ಆರ್ ಓ ಪ್ಲಾಂಟ್‍ಗಳ ಗಡಸು ನೀರಿನ ಸದ್ಬಳಕೆ ಸಾಧ್ಯ

ತುಮಕೂರು

     ಜಿಲ್ಲೆಯಲ್ಲಿ ಹನಿ ನೀರಿಗೂ ಹಾಹಾಕಾರ. ಸಾವಿರ ಅಡಿ ಆಳ ನೆಲ ಕೊರೆದು ತೆಗೆದ ನೀರು ಕುಡಿಯಲು ಯೋಗ್ಯವಲ್ಲದ ಪರಿಸ್ಥಿತಿ. ಹೀಗಾಗಿ ಎಲ್ಲಾ ಹಳ್ಳಿಗಳಲ್ಲೂ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಿ ಜನರಿಗೆ ಆರೋಗ್ಯಕರ ಕುಡಿಯುವ ನೀರು ವಿತರಿಸುವ ಪ್ರಯತ್ನ ನಡೆದಿದೆ.

     ಆರ್ ಓ ಪ್ಲಾಂಟ್‍ಗಳಲ್ಲಿ ನೀರು ಶುದ್ದೀಕರಣಗೊಂಡು ಶೇಕಡ 60ರಿಂದ 70ರಷ್ಟು ಕುಡಿಯಲು ಯೋಗ್ಯವಲ್ಲದ ಗಡಸು ನೀರು ಘಟಕದಿಂದ ಹೊರ ಹೋಗುತ್ತದೆ. ಜಿಲ್ಲೆಯಲ್ಲಿ ಇಂತಹ ಸಾವಿರಾರು ನೀರಿನ ಘಟಕಗಳಿವೆ, ಒಂದು ಘಟಕದಿಂದ ದಿನಕ್ಕೆ ಸರಾಸರಿ 15 ಸಾವಿರ ಲೀಟರ್‍ನಂತೆ ಪ್ರತಿ ನಿತ್ಯ ಲಕ್ಷಾಂತರ ಲೀಟರ್ ಗಡಸು ನೀರು ಹೊರಬಂದು ಸದುಪಯೋಗವಾಗದೆ ಚರಂಡಿಪಾಲಾಗಿ ಪೋಲಾಗುತ್ತಿದೆ.

    ನೀರಿನ ಘಟಕಗಳಿಗೆ ಕೊಳವೆ ಬಾವಿ ನೀರು ಪೂರೈಸಲಾಗುತ್ತಿದೆ, ಅದಕ್ಕೂ ಅಭಾವ ಇರುವ ಕಡೆ ಹೊರಗಿನಿಂದ ಟ್ಯಾಂಕರ್‍ಗಳಲ್ಲಿ ನೀರು ತಂದು ಶುದ್ಧೀಕರಿಸಿ ಸರಬರಾಜು ಮಾಡುವ ವ್ಯವಸ್ಥೆ ಇದೆ. ತಿಂಗಳಿಗೆ 15ರಿಂದ 18 ಸಾವಿರ ರೂ ನೀಡಿ ಖಾಸಗಿಯವರಿಂದ ನೀರು ಖರೀದಿಸಿ ಪೂರೈಸಲಾಗುತ್ತದೆ. ಹನಿ ನೀರೂ ಮುಖ್ಯವಾಗಿರುವ ಪರಿಸ್ಥಿತಿಯಲ್ಲಿ ಆರ್ ಓ ಪ್ಲಾಂಟ್‍ನ ಶುದ್ಧೀಕರಣ ಪ್ರಕ್ರಿಯೆಯಲ್ಲಿ ಪ್ರತ್ಯೇಕಗೊಳ್ಳುವ ಶೇಕಡ 60ರಷ್ಟು ಗಡಸು ನೀರು ನಿರುಪಯೋಗವಾಗುತ್ತದೆ.

      ನೀರಿನ ಶುದ್ಧೀಕರಣಕ್ಕೆ ಯೋಜನೆ ರೂಪಿಸಿದವರು ಘಟಕಗಳಲ್ಲಿ ಉತ್ಪತ್ತಿಯಾಗುವ ಗಡಸು ನೀರು ಉಪಯೋಗವಾಗುವ ರೀತಿ ಯೋಜನೆ ರೂಪಿಸಿಲ್ಲ. ಕೆಲ ಗ್ರಾಮಗಳಲ್ಲಿ ನೀರಿನ ಮೌಲ್ಯ ತಿಳಿದ ಗ್ರಾಮಸ್ಥರು ನೀರಿನ ಘಟಕದ ನೀರನ್ನು ವ್ಯವಸಾಯಕ್ಕೆ ಬಳಸಿಕೊಂಡು ಸದುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಆದರೆ ಹೆಚ್ಚಿನ ಕಡೆ ಇಂತಹ ನೀರು ಪೋಲಾಗಿ ಹರಿದು ಹೋಗುತ್ತಿದೆ.

      ನೀರಿನ ಘಟಕಗಳಿಂದ ಹೊರಬರುವ ನೀರನ್ನು ಭೂಮಿಯಲ್ಲಿ ಇಂಗಿಸಲು ಇಂಗು ಗುಂಡಿಗಳನ್ನು ಕಡ್ಡಾಯವಾಗಿ ಮಾಡಬೇಕು, ಇಲ್ಲವೆ ಪೈಪ್ ಲೈನ್ ಅಳವಡಿಸಿ ಒಣಗಿರುವ ಕೊಳವೆ ಬಾವಿಗೆ ಸಂಪರ್ಕ ಒದಗಿಸಿದರೆ ಅಂತರ್ಜಲ ಮಟ್ಟ ವೃದ್ಧಿಯಾಗಿ ಕೊಳವೆಬಾವಿ ಜಲಪೂರ್ಣ ವಾಗುತ್ತದೆ.

       ಎಲ್ಲಾ ಹಳ್ಳಿಗಳಲ್ಲೂ ಹೈನುಗಾರಿಗೆ ಈಗ ಪ್ರಧಾನವಾಗಿದೆ. ನಿತ್ಯ ರಾಸುಗಳ ಮೈ ತೊಳೆಯಲು ಅವರಿಗೆ ನೀರಿನ ಅಗತ್ಯವಿದೆ. ಆರ್ ಓ ಪ್ಲಾಂಟ್ ಬಳಿ ತೊಟ್ಟಿ ಕಟ್ಟಿ ನೀರು ಘಟಕದ ಗಡಸು ನೀರನ್ನು ತುಂಬಿಸಿದರೆ ಗ್ರಾಮಸ್ಥರು ನೀರನ್ನು ರಾಸುಗಳ ಮೈ ತೊಳೆಯಲು, ಮನೆ ಬಾಗಿಲು ತೊಳೆಯಲು ಬಳಸಿಕೊಳ್ಳುತ್ತಾರೆ. ಊರಿನ ಶಾಲೆಯ ಕೈ ತೋಟದ ಗಿಡಗಳಿಗೆ ಹರಿಸಿದರೆ ಉಪಯೋಗವಾಗುತ್ತದೆ. ನೀರಿನ ಘಟಕ ಬಳಿ ಗ್ರಾಮ ಪಂಚಾಯ್ತಿ ರಸ್ತೆ ಬದಿ ಗಿಡಗಳನ್ನು ನೆಟ್ಟು ಆ ಗಿಡಗಳಿಗೆ ಹರಿಯುವಂತೆ ಕಾಲುವೆ ಮಾಡಿದರೂ ಸಾಕು ಬೇಸಿಗೆಯಲ್ಲಿ ಗಿಡಗಳಿಗೆ ನೀರುಣಿಸಿದಂತಾಗುತ್ತದೆ.

       ಆದರೆ ಇದಾವುದೂ ಮಾಡದೆ ಶುದ್ಧ ಕುಡಿಯುವ ನೀರಿನ ಘಟಕಗಳ ನೀರು ವ್ಯರ್ಥವಾಗಿ ಹರಿಯಬಿಡಲಾಗುತ್ತಿದೆ. ನರೇಗಾ ಯೋಜನೆಯಡಿ ನೀರಿನ ತೊಟ್ಟಿ, ಇಂಗುಗುಂಡಿ ನಿರ್ಮಾಣಕ್ಕೆ ಅವಕಾಶವಿದ್ದು ಅಧಿಕಾರಿಗಳು ಆರ್ ಓ ಪ್ಲಾಂಟ್ ವೇಸ್ಟ್ ನೀರಿನ ಸದ್ಬಳಕೆಗೆ ಕಾಳಜಿವಹಿಸಬೇಕಾಗಿದೆ.

ಆರ್ ಓ ಪ್ಲಾಂಟ್ ನೀರಿನಿಂದ ಬಾಳೆ ಬೆಳೆದ ರೈತ

       ನೀರಿನ ಘಟಕದ ನಿರುಪಯೋಗಿ ನೀರು ಬಳಸಿಕೊಂಡ ರೈತರೊಬ್ಬರು ಬಾಳೆ ಬೆಳೆ ಬೆಳೆದು ಆದಾಯ ಕಂಡಿದ್ದಾರೆ. ಕೊರಟಗೆರೆ ತಾಲ್ಲೂಕು ಕೃಷಿಕ ಸಮಾಜದ ನಿರ್ದೇಶಕ, ತೊಗರಿಘಟ್ಟದ ಸಂಜೀವ ರೆಡ್ಡಿ ತಮ್ಮೂರಿನ ಆರ್ ಓ ಪ್ಲಾಂಟಿನ ವೇಸ್ಟ್ ನೀರು ಬಳಸಿಕೊಂಡು ಬಾಳೆ ಬೆಳೆದು ಮಾದರಿಯಾಗಿದ್ದಾರೆ, ಪೋಲಾಗುತ್ತಿದ್ದ ನೀರನ್ನು ಸದ್ಬಳಕೆ ಮಾಡಿಕೊಂಡಿದ್ದಾರೆ.

       ತೊಗರಿಘಟ್ಟದ ಶುದ್ದ ನೀರಿನ ಘಟಕದಿಂದ ನೀರು ದಂಡವಾಗಿ ಹರಿದು ಹೋಗುವುದನ್ನು ನೋಡಲಾಗದೆ ಅದನ್ನ ಬಳಸಿಕೊಳ್ಳಲು ತೀರ್ಮಾನಿಸಿದರು. ಗ್ರಾಮ ಪಂಚಾಯ್ತಿಗೆ 15 ಸಾವಿರ ರೂ ಹಣ ಪಾವತಿಸಿ ಐದು ವರ್ಷವರೆಗೆ ನೀರಿನ ಘಟಕದ ನೀರು ಬಳಸಿಕೊಳ್ಳಲು ಒಪ್ಪಂದ ಮಾಡಿಕೊಂಡರು.

       ನೀರಿನ ಘಟಕದಿಂದ ಸುಮಾರು 800 ಮೀಟರ್ ಪೈಪ್ ಅಳವಡಿಸಿ ತಮ್ಮ ಜಮೀನಿನ ಕೃಷಿ ಹೊಂಡಕ್ಕೆ ನೀರು ತುಂಬಿಸಿಕೊಳ್ಳುತ್ತಿದ್ದಾರೆ. ನಿತ್ಯ ಸುಮಾರು 12ರಿಂದ 15 ಸಾವಿರ ಲೀಟರ್ ನೀರು ಆರ್ ಓ ಪ್ಲಾಂಟ್‍ನಿಂದ ದೊರೆಯುತ್ತದೆ. ಈ ನೀರು ಬೆಳೆಗೆ ಹಾನಿಕಾರಕ ಎಂದು ಕೆಲವರು ಹೆದರಿಸಿದ್ದರು, ಹಿರೇಹಳ್ಳಿ ಕೃಷಿ ಸಂಶೋಧನಾ ಕೇಂದ್ರದ ಕೃಷಿ ವಿಜ್ಞಾನಿಗಳಿಂದ ನೀರನ್ನು ಪರೀಕ್ಷೆ ಮಾಡಿಸಿದಾಗ, ಬೆಳೆಗೆ ಈ ನೀರು ಬಳಸಿಕೊಳ್ಳಬಹುದು ಎಂದು ಹೇಳಿದರು ಎಂದು ಸಂಜೀವ ರೆಡ್ಡಿ ಹೇಳಿದರು.

      ನೀರಿನ ಘಟಕದ ನೀರನ್ನು ಕೃಷಿ ಹೊಂಡದಲ್ಲಿ ಸಂಗ್ರಹಿಸಿ ಕೃಷಿ ಇಲಾಖೆಯ ಡೀಸೆಲ್ ಪಂಪ್ ಮೂಲಕ ನೀರೆತ್ತಿ ಬಾಳೆಗಿಡಗಳಿಗೆ ಹನಿ ನಿರಾವರಿ ಪದ್ದತಿಯಲ್ಲಿ ಹಾಯಿಸುತ್ತಿದ್ದೇನೆ. 960 ಬಾಳೆಗಿಡಗಳು ಸಮೃದ್ಧವಾಗಿ ಬೆಳೆದಿವೆ. ಒಂದು ಫಸಲು ತೆಗಿದಿದ್ದೇನೆ, ಇನ್ನೊಂದು ಫಸಲು ಸಿದ್ಧವಾಗಿದೆ ಎಂದರು.

        ಇದೇ ನೀರಿನಲ್ಲಿ ಕೃಷಿ ಹೊಂಡದಲ್ಲಿ ಮೀನು ಸಾಕಣೆ ಮಾಡುತ್ತಿದ್ದಾರೆ. ಮೀನು ಚೆನ್ನಾಗಿ ಅಭಿವೃದ್ಧಿಯಾಗುತ್ತಿವೆ. ನಿರುಪಯೋಗಿ ಎಂದು ಪೋಲು ಮಾಡುತ್ತಿದ್ದ ಶುದ್ಧ ನೀರಿನ ಘಟಕದ ನೀರನ್ನು ಸಂಜೀವ ರೆಡ್ಡಿ ಸದ್ಬಳಕೆ ಮಾಡಿಕೊಂಡಿದ್ದಾರೆ. ಜಿಲ್ಲೆಯ ಎಲ್ಲಾ ಶುದ್ಧ ನೀರಿನ ಘಟಕಗಳಿಂದ ಹೊರ ಹೋಗುವ ಗಡಸು ನೀರು ಸದುಪಯೋಗವಾಗುವಂತೆ ಇಲಾಖೆ ಅಧಿಕಾರಿಗಳು ಯೋಜನೆ ರೂಪಿಸಲಿ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap