ದಾವಣಗೆರೆ:
ಇನ್ನೊಂದು ವಾರದಲ್ಲಿ ನಕಲಿ ಹಾಗೂ ಅರ್ಧ ಹೆಲ್ಮೇಟ್‍ಗಳಿಗೆ ಕಡಿವಾಣ ಹಾಕಲಾಗುವುದು ಎಂದು ಹೆಚ್ಚುವರಿ ಎಸ್‍ಪಿ ಟಿ.ಜೆ. ಉದೇಶ್ ತಿಳಿಸಿದ್ದಾರೆ.ನಗರದ ಬಡಾವಣೆ ಪೊಲೀಸ್ ಠಾಣೆಯಲ್ಲಿ ಸೋಮವಾರ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಮತ್ತು ಪ್ರಾದೇಶಿಕ ಸಾರಿಗೆ ಕಚೇರಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ 30ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಕಲಿ ಹಾಗೂ ಅರ್ಧ ಹೆಲ್ಮೆಟ್‍ಗಳಿಂದ ಬೈಕ್ ಸವಾರರಿಗೆ ಯಾವುದೇ ಜೀವ ಸುರಕ್ಷತೆ ಇರುವುದಿಲ್ಲ. ಆದ್ದರಿಂದ ಇನ್ನೊಂದು ವಾರದೊಳಗೆ ನಕಲಿ ಹಾಗೂ ಅರ್ಧ ಹೆಲ್ಮೇಟ್‍ಗೆ ಕಡಿವಾಣ ಹಾಕಲಾಗುವುದು ಎಂದು ಹೇಳಿದರು.
ಅರ್ಧ ಹೆಲ್ಮೇಟ್‍ನಿಂದ ಬೈಕ್ ಸವಾರರಿಗೆ ಯಾವುದೇ ಸುರಕ್ಷತೆ ಇಲ್ಲ. ಕೆಲ ತಾಂತ್ರಿಕ ಕಾರಣಗಳಿಂದ ಈ ವರೆಗೆ ಅವುಗಳ ತಡೆಗೆ ಕ್ರಮ ವಹಿಸಲಾಗಿರಲಿಲ್ಲ. ಆದರೆ, ಇನ್ನೊಂದು ವಾರದೊಳಗೆ ಅಂತಹ ಹೆಲ್ಮೇಟ್ ತಡೆಗೆ ಕ್ರಮಕೈಗೊಳ್ಳಲಾಗುವುದು. ಅಲ್ಲದೆ, ವಾಹನ ಸವಾರರೂ ಇಂತಹ ಹೆಲ್ಮೆಟ್ ಬಳಸದೇ ಉತ್ತಮವಾದ ಐಎಸ್‍ಐ ಮುದ್ರಿತ ಹೆಲ್ಮೇಟ್ ಬಳಸಿ ಜೀವರಕ್ಷಣೆ ಮಾಡಿಕೊಳ್ಳಬೇಕೆಂದು ಅವರು ಮನವಿ ಮಾಡಿದರು.
ಅಪಘಾತಕ್ಕೆ ಮುಖ್ಯವಾಗಿ 3 ಕಾರಣಗಳಿದ್ದು, ಚಾಲಕನ ಅಜಾರುಕತೆ, ಸುಸಜ್ಜಿತವಾಗಿಲ್ಲದ ವಾಹನ ಹಾಗೂ ಪ್ರಾಕೃತಿಕ ವಿಕೋಪಗಳು. ಚಾಲಕ ಹೆಲ್ಮೇಟ್ ಧರಿಸದಿರುವುದು, ಮದ್ಯ ಸೇವನೆ, ಸೀಟ್ ಬೆಲ್ಟ್ ಧರಿಸದಿರುವುದು, ಅಜಾಗರುಕತೆಯಿಂದ ವಾಹನ ಚಾಲನೆ, ರಸ್ತೆ ನಿಯಮ ಪಾಲಿಸದಿರುವುದು ಕಾರಣವಾದರೆ, ವಾಹನ ಕಂಡಿಷನ್ ಇಲ್ಲದಿರುವುದು, ಬ್ರೇಕ್ ಫೇಲ್ ಮತ್ತಿತರ ಕಾರಣಗಳು ಮತ್ತು ರಸ್ತೆ ಸರಿಯಿಲ್ಲದಿರುವುದು, ಗುಂಡಿ, ಮರ ಬಿದ್ದಿರುವುದು ಮತ್ತಿತರ ಕಾರಣಗಳು ಅಪಘಾತಕ್ಕೆ ಎಡೆಮಾಡಿಕೊಡುತ್ತವೆ ಎಂದು ಅವರು ವಿವರಿಸಿದರು.
ಈ ನಿಟ್ಟಿನಲ್ಲಿ ವಾಹನ ಸವಾರರಿಗೆ ರಸ್ತೆ ಸುರಕ್ಷತೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯಿಂದ ಒಂದು ವಾರಗಳ ಕಾಲ ಸುರಕ್ಷತಾ ಜಾಥಾ, ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.ನಂತರ ಜಾಥಾಕ್ಕೆ ಚಾಲನೆ ನೀಡಲಾಯಿತು. ಜಾಥವು ಪೊಲೀಸ್ ಠಾಣೆಯಿಂದ ಆರಂಭಗೊಂಡು ಹಳೇ ಬಸ್ಟ್ಯಾಂಡ್ ಮೂಲಕ, ಅಶೋಕ ರಸ್ತೆ ಹಾಗೂ ಜಯದೇವ ವೃತ್ತದ ಮೂಲಕ ವಾಪಾಸ್ ಠಾಣೆ ಬಂದು ತಲುಪಿತು. ಜಾಥಾದಲ್ಲಿ ವಿವಿಧ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಈ ಸಂದರ್ಭ ಬ್ರೇಕ್ ಇನ್‍ಸ್ಪೆಕ್ಟರ್ ಮಲ್ಲೇಶ್, ಸಿಪಿಐ ಉಮೇಶ್, ಗೂಡ್ಸ್, ಲಾರಿ ಮಾಲೀಕರ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ದಾದಾಪೀರ್ ಮತ್ತಿತರರಿದ್ದರು. ಪ್ರಿಯಾಂಕ, ದೀಪ ಪ್ರಾರ್ಥಿಸಿದರು. ವೃತ್ತ ನಿರೀಕ್ಷಕ ಆನಂದ ಸ್ವಾಗತಿಸಿ, ನಿರೂಪಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
