ದಾವಣಗೆರೆ:
ತಕ್ಷಣವೇ ಭತ್ತ ಮತ್ತು ಮೆಕ್ಕೆಜೋಳ ಖರೀದಿ ಕೇಂದ್ರಗಳನ್ನು ಆರಂಭಿಸಬೇಕೆಂದು ಆಗ್ರಹಿಸಿ, ಜಿಲ್ಲಾ ರೈತ ಸಂಘಗಳ ಪ್ರಗತಿಪರ ಸಂಘಟನೆಗಳು ಹಾಗೂ ರೈತ ಹಿತಚಿಂತಕರ ಒಕ್ಕೂಟಗಳ ನೇತೃತ್ವದಲ್ಲಿ ರೈತರು ನಗರದ ತಾಲೂಕು ಕಚೇರಿ ಎದುರು ಸೋಮವಾರದಿಂದ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭಿಸಿದ್ದಾರೆ.
ನಗರದ ಜಯದೇವ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಹೊರಟ ರೈತರು, ಖರೀದಿ ಕೇಂದ್ರ ತೆರೆಯಲು ವಿಳಂಬ ಧೋರಣೆ ಅನುಸರಿಸುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸುತ್ತಾ ತಾಲೂಕು ಕಚೇರಿಗೆ ತೆರಳಿ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ಪ್ರಾರಂಭಿಸಿದರು. ಈ ಸತ್ಯಾಗ್ರಹದಲ್ಲಿ ರಾಜ್ಯ ಕಬ್ಬು ಬಳೆಗಾರರ ಸಂಘ, ರಾಜ್ಯ ಪ್ರದೇಶ ರೈತ ಸಂಘ, ದಲಿತ ಸಂಘರ್ಷ ಸಮಿತಿ, ಜನಾಂದೋಲನಗಳ ಮಹಾಮೈತ್ರಿ ಸೇರಿದಂತೆ ಪ್ರಗತಿಪರ ಸಂಘಟನೆಗಳ ಮುಖಂಡರು ಭಾಗವಹಿಸಿ, ಬೆಂಬಲ ಸೂಚಿಸಿ ಮಾತನಾಡಿದರು.
ಹೆಬ್ಬಾಳು ವಿರಕ್ತಮಠದ ಶ್ರೀಮಹಾಂತ ರುದ್ರೇಶ್ವರ ಸ್ವಾಮೀಜಿ ಮಾತನಾಡಿ, ಪ್ರಕೃತಿಯ ವಿಕೋಪದಿಂದಾಗಿ ಕೊಡಗು, ಮಡಿಕೇರಿ, ಕೇರಳ, ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳ ಜನರು ತತ್ತರಿಸಿ ಹೋಗಿದ್ದಾರೆ. ಹೀಗೆ ಒಂದು ಕಡೆ ಪ್ರಕೃತಿ ಅನ್ಯಾಯ ಮಾಡಿದರೆ, ಮತ್ತೊಂದು ಕಡೆ ಸರ್ಕಾರಗಳು ರೈತರಿಗೆ ಅನ್ಯಾಯ ಮಾಡುತ್ತಿವೆ ಎಂದು ಆರೋಪಿಸಿದರು.
ಧರಣಿಗೆ ಬೆಂಬಲ ಸೂಚಿಸಿ ಮಾತನಾಡಿದ ಜಗಳೂರು ಶಾಸಕ ಎಸ್.ವಿ. ರಾಮಚಂದ್ರ, ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರಕ್ಕೆ ಕಣ್ಣು, ಕಿವಿ, ಬಾಯಿ ಇಲ್ಲವಾಗಿದೆ. ಮುಖ್ಯಮಂತ್ರಿ ಕುಮಾರಸ್ವಾಮಿಗೆ ಮಂಡ್ಯ, ಮೈಸೂರು, ಹಾಸನ, ಚಾಮರಾಜ ನಗರ ಜಿಲ್ಲೆ ಬಿಟ್ಟರೆ ಉಳಿದ ಜಿಲ್ಲೆಗಳ ಜನರಾಗಲೀ, ರೈತರಾಗಲೀ ಕಾಣುತ್ತಿಲ್ಲ. ಅದೇ ನಾಲ್ಕು ಜಿಲ್ಲೆಗಷ್ಟೇ ಮುಖ್ಯಮಂತ್ರಿಗಳು ಸೀಮಿತವಾಗಿದ್ದಾರೆ. ರೈತರ ಸಮಸ್ಯೆಯ ವಿಚಾರವಾಗಿ, ಖರೀದಿ ಕೇಂದ್ರ ವಿಚಾರಕ್ಕೆ ರೈತ ಸಂಘಟನೆಗಳ ಹೋರಾಟಕ್ಕೆ ತಮ್ಮ ಸಂಪೂರ್ಣ ಬೆಂಬಲವಿದೆ. ರೈತರಿಗೆ ಅನ್ಯಾಯವಾಗಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಖರೀದಿ ಕೇಂದ್ರ ಆರಂಭದ ಬಗ್ಗೆ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡುತ್ತೇನೆ ಎಂದು ವಾಗ್ದಾನ ಮಾಡಿದರು.
ರಾಜ್ಯ ಕಬ್ಬು ಬೆಳೆಗಾರರ ಸಂಘದ ಪ್ರಧಾನ ಕಾರ್ಯದರ್ಶಿ ತೇಜಸ್ವಿ ವಿ. ಪಟೇಲ್ ಮಾತನಾಡಿ, ಕಳೆದ 3 ವರ್ಷದಿಂದಲೂ ಮಳೆ ಇಲ್ಲದೇ, ಹಾಕಿದ ಬಂಡವಾಳವೂ ಕೈಗೆ ಬಾರದೇ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. 1.85 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ, ಸುಮಾರು 70 ಸಾವಿರ ಹೆಕ್ಟೇರ್‍ನಲ್ಲಿ ಭತ್ತ ನಾಟಿ ಮಾಡಲಾಗಿದೆ. ಆದರೆ, ಮಳೆಯ ಕೊರತೆಯಿಂದಾಗಿ ಕಡಿಮೆ ಇಳುವರಿ ಬರುವ ಸಾಧ್ಯತೆ ದಟ್ಟವಾಗಿದೆ. ಈ ಪರಿಸ್ಥಿತಿಯಲ್ಲಿ ರಾಜ್ಯ, ಕೇಂದ್ರ ಸರ್ಕಾರಗಳು ರೈತರ ನೆರವಿಗೆ ಧಾವಿಸಬೇಕಾದ ಅನಿವಾರ್ಯತೆವಿದ್ದು, ತಕ್ಷಣವೇ ಮೆಕ್ಕೆಜೋಳ ಮತ್ತು ಭತ್ತ ಖರೀದಿ ಕೇಂದ್ರ ಸ್ಥಾಪಿಸುವತ್ತಾ ಗಮನ ಹರಿಸಬೇಕೆಂದು ಆಗ್ರಹಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಕಾರ್ಯದರ್ಶಿ ಬಲ್ಲೂರು ರವಿಕುಮಾರ್ ಮಾತನಾಡಿ, ಸರ್ಕಾರ ಜಿಲ್ಲೆಯಲ್ಲಿ 6.5 ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳ ಇಳುವರಿ ನಿರೀಕ್ಷಿಸಿದೆ. ಆದರೆ, ಪ್ರತಿ ಎಕರೆಗೆ 7-8 ಚೀಲ ಮೆಕ್ಕೆಜೋಳ ಬಂದರೆ ಹೆಚ್ಚು. ಕೇಂದ್ರ ಸರ್ಕಾರ ಮಕ್ಕೆಜೋಳ ಕ್ವಿಂಟಾಲ್‍ಗೆ 1700 ರೂ.ಗಳನ್ನು ಕನಿಷ್ಠ ಬೆಂಬಲ ಬೆಲೆಯನ್ನಾಗಿ ಘೋಷಿಸಿದೆ. ಆದರೆ, ಮಾರುಕಟ್ಟೆಯಲ್ಲಿ 1100 ರೂ.ಗೆ ಮೆಕ್ಕೆಜೋಳ ಬಿಕರಿಯಾಗುತ್ತಿದೆ. ಆದ್ದರಿಂದ ತಕ್ಷಣವೇ ರಾಜ್ಯ ಸರ್ಕಾರ ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸಿ 1700 ರೂ.ಗೆ ಕ್ವಿಂಟಾಲ್‍ನಂತೆ ಖರೀದಿಸಬೇಕು. ಬೆಲೆ ಆಯೋಗ ನಿಗದಿಪಡಿಸಿದಂತೆ ಭತ್ತಕ್ಕೆ 2200 ನಿಗದಿಪಡಿಸಿದೆ. ಆದರೆ, ಕೇಂದ್ರ ಸರ್ಕಾರ 1750 ರು. ದರ ಘೋಷಿಸಿದೆ.
ಇಂತಹ ದರ ರೈತರು ಕೃಷಿಯಿಂದಲೇ ವಿಮುಖರಾಗುವಂತೆ ಮಾಡಿದೆ. ಆದ್ದರಿಂದ ತಕ್ಷಣವೇ ಭತ್ತದ ಕನಿಷ್ಠ ಬೆಂಬಲ ಬೆಲೆಯನ್ನು ಪರಿಷ್ಕರಿಸಬೇಕು ಹಾಗೂ ಭತ್ತ ಖರೀದಿ ಕೇಂದ್ರ ತೆರೆಯಲು ಸೂಕ್ತ ಕ್ರಮ ವಹಿಸಬೇಕೆಂದು ಒತ್ತಾಯಿಸಿದರು.
ಕರ್ನಾಟಕ ರೈತರ ಸಂಘದ ಎಂ.ಎಸ್.ಕೆ. ಶಾಸ್ತ್ರೀ, ಸಿಪಿಐ ಮುಖಂಡರಾದ ಹೊಸಳ್ಳಿ ಮಲ್ಲೇಶ್, ಗುಡಿಹಳ್ಳಿ ಹಾಲೇಶ್, ಡಿವೈಎಫ್‍ಐನ ಇ.ಶ್ರೀನಿವಾಸ, ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ಅನೀಸ್ ಪಾಷಾ, ನೆರಳು ಬೀಡಿ ಕಾರ್ಮಿಕರ ಸಂಘದ ಕರಿಬಸಪ್ಪ, ಜಬೀನಾ ಖಾನಂ, ವಿಶ್ವ ಕರವೇಯ ಕೆ.ಜಿ.ಯಲ್ಲಪ್ಪ ಸೇರಿದಂತೆ ಹಲವರು ಧರಣಿಗೆ ಬೆಂಬಲ ಸೂಚಿಸಿ ಮಾತನಾಡಿದರು.
ಧರಣಿಯಲ್ಲಿ ರೈತ ಸಂಘದ ಚಿಕ್ಕನಹಳ್ಳಿ ರೇವಣಸಿದ್ದಪ್ಪ, ಎಚ್.ಎಂ. ಮಹೇಶ್ವರ ಸ್ವಾಮಿ, ಚಿನ್ನಸಮುದ್ರ ಭೀಮಾನಾಯ್ಕ, ಕಬ್ಬಳ ಪ್ರಸಾದ, ಬುಳ್ಳಾಪುರ ಹನುಮಂತಪ್ಪ, ಆವರಗೆರೆ ಬಸವರಾಜಪ್ಪ, ಪಾಮೇನಹಳ್ಳಿ ಲಿಂಗರಾಜ, ಕರಿಬಸಪ್ಪ, ಸಂಗಪ್ಪ, ಮಲ್ಲೇಶ, ಕುಮಾರ, ನಾಗರಾಜ, ಭೀಮಣ್ಣ, ಅಶೋಕ, ಈಚಘಟ್ಟ ರುದ್ರೇಶ, ಚಿನ್ನಸಮುದ್ರ ರಮೇಶ ನಾಯ್ಕ, ನಾಗರಕಟ್ಟೆ ದಯಾನಾಯ್ಕ, ಆವರಗೆರೆ ಕಲ್ಲಪ್ಪ ಸೇರಿದಂತೆ ಹಲವರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
