ಹಾಲಿ -ಮಾಜಿ ಶಾಸಕರ ಬೆಂಬಲಿಗರ ಜಟಾಪಟಿ

ತುಮಕೂರು:

      ತುಮಕೂರು ಗ್ರಾಮಾಂತರದಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚುತ್ತಿವೆ. ಕಾನೂನು ಸುವ್ಯವಸ್ಥೆ ಕುಸಿದು ಹೋಗಿದೆ. ಇದಕ್ಕೆ ಪೊಲೀಸರು ಮತ್ತು ಹಾಲಿ ಶಾಸಕರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಮಾಜಿ ಶಾಸಕ ಬಿ.ಸುರೇಶ್‍ಗೌಡ ಹಮ್ಮಿಕೊಂಡಿದ್ದ ಪತ್ರಿಕಾ ಗೋಷ್ಠಿಯ ಕೊನೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರ ನಡುವೆ ಜಟಾಪಟಿಗೆ ಕಾರಣವಾಯಿತು.

     ಪತ್ರಿಕಾಗೋಷ್ಠಿ ಮುಗಿಸಿಕೊಂಡು ಇನ್ನೇನು ಹೊರಡಬೇಕು ಎನ್ನುವಷ್ಟರಲ್ಲಿ ಅಲ್ಲಿಗೆ ಆಗಮಿಸಿದ ಜೆಡಿಎಸ್‍ನ ತಾಲ್ಲೂಕು ಅಧ್ಯಕ್ಷ ಹಾಲನೂರು ಅನಂತ್, ಯುವ ಜನತಾದಳದ ಅಧ್ಯಕ್ಷ ಹಿರೇಹಳ್ಳಿ ಮಹೇಶ್, ಎಪಿಎಂಸಿ ಅಧ್ಯಕ್ಷ ನಾಗರಾಜ್, ಕೆಂಪರಾಜ್, ಬಿ.ಪ್ರಭಾಕರ್, ವೆಂಕಟೇಶ್ ಮುಂತಾದವರು ನಮ್ಮ ಶಾಸಕರ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದೀರಿ, ನಿಮ್ಮ ಬಳಿ ಏನು ದಾಖಲೆ ಇದೆ ಎಂದು ಪ್ರಶ್ನಿಸಿದರು.

      ಈ ಸಂದರ್ಭದಲ್ಲಿ ಮಾತಿಗೆ ಮಾತು ಬೆಳೆದು ಪತ್ರಿಕಾಗೋಷ್ಠಿ ನಡೆಸುತ್ತಿದ್ದ ಸಭಾಂಗಣದಲ್ಲಿ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು. ಜೆಡಿಎಸ್ ಹಾಗೂ ಬಿಜೆಪಿ ಎರಡೂ ಕಡೆಯ ಕಾರ್ಯಕರ್ತರ ನಡುವೆ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಯಿತು. ಆನಂತರ ಎರಡೂ ಕಡೆಯ ಮುಖಂಡರು ಮತ್ತು ಕಾರ್ಯಕರ್ತರು ಎಸ್ಪಿ ಕಚೇರಿಯತ್ತ ತೆರಳಿದರು. ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಸೂಕ್ತಕ್ರಮಕ್ಕಾಗಿ ಬಿ.ಸುರೇಶ್‍ಗೌಡ ಮತ್ತು ಬೆಂಬಲಿಗರು ದೂರು ನೀಡಿದರೆ, ಜೆಡಿಎಸ್‍ನ ಅನಂತ್, ಮಹೇಶ್ ಮತ್ತು ಬೆಂಬಲಿಗರು ಇದೊಂದು ಸುಳ್ಳು ದೂರಾಗಿದ್ದು, ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಕ್ರಮ ಜರುಗಿಸುವಂತೆ ಪ್ರತಿ ದೂರು ನೀಡಿದ್ದಾರೆ.

       ಈ ಸಂದರ್ಭದಲ್ಲಿ ಮಾತನಾಡಿದ ಹಾಲನೂರು ಅನಂತ್ ಹಾಗೂ ಹಿರೇಹಳ್ಳಿ ಮಹೇಶ್ ಅವರು ಮೀಸಲಾತಿಗಾಗಿ ಆಗ್ರಹಿಸಿ ಸ್ವಾಮೀಜಿಗಳು ಜಿಲ್ಲೆಗೆ ಆಗಮಿಸುತ್ತಿದ್ದು, ಅವರನ್ನು ಸ್ವಾಗತಿಸಲು ಹೋಟೆಲ್ ಬಳಿ ಸೇರಿಕೊಂಡಿದ್ದೆವು. ಅಲ್ಲಿ ಪತ್ರಿಕಾಗೋಷ್ಠಿ ನಡೆದು ನಮ್ಮ ಶಾಸಕರ ವಿರುದ್ಧ ಪೊಲೀಸ್ ವರ್ಗಾವಣೆಯಲ್ಲಿ ಹಣ ವಸೂಲಿ ಮಾಡಿರುವುದು ಸೇರಿದಂತೆ ಹಲವು ಸುಳ್ಳು ಆರೋಪಗಳನ್ನು ಮಾಡಿದ್ದರು. ಇದನ್ನು ಪ್ರಶ್ನಿಸಲು ಹೋದಾಗ ನಮ್ಮ ಮೇಲೆಯೇ ಮುಗಿ ಬೀಳುವಂತೆ ಬಂದರು ಎಂದು ಪ್ರತಿಕ್ರಿಯಿಸಿದರು.ಮಾಜಿ ಶಾಸಕರು ವಿನಾಕಾರಣ ನಮ್ಮ ಶಾಸಕರ ವಿರುದ್ಧ ಪದೇ ಪದೇ ಸುಳ್ಳು ಆರೋಪ ಮಾಡುತ್ತಿದ್ದಾರೆ. ಇದು ನಿಲ್ಲಬೇಕು ಎಂದು ಒತ್ತಾಯಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap