ಜಲಶಕ್ತಿ ಅಭಿಯಾನ : ಮೊದಲ ಹಂತಕ್ಕೆ ಜಿಲ್ಲೆಯ ಎರಡು ತಾಲ್ಲೂಕುಗಳ ಆಯ್ಕೆ: ಮನೋಜ್ ಕುಮಾರ್

ಬಳ್ಳಾರಿ

    ದೇಶದಾದ್ಯಂತ ಅಂತರ್ಜಲ ಕೊರತೆ, ನೀರಿನ ಅಭಾವದ ಆಧಾರದ ಮೇಲೆ 1590 ಬ್ಲಾಕ್ ಗಳನ್ನು ಗುರುತಿಸಲಾಗಿದ್ದು, ಆ ಬ್ಲಾಕ್ ಗಳಲ್ಲಿ ಜಲಸಂರಕ್ಷಣೆ, ಅಂತರ್ಜಲಮಟ್ಟ ಹೆಚ್ಚಳ ಸೇರಿದಂತೆ ಇನ್ನೀತರ ಜಲ ಸಂಬಂಧಿತ ಕ್ರಮಗಳ ಅನುಷ್ಠಾನಕ್ಕೆ ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಜಲಶಕ್ತಿ ಅಭಿಯಾನದಡಿ ಉದ್ದೇಶಿಸಲಾಗಿದ್ದು, ಮೊದಲ ಹಂತದಲ್ಲಿ ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ಮತ್ತು ಹಗರಿ ಬೊಮ್ಮನಹಳ್ಳಿ ತಾಲೂಕುಗಳು ಆಯ್ಕೆಯಾಗಿವೆ ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ನಿರ್ದೇಶಕ ಮನೋಜ್ ಕುಮಾರ್ ಹೇಳಿದರು.

    ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಜಲಶಕ್ತಿ ಅಭಿಯಾನದ ಅನುಷ್ಠಾನಕ್ಕೆ ಸಂಬಂಧಿಸಿದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

     ಪಾರಂಪರಿಕ ಜಲಮೂಲಗಳಾದ ಕೆರೆ, ಬಾವಿ, ನದಿಗಳ ರಕ್ಷಣೆ, ಜಲಸಂರಕ್ಷಣೆ, ಜಲಮರುಪೂರಣ, ಅರಣ್ಯೀಕರಣ ಮಾಡುವುದು ಜಲಶಕ್ತಿ ಅಭಿಯಾನದ ಪ್ರಮುಖ ಉದ್ದೇಶಗಳಾಗಿದ್ದು, ಇವುಗಳನ್ನು ಈಗಾಗಲೇ ತೀವ್ರ ಸಮಸ್ಯೆ ಎಂದು ಗುರುತಿಸಲಾಗಿರುವ ಹರಪನಹಳ್ಳಿ ಮತ್ತು ಹಗರಿಬೊಮ್ಮನಹಳ್ಳಿ ಬ್ಲಾಕ್‍ಗಳಲ್ಲಿ(ತಾಲೂಕುಗಳು) ಅನುಷ್ಠಾನಕ್ಕೆ ಅಧಿಕಾರಿಗಳು ಕ್ರಮವಹಿಸಬೇಕು ಎಂದು ಅವರು ಸೂಚನೆ ನೀಡಿದರು.

     ಮೊದಲ ಹಂತದ ಜಲಶಕ್ತಿ ಅಭಿಯಾನದ ಅನುಷ್ಠಾನ ಈಗಾಗಲೇ ಜು.1ರಿಂದ ಆರಂಭವಾಗಿದ್ದು, ಸೆಪ್ಟೆಂಬರ್ 15ರವರೆಗೆ ನಡೆಯಲಿದೆ. ಹರಪನಹಳ್ಳಿ ಮತ್ತು ಹಗರಿಬೊಮ್ಮನಹಳ್ಳಿ ಬ್ಲಾಕ್ ಗಳಲ್ಲಿ ಈ ಜಲಶಕ್ತಿ ಅಭಿಯಾನದಡಿ ನಾನಾ ಕೆಲಸಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.

     ”ನರೇಗಾ, ಗ್ರಾಮೀಣ ಅಭಿವೃದ್ಧಿ ಇಲಾಖೆ, ಅರಣ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಯೋಜನೆಗಳನ್ನು ಸಮೀಕರಿಸಿ ಜಲಶಕ್ತಿ ಅಭಿಯಾನಕ್ಕೆ ಆರ್ಥಿಕ ಸಂಪನ್ಮೂಲಗಳನ್ನು ಕ್ರೂಡೀಕರಿಸಲಾಗುವುದು. ಸ್ಥಳೀಯವಾಗಿ ಉತ್ತಮ ಕೆಲಸ ಮಾಡುತ್ತಿರುವ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಅಭಿಯಾನದ ಯಶಸ್ಸಿಗೆ ಶ್ರಮಿಸಲಾಗುವುದು. ಪ್ರತಿ ಬ್ಲಾಕ್‍ಗಳಲ್ಲಿನ ಸಾಧನೆಯನ್ನು ಗುರುತಿಸಿ, ಪುರಸ್ಕರಿಸುವ ಬಗ್ಗೆಯೂ ಚಿಂತನೆ ಇದೆ ಎಂಬ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದರು.

     ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಮಾತನಾಡಿ, ಅಂತರ್ಜಲದ ಕೊರತೆ, ನೀರಿನ ಅಭಾವದ ಆಧಾರದ ಮೇಲೆ ಗುರುತಿಸಲಾಗಿರುವ ಹರಪನಹಳ್ಳಿ ಮತ್ತು ಹಗರಿಬೊಮ್ಮನಹಳ್ಳಿ ಬ್ಲಾಕ್ ಗಳಲ್ಲಿ ಪಾರಂಪರಿಕ ಜಲಮೂಲಗಳ ರಕ್ಷಣೆಗೆ ಕ್ರಮ,ಅರಣ್ಯೀಕರಣ, ಜಲಮರುಪೂರಣ ,ಅಂತರ್ಜಲಮಟ್ಟದ ಹೆಚ್ಚಳಕ್ಕೆ ವಿವಿಧ ಕ್ರಮಗಳನ್ನು ಈಗಾಗಲೇ ಕೈಗೊಳ್ಳಲು ಉದ್ದೇಶಿಸಲಾಗಿದ್ದು, ಅವುಗಳನ್ನ ಅನುಷ್ಠಾನಕ್ಕೆ ಶೀಘ್ರ ತರಲಾಗುವುದು ಎಂದರು.

    ಕೃಷಿಹೊಂಡ ನಿರ್ಮಾಣ, ಕೆರೆ ಹೂಳೆತ್ತುವಿಕೆ, ಇಂಗು ಗುಂಡಿ ನಿರ್ಮಾಣ, ಬದುನಿರ್ಮಾಣ, ಗೋಕಟ್ಟೆ ನಿರ್ಮಾಣ, ಅರಣ್ಯೀಕರಣಕ್ಕೆ ಒತ್ತು, ಮಲ್ಟಿಚೆಕ್ ಡ್ಯಾಂ, ಚೆಕ್‍ಡ್ಯಾಂ ನಿರ್ಮಾಣ ಸೇರಿದಂತೆ ನಾನಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.ಕೃಷಿ, ಸಣ್ಣ ನೀರಾವರಿ, ಬೃಹತ್ ನೀರಾವರಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಪಿಆರ್ ಇಡಿ, ತೋಟಗಾರಿಕೆ ಸೇರಿದಂತೆ ವಿವಿಧ ಇಲಾಖೆಗಳು ಜಲಶಕ್ತಿ ಅಭಿಯಾನದ ಅನುಷ್ಠಾನಕ್ಕೆ ನರೇಗಾ ಅಡಿ ಮತ್ತು ತಮ್ಮ ಇಲಾಖೆಗಳ ಸ್ಟೆಟ್ ಮತ್ತು ಸೆಂಟ್ರಲ್ ಅಡಿಯ ಅನುದಾನದ ಮೂಲಕ ಕ್ರಮ ಕೈಗೊಳ್ಳಬೇಕು. ಈ ಕುರಿತ ಪ್ರಗತಿಯನ್ನು ನೀಡಬೇಕು ಎಂದು ಡಿಸಿ ನಕುಲ್ ಅವರು ಸೂಚನೆ ನೀಡಿದರು.

      ಹರಪನಹಳ್ಳಿ ಮತ್ತು ಹಗರಿಬೊಮ್ಮನಹಳ್ಳಿ ತಾಲೂಕುಗಳಲ್ಲಿ ಜಿಲ್ಲಾ ಖನಿಜ ನಿಧಿ ಮತ್ತು ಎಚ್ ಕೆಆರ್ ಡಿಬಿ ಅನುದಾನನ್ನು ಸಮರ್ಪಕವಾಗಿ ಬಳಸಿಕೊಂಡು ಜಲಸಂರಕ್ಷಣೆ ಮತ್ತು ಅಂತರ್ಜಲಮಟ್ಟದ ಹೆಚ್ಚಳ ಮಾಡಲಾಗುವುದು ಎಂದು ಅವರು ತಿಳಿಸಿದರು.

       ಜಲಶಕ್ತಿ ಅಭಿಯಾನವನ್ನು ಒಂದು ಜನಾಂದೋಲನವಾಗಿ ರೂಪಿಸಬೇಕಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ ಡಿಸಿ ನಕುಲ್ ಅವರು ಈ ಅಭಿಯಾನದ ಯಶಸ್ವಿಗೆ ಸಾರ್ವಜನಿಕರ ಸಹಭಾಗಿತ್ವವು ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಆ ತಾಲೂಕುಗಳ ಗ್ರಾಪಂಗಳಲ್ಲಿನ ಗ್ರಾಮಸಭೆಗಳ ಮೂಲಕ ಮತ್ತು ನೀರು ಬಳಕೆದಾರರ ಸಂಘಗಳ ಮೂಲಕ ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

       ಜಿಪಂ ಸಿಇಒ ಕೆ.ನಿತೀಶ್ ಮಾತನಾಡಿ, ಜಲಶಕ್ತಿ ಅಭಿಯಾನವನ್ನು ಈ ಎರಡು ಬ್ಲಾಕ್ ಗಳಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನ ಗೊಳಿಸಲಾಗುವುದು. ನರೇಗಾ ಮೂಲಕ ಹಾಗೂ ವಿವಿಧ ಇಲಾಖೆಗಳ ಸಂಪನ್ಮೂಲಗಳ ಮೂಲಕ ಜಲಸಂರಕ್ಷಣೆ ಮತ್ತು ಅಂತರ್ಜಲ ಮಟ್ಟದ ಹೆಚ್ಚಳಕ್ಕೆ ಕ್ರಮಕೈಗೊಳ್ಳಲಾಗುವುದು ಎಂದರು.

      ಇದುವರೆಗೆ ಬಳ್ಳಾರಿ ಜಿಪಂ ವತಿಯಿಂದ ನರೇಗಾ ಹಾಗೂ ಇನ್ನೀತರ ಇಲಾಖೆಗಳ ಮೂಲ ಜಲಸಂರಕ್ಷಣೆಗೆ ಕೈಗೊಳ್ಳಲಾದ ಕ್ರಮಗಳು, ಮಳೆ ಸರಿಯಾಗಿ ಬರದೇ ಇರುವುದರಿಂದ ಜಿಲ್ಲೆಯ ರೈತರು ಅನುಭವಿಸುತ್ತಿರುವ ತೊಂದರೆಯನ್ನು ಸಭೆಯ ಗಮನಕ್ಕೆ ತಂದರು.
ಈ ವರ್ಷ ಎಚ್ಕೆಆರ್ಡಿಬಿಯ 4.5 ಕೋಟಿ ಮತ್ತು ಡಿಎಂಎಫ್ ಅಡಿಯ 8ಕೋಟಿ ರೂ.ವೆಚ್ಚದಲ್ಲಿ ಹಗರಿಬೊಮ್ಮನಹಳ್ಳಿ ಮತ್ತು ಕೂಡ್ಲಿಗಿಯ ವಿವಿಧೆಡೆ ಚೆಕ್ ಡ್ಯಾಂಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಮಲ್ಟಿ ಚೆಕ್ ಡ್ಯಾಂಗಳನ್ನು ಈ ವರ್ಷ ನಿರ್ಮಾಣ ಮಾಡಲಾಗುವುದು ಎಂದರು.

      ಜಲಸಂಪನ್ಮೂಲ ಸಚಿವಾಲಯದ ವಿಜ್ಞಾನ ಮುತ್ತು ಕಣ್ಣನ್ ಮಾತನಾಡಿದರು. ಪ್ರೊಬೆಷನರಿ ಐಎಎಸ್ ಅಧಿಕಾರಿ ತನ್ವೀರ್ ಇದ್ದರು
ಈ ಸಂದರ್ಭದಲ್ಲಿ ಕೃಷಿ, ಸಣ್ಣನೀರಾವರಿ, ಬೃಹತ್ ನೀರಾವರಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap