ರಫೇಲ್ ಡೀಲ್ ತನಿಖೆ ಜಂಟಿ ಸಂಸದೀಯ ಸಮಿತಿಗೆ ವಹಿಸಿ

ದಾವಣಗೆರೆ:

       ರಫೇಲ್ ಹಗರಣಕ್ಕೆ ಸಂಬಂಧಿಸಿದಂತೆ, ಸುಪ್ರೀಂ ಕೋರ್ಟ್‍ಗೆ ಕೇಂದ್ರ ಸರ್ಕಾರವೇ ಸುಳ್ಳು ಮಾಹಿತಿ ನೀಡಿ, ದಾರಿ ತಪ್ಪಿಸಿರುವ ಕಾರಣ ನ್ಯಾಯಾಲಯದ ತೀರ್ಪು ಗೊಂದಲಮಯವಾಗಿ ಹೊರ ಬಿದ್ದಿದ್ದು, ಇದರ ಸತ್ಯಾಸತ್ಯತೆಯನ್ನು ಜನರಿಗೆ ತಿಳಿಸಲು ಈ ಹಗರಣದ ತನಿಖೆಯನ್ನು ಜಂಟಿ ಸಂಸದೀಯ ಸಮಿತಿಗೆ ವಹಿಸಬೇಕೆಂದು ಕೆಪಿಸಿಸಿ ಕಾರ್ಯದರ್ಶಿ ಡಿ.ಬಸವರಾಜ್ ಆಗ್ರಹಿಸಿದ್ದಾರೆ.

       ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಫೇಲ್ ಯುದ್ಧ ವಿಮಾನ ಒಪ್ಪಂದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಮಹಾಲೇಖಪಾಲರ (ಸಿಎಜಿ) ವರದಿಯನ್ನು ಸಂಸತ್‍ನ ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ಪರಿಶೀಲಿಸಿದೆ ಹಾಗೂ ಸಂಸತ್‍ನಲ್ಲಿ ಚರ್ಚೆಗೆ ಮಂಡಿಸಿದೆ ಎಂಬುದಾಗಿ ಕೇಂದ್ರ ಸರ್ಕಾರದ ಅಟರ್ನಿ ಜನರಲ್ ಸುಪ್ರೀಂ ಕೋರ್ಟ್‍ಗೆ ಮುಚ್ಚಿತ ಲಕೋಟೆಯಲ್ಲಿ ವಿವರಸಲ್ಲಿಸಿ, ಸುಪ್ರೀಂ ಕೋರ್ಟ್‍ಗೆ ತಪ್ಪು ಮಾಹಿತಿ ನೀಡಿದ ಕಾರಣಕ್ಕೆ ನ್ಯಾಯಾಲಯಲು ಈ ಒಪ್ಪಂದದಲ್ಲಿ ಯಾವುದೇ ಅನುಮಾನಗಳಿಲ್ಲ ಎಂಬುದಾಗಿ ತೀರ್ಪು ನೀಡಿದೆ.

        ಆದರೆ, ಸಂಸತ್‍ನ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಮುಂದೆ ಸಿಎಜಿ ವರದಿ ಬಂದಿಲ್ಲ ಎಂಬುದಾಗಿ ಸಮಿತಿಯ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಹೇಳಿದ್ದಾರೆ. ಹೀಗಾಗಿ ರಫೇಲ್ ಯುದ್ದ ವಿಮಾನ ಖರೀದಿಗೆ ಸಂಬಂಧಿಸಿದ ಒಪ್ಪಂದದಲ್ಲಿ ಅವ್ಯವಹಾರ ನಡೆದಿರುವ ಶಂಕೆ ವ್ಯಕ್ತವಾಗುತ್ತಿದೆ. ಆದ್ದರಿಂದ ಈ ಹಗರಣ ಪ್ರಕರಣವನ್ನು ಸರ್ವ ಪಕ್ಷಗಳ ಸದಸ್ಯರನ್ನು ಒಳಗೊಂಡ ಜಂಟಿ ಸಂಸದೀಯ ಸಮಿತಿ ರಚಿಸಿ, ತನಿಖೆಗೆ ಒಪ್ಪಿಸಬೇಕು. ಹಾಗೂ ಸಿಎಜಿ ವರದಿ ಹಾಗೂ ಅಟಾರ್ನಿ ಜನರಲ್ ವಿರುದ್ಧವೂ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.

        ಹಿಂದಿನ ಯುಪಿಎ ಸರ್ಕಾರದ ಅವಧಿಯಲ್ಲಿ ಸೇನೆಯು 126 ಯುದ್ಧ ವಿಮಾನ ಪೂರೈಸುವಂತೆ ಬೇಡಿಕೆ ಸಲ್ಲಿಸಿದ್ದ ಹಿನ್ನೆಲೆಯಲ್ಲಿ 2012ರಲ್ಲಿ ಫ್ರಾನ್ಸ್ ದೇಶದ ಕಂಪನಿಯೊಂದಿಗೆ 670 ಕೋಟಿ ರೂ.ಗಳಂತೆ 18 ಯುದ್ಧ ವಿಮಾನ ಖರೀದಿ ಹಾಗೂ 108 ಯುದ್ಧ ವಿಮಾನ ತಯಾರಿಕೆಗೆ ಹೆಚ್‍ಎಎಲ್‍ಗೆ ಬಿಡಿ ಭಾಗ ಪೂರೈಸುವ ಬಗ್ಗೆ ಒಪ್ಪಂದವಾಗಿತ್ತು. ಆದರೆ, ನಂತರ ಅಧಿಕಾರಕ್ಕೆ ಬಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು, ಈ ಒಪ್ಪಂದವನ್ನು ರದ್ದು ಮಾಡಿ, ಉದ್ಯಮಿ ಅನೀಲ್ ಅಂಬಾನಿಗೆ ಲಾಭ ಮಾಡಿಕೊಡುವ ಉದ್ದೇಶದಿಂದ ಮೂರು ಪಟ್ಟು ದರ ಹೆಚ್ಚಿಸಿ, ರಿಲಾಯನ್ಸ್ ಕಂಪೆನಿಯಿಂದ 36 ವಿಮಾನ ಖರೀದಿಗೆ ಹೊಸ ಒಪ್ಪಂದ ಮಾಡಿಕೊಂಡಿರುವುದನ್ನು ಗಮನಿಸಿದರೆ, ಅವ್ಯವಹಾರ ನಡೆದಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಆದರೆ, ಕೇಂದ್ರ ಸರ್ಕಾರವು ಈ ಹಗರಣವನ್ನು ಮುಚ್ಚಿ ಹಾಕಲು ಸುಪ್ರೀಂ ಕೋರ್ಟ್ ದಾರಿ ಸಹ ತಪ್ಪಿಸಿದೆ ಎಂದು ದೂರಿದರು.

         ಪ್ರಧಾನಿ ನರೇಂದ್ರ ಮೋದಿ ಕಾವಲುಗಾರನಾಗಿ ಉಳಿದಿಲ್ಲ, ಉದ್ಯಮಿಗಳಿಗೆ ಲಾಭ ಮಾಡಿಕೊಡುವ ಉದ್ದೇಶದಿಂದ ಕಳ್ಳನಾಗಿ ಬದಲಾಗಿದ್ದಾರೆ. ಹೀಗೆ ಬೇಲಿಯೇ ಎದ್ದು ಹೊಲ ಮೇಯ್ದರೆ ದೇಶದ ಗತಿ ಏನು ಎಂದು ಪ್ರಶ್ನಿಸಿದ ಅವರು, ನರೇಂದ್ರ ಮೋದಿ ಗೋಮುಖ ವ್ಯಾಘ್ರನಂತೆ ಮುಖವಾಡ ಹಾಕಿಕೊಂಡು ದೇಶದ ಜನರ ದಾರಿ ತಪ್ಪಿಸುತ್ತಿದ್ದಾರೆ. ಆದ್ದರಿಂದ ಕಾಂಗ್ರೆಸ್ ಶೀಘ್ರದಲ್ಲಿಯೇ ಮೋದಿ ಹಠವೋ, ದೇಶ ಬಚಾವೋ ಎಂಬ ಘೋಷಣೆ ಅಡಿಯಲ್ಲಿ ಹೋರಾಟ ನಡೆಸಲಿದೆ ಎಂದು ಹೇಳಿದರು.

         ಉದ್ಯಮಿಗಳ ಪರವಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರು ರೈತ, ಕಾರ್ಮಿಕರ ವಿರೋಧಿ ನೀತಿಗಳನ್ನು ಅನುಸರಿಸುತ್ತಿದ್ದಾರೆ. ಆದ್ದರಿಂದ ಬರುವ 2019ರ ಲೋಕಸಭಾ ಚುನಾವಣೆಯಲ್ಲಿ ಮೋದಿ ಅವರನ್ನು ಮನೆಗೆ ಕಳುಹಿಸಬೇಕೆಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ರಹಮತ್‍ವುಲ್ಲಾ ಕೆ.ಜಿ, ಲಿಯಾಕತ್ ಅಲಿ, ಅಬ್ದುಲ್ ಜಬ್ಬಾರ್, ಡಿ.ಶಿವಕುಮಾರ್, ಹರೀಶ್ ಮತ್ತಿತರರು ಹಾಜರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap