ದಾವಣಗೆರೆ:
ಲೋಕೋಪಯೋಗಿ ಇಲಾಖೆಯ ಹಗರಣಕ್ಕೆ ಸಂಬಂಧಿಸಿದಂತೆ ಹಾಗೂ ಜನಸ್ಪಂದನ ಕೋಶದಲ್ಲಿರುವ ದಾಖಲೆಗಳನ್ನು ತಮ್ಮ ಪ್ರಭಾವ ಬಳಸಿ ನಾಶಪಡುಸುತ್ತಿರುವ ಮುಖ್ಯಮಂತ್ರಿಗಳ ವಿರುದ್ಧ ದೂರು ದಾಖಲಿಸಲು ರಾಜ್ಯಪಾಲರಿಂದ ಅನುಮತಿ ಕೋರಲಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಹರೀಶ್ ಹಳ್ಳಿ ತಿಳಿಸಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕೋಪಯೋಗಿ ಇಲಾಖೆಯಿಂದ ಮುಖ್ಯಮಂತ್ರಿ ಕುಮಾರಸ್ವಾಮಿಯವರು ತಮ್ಮ ಪ್ರಭಾವಬಳಿಸಿ ದಾವಣಗೆರೆ ಸೇರಿದಂತೆ ರಾಜ್ಯದ 9 ಜಿಲ್ಲೆಗಳ ಗುತ್ತಿಗೆದಾರರಿಗೆ ಅಪೂರ್ಣಗೊಳ್ಳದ 311 ಕಾಮಗಾರಿಗಳಿಗೆ ಅವಧಿಗಿಂತ ಪೂರ್ವದಲ್ಲಿಯೇ 700 ಕೋಟಿಗೂ ಅಧಿಕ ಹಣ ಬಿಡುಗಡೆ ಮಾಡಿದ್ದಾರೆಂದು ಆರೋಪಿಸಿದರು.
ಮುಖ್ಯಮಂತ್ರಿಗಳಿಗೆ ಸಂಬಂಧಿಸಿದಂತೆ ಕೇಳಲಾದ ಮಾಹಿತಿಗೆ ಸಂಬಂಧಿಸಿದಂತೆ ದಾಖಲೆ ಇರುವ ಜನಸ್ಪಂದನ ಕೋಶದಲ್ಲಿನ ದಾಖಲೆಗಳನ್ನು ಸಿಎಂ ಕುಮಾರಸ್ವಾಮಿಯವರು ತಮ್ಮ ಪ್ರಭಾವ ಬಳಸಿ, ಅಧಿಕಾರ ದುರುಪಯೋಗ ಪಡೆದುಕೊಂಡು ನಾಶ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ದೂರಿದರು.
ಈ ಎರಡೂ ಪ್ರಕರಣಗಳಿಗೆ ಸಂಬಂಧಿಸಿದಂv, ಮುಖ್ಯಮಂತ್ರಿಗಳ ವಿರುದ್ಧ ದೂರು ದಾಖಲಿಸಲು ಈಗಾಗಲೇ ರಾಜ್ಯಪಾಲರಿಂದ ಅನುಮತಿ ಕೋರಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರ ಕಚೇರಿಯಿಂದ ಅರ್ಜಿದಾರರು ಏ.27ರಂದು ಖುದ್ದು ಹಾಜುರಾಗಿ ವಿವರಣೆ ಕೇಳಿದ್ದು, ರಾಜ್ಯಪಾಲರಿಂದ ಅನುಮತಿ ದೊರೆಯುತ್ತಿದ್ದಂತೆ, ಮುಖ್ಯಮಂತ್ರಿ ಕುಮಾರಸ್ವಾಮಿಯವರ ವಿರುದ್ಧ ದೂರು ದಾಖಲಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.
ಜಂತಕಲ್ ಮೈನಿಂಗ್ ಪ್ರಕರಣದ ಬಗ್ಗೆ ಈ ತಿಂಗಳ ಕೊನೆಯಲ್ಲಿ ವಿಚಾರಣೆ ಇದೆ. ಆದರೆ, ಈ ಪ್ರಕರಣದ ಆರೋಪಿಯಾಗಿರುವ ಸಿಎಂ ಕುಮಾರಸ್ವಾಮಿಯವರು, ಮುಂದೆ ತಮ್ಮ ಅಧಿಕಾರಕ್ಕೆ ಕುತ್ತು ಬರಬಹುದೆಂಬ ಭಯದಿಂದ, ಜಂತಕಲ್ ಮೈನಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತರು ತನಿಖೆ ನಡೆಸಿರುವ ಅಂತಿಮ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲು ಲೋಕಾಯುಕ್ತ ಅಧಿಕಾರಿಗಳಿಗೆ ಬಿಡುತ್ತಿಲ್ಲ ಎಂದು ಆರೋಪಿಸಿದರು.
ಮುಖ್ಯಮಂತ್ರಿ ಕುಮಾರಸ್ವಾಮಿಯವರು ತಮ್ಮ ಅಧಿಕಾರವನ್ನು ದುರುಪಯೋಗ ಪಡೆಸಿಕೊಂಡು, ಲೋಕಾಯುಕ್ತದಲ್ಲಿನ ಕೆಲ ಅಧಿಕಾರಿಗಳ ಮೇಲೂ ಒತ್ತಡ ಹೇರಿ, ಜಂತಕಲ್ ಮೈನಿಂಗ್ ಪ್ರಕರಣಕ್ಕೆ ಸಂಬಂಧಿಸಿದ ತನಿಖಾ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲು ಬಿಡುತ್ತಿಲ್ಲ. ಅಲ್ಲದೇ, ಆ ವರದಿಯಲ್ಲಿರುವ ಕೆಲ ಸತ್ಯಾಂಶಗಳನ್ನು ನಾಶಮಾಡಲು ಪ್ರಯತ್ನಿಸುತ್ತಿದ್ದಾರೆಂದು ಆಪಾದಿಸಿದರು.
ಸುದ್ದಿಗೋಷ್ಠಿಯಲ್ಲಿ ಸಾಮಾಜಿಕ ಕಾರ್ಯಕರ್ತರುಗಳಾದ ಎಂ.ವಿ.ವೀರಭದ್ರಪ್ಪ ಚನ್ನಗಿರಿ, ವೀರಾಚಾರ್ ತುರ್ಚಘಟ್ಟ, ಹೇಮರೆಡ್ಡಿ ಜಗಳೂರು, ಸಿ.ಎಂ.ಮಂಜುನಾಥ್ ಬಳ್ಳಾರಿ ಮತ್ತಿತರರು ಹಾಜರಿದ್ದರು.