ಹೆಸ್ಕಾಂ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಆದರೆ, ಯಾವುದೇ ಪ್ರಯೋಜನ ಆಗಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ವಿದ್ಯುತ್ ಅಭಾವ ರಾಜ್ಯದೆಲ್ಲೆಡೆ ಇದೆ. ವಿದ್ಯುತ್ ಉಳಿಸಬೇಕಾದದ್ದು ಪ್ರತಿಯೊಬ್ಬರ ಕರ್ತವ್ಯ. ರಾತ್ರಿ ವೇಳೆ ಸಾರ್ವಜನಿಕರಿಗೆ ತೊಂದರೆ ಆಗದಿರಲಿ ಎಂಬ ಉದ್ದೇಶದಿಂದ ಬೀದಿ ದೀಪ ಅಳವಡಿಸಿದೆ. ಸಂಜೆ ಆಗುತ್ತಲೇ ಬೀದಿ ದೀಪಗಳು ಹಚ್ಚಿ, ಬೆಳಗುವಂತೆ ನೋಡಿಕೊಳ್ಳುವುದು ನಿಯಮ. ಆದರೆ, ಈ ಪಟ್ಟಣದಲ್ಲಿ ಅದೆಲ್ಲವೂ ತಿರುವು ಮುರುವು. ಬೀದಿದೀಪದ ವಿದ್ಯುತ್‍ಗೆ ಬಿಲ್ ಪಪಂ ಪಾವತಿಸಬೇಕು. ಹೀಗಿದ್ದರೂ ಪಪಂ ಅಧಿಕಾರಿಗಳು, ಅಧ್ಯಕ್ಷರು, ಸದಸ್ಯರು ಗಮನಿಸದಿರುವುದು ವಿಪರ್ಯಾಸದ ಸಂಗತಿ ಎಂಬುದು ಗುರು ಮೆಡಿಕಲ್ಸ್‍ನ ಅನಿಲ್ ಅವರ ಅಭಿಪ್ರಾಯ.
ಕಂಬದಿಂದ ವೈರ್ ಎಳೆದು ಮೀಟರ್ ಅಳವಡಿಸಿ ಕೊಡುವುದು ಬೆಸ್ಕಾಂ ಕೆಲಸ. ಇನ್ನುಳಿದಂತೆ ಬಲ್ಪ್ ಹಾಕುವುದು. ನಿತ್ಯ ಆಫ್ ಅಂಡ್ ಆನ್ ಮಾಡುವುದು ಪಪಂ ಕೆಲಸ. ಆದರೆ ಅವರು ತಮ್ಮ ಕೆಲಸದಲ್ಲಿ ನಿಲ್ಷ್ಯತೆ ತೋರುತ್ತಿರುವುದಿಂದ ಹಗಲಾದರೂ ಬೀದಿ ದೀಪಗಳು ಉರಿಯುತ್ತಿವೆ. ಅದೆಷ್ಟೋ ಬಾರಿ ಪಪಂ ಗಮನಕ್ಕೆ ತಂದಿದ್ದರೂ ಗಮನಹರಿಸಿಲ್ಲ. ಕನಿಷ್ಟ ಪಕ್ಷ ಪ್ರತಿ ಕಂಬಗಳಿಗೆ ಸ್ವಿಚ್ ಅಳವಡಿಸಿದರೂ ಸಾಕು ದಾರಿಹೋಕರಾದರೂ ಆಫ್ ಮಾಡಿ ಹೋಗುತ್ತಾರೆ. ಆದನ್ನೂ ಮಾಡಲ್ಲ ಸರಿಯಾಗಿ ಆನ್ ಅಂಡ್ ಆಫ್ ಅವರೂ ಮಾಡಲ್ಲ ಎಂದು ಬೆಸ್ಕಾಂ ಸೆಕ್ಷನ್ ಆಫೀಸರ್ ಉಮೇಶ್‍ನಾಯ್ಕ ಅಸಾಯಕತೆಯಿಂದ ನುಡಿಯುತ್ತಾರೆ.
ಇನ್ನಾದರೂ ಪಪಂ ಅಧಿಕಾರಿಗಳು ಎಚ್ಚೆತ್ತುಕೊಂಡು ಈ ಕಂಬಗಳಿಗೆ ಸರಿಯಾದ ವ್ಯವಸ್ಥೆ ಮಾಡಿಸಿ, ರಾತ್ರಿ ಸಮಯದಲ್ಲಿ ಮಾತ್ರ ಉರಿಯುವಂತೆ ಕ್ರಮಕೈಗೊಳ್ಳಬೇಕು. ಜೊತೆಗೆ ಅಗತ್ಯವಿರುವ ಅನೇಕ ಕಡೆ ಬೀದಿದೀಪಗಳನ್ನೂ ಅಳವಡಿಸಬೇಕು ಎಂಬುದು ಜನರ ಒತ್ತಾಯವಾಗಿದೆ.