ಹಕ್ಕುಪತ್ರ ವಿತರಣೆ ಮಾಡಲು ಅಧಿಕಾರಿಗಳು ಮೀನಾಮೇಷ

ತುಮಕೂರು

     ಜಿಲ್ಲೆಯಲ್ಲಿ ಸುಮಾರು 2 ಲಕ್ಷ ಮಂದಿ ಅಲೆಮಾರಿ ಸಮುದಾಯದವರು ಜೀವನ ಮಾಡುತ್ತಿದ್ದಾರೆ. ಅಲೆಮಾರಿ ಸಮುದಾಯದವರಿಗೆ ಬರಬೇಕಾದ ಹಕ್ಕುಪತ್ರ ವಿತರಣೆ ಮಾಡುವಲ್ಲಿ ಅಧಿಕಾರಿಗಳು ಮೀಣಾಮೇಷ ಎಣಿಸುತ್ತಿದ್ದಾರೆ ಎಂದು ಅಲೆಮಾರಿ ಮಹಾಸಭಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮಪ್ಪ ಆರೋಪಿಸಿದರು.

    ನಗರದ ಪತ್ರಿಕಾಭವನದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಎರಡು ವರ್ಷದ ಹಿಂದೆಯೆ ಜಿಲ್ಲೆಯ 7 ತಾಲ್ಲೂಕುಗಳಲ್ಲಿ 12.01 ಎಕರೆ ಜಮೀನನ್ನು ಅಲೆಮಾರಿ ಜನಾಂಗದವರಿಗೆ ನಿವೇಶನ ಹಂಚಲು ಮಂಜೂರು ಮಾಡಲಾಗಿದ್ದು, ಈ ಜಮೀನು ಸಣ್ಣ ಪುಟ್ಟ ಗುಡ್ಡಗಳಿಂದ, ತಗ್ಗುಗುಂಡಿಗಳಿಂದ ಸಮತಟ್ಟುಗೊಳಿಸಿ ನಿವೇಶನ ಹಂಚಿಕೆ ಮಾಡಬೇಕು. ಅದಕ್ಕೆ ಹಕ್ಕುಪತ್ರಗಳನ್ನು ನೀಡಬೇಕು ಎಂದು ಒತ್ತಾಯಿಸಿದರು.

      ಈ ಹಿಂದೆ 2019ರ ಅಕ್ಟೋಬರ್ 2ರಂದು ಹುಳಿಯಾರು ಹೋಬಳಿಯಲ್ಲಿ ಪ್ರತಿಭಟನೆ ಮಾಡಿದಾಗ ಸ್ಥಳಕ್ಕೆ ಆಗಮಿಸಿದ್ದ ಜಿಲ್ಲಾಧಿಕಾರಿ ಒಂದು ತಿಂಗಳೊಳಗೆ ಜಾಗ ಹಾಗೂ ಹಕ್ಕುಪತ್ರ ವಿತರಣೆ ಮಾಡುವುದಾಗಿ ಹೇಳಿದ್ದರು. ಆದರೆ ಇಂದಿನವರೆಗೂ ಹಕ್ಕುಪತ್ರ ವಿತರಣೆ ಮಾಡಿಲ್ಲ. ಬದಲಾಗಿ ಜಿಲ್ಲಾಧಿಕಾರಿಗಳಿಗೆ ಕೇಳಿದರೆ ಇತರೆ ಅಧಿಕಾರಿಗಳ ಮೇಲೆ ಸಬೂಬು ಹೇಳುತ್ತಾರೆ. ಕೇವಲ ಒಬ್ಬರ ಮೇಲೆ ಇನ್ನೊಬ್ಬರು ಹೇಳುತ್ತಲೇ ಕಾಲಹರಣ ಮಾಡುತ್ತಿದ್ದಾರೆ ಹೊರತು ನಿವೇಶನಗಳನ್ನು ನೀಡುತ್ತಿಲ್ಲ ಎಂದರು.

      ಅಲೆಮಾರಿ, ಅರೆ ಅಲೆಮಾರಿ, ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಅಲೆಮಾರಿ ಸಮುದಾಯಗಳ ಅಭಿವೃದ್ಧಿ ಕೋಶದಿಂದ ಅನುದಾನ ಬಿಡುಗಡೆಯಾದರೂ ನಿರ್ಮಿತಿ ಕೇಂದ್ರದ ಅಧಿಕಾರಿಗಳು ಸಮುದಾಯದವರ ಮೇಲೆಂ ಕೀಳಾಗಿ ಮಾತನಾಡುತ್ತಿದ್ದಾರೆ. ಈ ಸಂಬಂಧ ಮಾರ್ಚ್ 2 ವರೆಗೆ ಗಡುವು ನೀಡಲಾಗುತ್ತಿದ್ದು, ಅಷ್ಟರೊಳಗೆ ನಮ್ಮ ಬೇಡಿಕೆಗಳನ್ನು ಈಡೇರಿಸಿ ನಮಗೆ ಹಕ್ಕುಪತ್ರ ವಿತರಣೆ ಮಾಡಬೇಕು. ನಮಗೆ ಸಾಲ ಸೌಲಭ್ಯಗಳನ್ನು ಒದಗಿಸಬೇಕು. ಇಲ್ಲವಾದಲ್ಲಿ ಮಾ.2ರಂದು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಅನಿರ್ದಿಷ್ಠಾವಧಿ ಪ್ರತಿಭಟನೆ ಮಾಡಲು ತೀರ್ಮಾನಿಸಿದ್ದೇವೆ ಎಂದರು.

     ಅಲೆಮಾರಿ ಬುಡಕಟ್ಟು ಮಹಾಸಭಾದ ಜಿಲ್ಲಾಧ್ಯಕ್ಷ ವೆಂಕಟೇಶ್ ಮಾತನಾಡಿ, 2017-18ನೆ ಸಾಲಿನಲ್ಲಿ 395 ಮನೆಗಳನ್ನು ಕೊಡಿಸಲು ಸರ್ಕಾರ ಜಮೀನು ಗುರುತಿಸಿದ್ದು ಮತ್ತು ಸಾಲ ಸೌಲಭ್ಯ ಒದಗಿಸಲು ಆದೇಶವಿದ್ದು, ರಾಜ್ಯದಲ್ಲಿ ವಿವಿಧ ಜಿಲ್ಲೆಗಹಳಲ್ಲಿ ಸಾಲ ಸೌಲಭ್ಯ ಒದಗಿಸಲಾಗುತ್ತಿದೆ. ಆದರೆ ತುಮಕೂರಿನಲ್ಲಿ ಮಾತ್ರ ಅಲೆಮಾರಿ ಜನಾಂಗವನ್ನು ಕಡೆಗಣಿಸಲಾಗಿದೆ. ಹಾಲಿ ವಾಸ ಮಾಡುತ್ತಿರುವ ಅಲೆಮಾರಿ ಸಮುದಾಯದವರು ಹಂದಿಗಳು ವಾಸ ಮಾಡುವ ಸ್ಥಳದಲ್ಲಿ. ಸಣ್ಣ ನೀರಾವರಿ ಪ್ರದೇಶದಲ್ಲಿ, ಕೆರೆ ಕಟ್ಟೆಯ ಜಾಗಗಳಲ್ಲಿ ಗುಡಿಸಲು ಹಾಕಿಕೊಂಡು ಜೀವನ ನಡೆಸತ್ತಿದ್ದಾರೆ ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷೆ ಸುಶೀಲಮ್ಮ, ಕೊರಟಗೆರೆ ತಾಲ್ಲೂಕು ಕಾರ್ಯದರ್ಶಿ ವಿಜಯಲಕ್ಷ್ಮೀ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link