ದಾವಣಗೆರೆ:
ನಾನು ತಪ್ಪು ಮಾಡಿದ್ದರೆ, ತಪ್ಪು ಹೇಳಿದ್ದರೆ, ನನ್ನ ನಾಯಕರು, ನನ್ನ ಕ್ಷೇತ್ರದ ಮತದಾರರು ಹಾಗೂ ನಾಡಿನ ಜನತೆ ನನ್ನನ್ನು ನೇಣಿಗೆ ಹಾಕಲಿ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ಹೊನ್ನಾಳಿ ಶಾಸಕರು ಆದ ಎಂ.ಪಿ.ರೇಣುಕಾಚಾರ್ಯ ತಿಳಿಸಿದ್ದಾರೆ.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಪಿಸಿಸಿ ರಾಜ್ಯ ಘಟಕದಿಂದ ರಾಜ್ಯ ಪೊಲೀಸ್ ಮಹಾನಿರೀಕ್ಷಕರನ್ನು ಭೇಟಿ ಮಾಡಿ, ನನ್ನ ವಿರುದ್ಧ ಎಫ್‍ಐಆರ್ ದಾಖಲಿಸುವಂತೆ ಒತ್ತಾಯಿಸಿರುವುದನ್ನು ಮತ್ತು ಕಾಂಗ್ರೆಸ್ ನಾಯಕರ ಅಪಪ್ರಚಾರವನ್ನು ಸ್ವಾಗತಿಸುತ್ತೇನೆ. ನನ್ನ ವಿರುದ್ಧ ಯಾರೂ ಏನೇ ಟೀಕೆ ಮಾಡಿದರೂ ಅದನ್ನು ಅರಗಿಸಿಕೊಳ್ಳುವ ಶಕ್ತಿಯನ್ನು ದೇವರು ನನಗೆ ನೀಡಿದ್ದಾನೆ ಎಂದರು.
ನನ್ನ ಹೇಳಿಕೆ ಕುರಿತಂತೆ ನಾನು ಈಗ ಏನನ್ನೂ ಹೇಳುವುದಿಲ್ಲ. ಆದರೆ, ಕಾಂಗ್ರೆಸ್ಸಿನವರು ದೂರು ನೀಡಿದ್ದ ಬಗ್ಗೆ ಮಾತ್ರ ಹೇಳುತ್ತೇನೆ. ನಾನು ಮುಸ್ಲಿಮರ ವಿರೋಧಿಯಲ್ಲ. ಹಿಂದೂ, ಮುಸ್ಲಿಂ ಹಾಗೂ ಕ್ರೈಸ್ಥರು ಒಂದಾಗಿ ಬದುಕಬೇಕು ಎನ್ನುವವನು ನಾನು. ಅಲ್ಲದೆ, ಪ್ರತಿಯೊಂದು ಧರ್ಮದವರನ್ನು ಗೌರವಿಸುತ್ತೇನೆ ಎಂದರು.
ನನ್ನ ಕ್ಷೇತ್ರದ ವ್ಯಾಪ್ತಿಯ ಮಲ್ಲಿಕಟ್ಟೆ ಗ್ರಾಮದಲ್ಲಿ ಪೂರ್ತಿ ಮುಸಲ್ಮಾನರಿದ್ದಾರೆ. ಆ ಗ್ರಾಮದಲ್ಲಿ ಸಿಸಿ ರಸ್ತೆ ಮಾಡಿಸಿದ್ದೇನೆ. ಮಲ್ಲಿಕಟ್ಟೆ ಸೇರಿದಂತೆ ಕ್ಷೇತ್ರದ ವ್ಯಾಪ್ತಿಯ ಗ್ರಾಮಗಳಿಗೆ ಹೋದ ಸಂದರ್ಭದಲ್ಲಿ ಆ ಕ್ಷೇತ್ರದ ಮುಸಲ್ಮಾನ್ ಬಾಂಧವರು, ಕೊರೊನಾ ಹರಡುತ್ತಿರುವ ಸಂದರ್ಭದಲ್ಲಿ ಸಾಮೂಹಿಕವಾಗಿ ನಮಾಜ್ ಮಾಡುವುದಿಲ್ಲ ಎಂಬುದಾಗಿ ಸ್ವತಃ ಬರೆದುಕೊಟ್ಟಿದ್ದಾರೆ. ನಾನು ಹೋದಂತ ಸಂದರ್ಭದಲ್ಲಿ ಬಹಳ ಗೌರವಯುತವಾಗಿ ಭಯ್ಯಾ ಅಂತಾ ಮಾತನಾಡಿಸಿದ್ದಾರೆ ಎಂದು ಹೇಳಿದರು.
ನಾನು ಮುಸಲ್ಮಾನ್ ಬಾಂಧವರನ್ನು ಭೇಟಿಯಾದಾಗ ಹೇಳಿದ್ದೇನೆ. ನೋಡಪ್ಪ ಜೀವನದಲ್ಲಿ ನಮಾಜ್, ಪ್ರಾರ್ಥನೆ ಇದ್ದದ್ದೆ. ಬದುಕಿದ್ರೆ ತಾನೇ ಪ್ರಾರ್ಥನೆ ಮಾಡುವುದು ಹಾಗೂ ಜೀವನದಲ್ಲಿ ಏನನ್ನಾದರೂ ಸಾಧನೆ ಮಾಡುವುದು. ಅದ್ದರಿಂದ ಪ್ರತಿಯೊಬ್ಬರಲ್ಲೂ ಯಾರೂ ಮನೆಯಿಂದ ಹೊರಗಡೆ ಬರಬಾರದು ಎಂದು ಮನವಿ ಮಾಡಿದ್ದೇನೆ. ಅಕಸ್ಮಾತ್ ಬಂದರೆ, ಅನಿವಾರ್ಯವಾಗಿ ಕಠಿಣ ಕ್ರಮ ಜರುಗಸ್ತೇವೆ. ನಾನೇ ಲಾಠಿ ತೆಗೆದುಕೊಂಡು ಬರುತ್ತೇನೆಂದು ಜನರ ಮೇಲಿನ ಪ್ರೀತಿಯಿಂದ ಹೇಳಿದ್ದೇನೆ ಎಂದು ಮಾಹಿತಿ ನೀಡಿದರು.
ನನ್ನ ವಿರುದ್ಧ ಎಷ್ಟು ಎಫ್‍ಐಆರ್ ಹಾಕಿದ್ದಾರೆ. ಹೋರಾಟವೇ ನನ್ನ ಬದುಕು. ಯಾರೂ ಏನೇ ಟೀಕೆ ಮಾಡಿದರೂ, ಎಷ್ಟು ಎಫ್‍ಐಆರ್ ಹಾಕಿದರೂ ಹೋರಾಟದ ಬದುಕಿನಿಂದ ಹಿಂದೆ ಸರಿಯುವುದಿಲ್ಲ ಎಂದು ಅವರು, ನಾನು ಯಾವುದೇ ಧರ್ಮದ ವಿರುದ್ಧ ಮಾತನಾಡಿಲ್ಲ.
ಸರ್ವಜನೋ ಸುಖಿನೋ ಭವಂತು ಎಂದು ಹೇಳುವಂತೆ ಹಿಂದೂ, ಮುಸ್ಲಿಂ, ಕ್ರೈಸ್ತರು ಒಂದೇ ತಾಯಿಯ ಮಕ್ಕಳಂತೆ ಬದುಕಬೇಕೆನ್ನುವುದು ತಮ್ಮ ಅಪೇಕ್ಷೆಯಾಗಿದೆ. ನನ್ನನ್ನು ಜೈಲಿಗೆ ಹಾಕಲಿ, ನೇಣಿಗೆ ಹಾಕಲಿ ಜನರಿಗಾಗಿ ನಾನು ಎಂತಹ ತ್ಯಾಗಕ್ಕೂ ಸಿದ್ಧ ಎಂದು ಹೇಳಿದರು.
ಹೊನ್ನಾಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲೂಕುಗಳ 254 ಬೂತ್‍ಳಲ್ಲಿ ಪ್ರತಿ ಮನೆ, ಮನೆಗೆ ತೆರಳಿ ಕೊರೊನಾ ಸೋಂಕು ಹರಡುವುದನ್ನು ತಡೆಯಲು ಪ್ರಧಾನಿ ಮತ್ತು ಮುಖ್ಯಮಂತ್ರಿಗಳು ಸಮರ ಸಾರಿದ್ದಾರೆ. ಈ ಹಿನ್ನೆಲೆಯಲ್ಲಿ ಜಾಗೃತಿ ಮೂಡಿಸಿ ಸ್ವಚ್ಛತೆ ಕಾಪಾಡುವಂತೆ ಮನವಿ ಸಾರ್ವಜನಿಕರಲ್ಲಿ ಮಾಡಿದ್ದೇವೆ ಎಂದರು.
ಲಾಕ್ ಡೌನ್ ಮಧ್ಯೆಯೂ ಏ.14ರ ನಂತರ ಮದ್ಯದಂಗಡಿ ತೆರೆಯುತ್ತವೆಯೇ ಎಂಬುದು ನನಗೆ ಗೊತ್ತಿಲ್ಲ . ಈ ಬಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತೀರ್ಮಾನ ಕೈಗೊಳ್ಳುತ್ತಾರೆ. ರಾಜ್ಯದಲ್ಲಿ ಕೊರೋನಾಕ್ಕಿಂತಲೂ ಮದ್ಯ ಸಿಗದೇ ಸಾವನ್ನಪ್ಪಿದವರ ಸಂಖ್ಯೆಯೇ ಹೆಚ್ಚಾಗಿದೆ. ಇನ್ನು 2-3 ದಿನಗಳ ನಂತರವೂ ಲಾಕ್ ಡೌನ್ ಮುಂದುವರಿಯುವ ಸಾಧ್ಯತೆ ಇದೆ. ಅದ್ದರಿಂದ ಜನ ಯರೂ ಮನೆಯಿಂದ ಹೊರ ಬರಬಾರದು ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ಸಮರವನ್ನೇ ಸಾರಿದ್ದೇವೆ. ಈ ಸಮರದಲ್ಲಿ ಗೆಲ್ಲೋಣ ಎಂದು ಆಶಯ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯ ಕೆ.ಎಂ.ವೀರೇಶ್, ಬಿಜೆಪಿ ಮುಖಂಡ ಟಿಂಕರ್ ಮಂಜಣ್ಣ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ