ಕೊರಟಗೆರೆ
ಡಿಸಿಎಂ ಡಾ ಜಿ. ಪರಮೇಶ್ವರ್ ಕೊರಟಗೆರೆಯಲ್ಲಿ ಗೌರಿಶಂಕರ್ ತುಮಕೂರು ಗ್ರಾಮಾಂತರದಲ್ಲಿ ಗೆಲ್ಲಲು ಮಾಜಿ ಸಚಿವ ಚನ್ನಿಗಪ್ಪನವರ ಜೊತೆ ದೊಡ್ಡಮಟ್ಟದ ಹಣ ನೀಡುವ ಮುಖೇನ ಮ್ಯಾಚ್ ಫಿಕ್ಸಿಂಗ್‍ನ ಮೂಲಕ ಎರಡೂ ಕ್ಷೇತ್ರದಲ್ಲಿ ಗೆಲುವು ಸಾಧಿಸಲಾಗಿದೆ ಎಂದು ತುಮಕೂರು ಗ್ರಾಮಾಂತರ ಕ್ಷೇತ್ರದ ಮಾಜಿ ಶಾಸಕ ಸುರೇಶ್‍ಗೌಡ ಗುರುತರ ಆರೋಪ ಮಾಡಿದರು.
ಅವರು ಪಟ್ಟಣದ ಎಸ್‍ಎಸ್‍ಆರ್ ವೃತ್ತದಲ್ಲಿ ಬಿಜೆಪಿ ಪಕ್ಷದ ವತಿಯಿಂದ ಸೋಮವಾರ ಏರ್ಪಡಿಸಲಾಗಿದ್ದ ಲೋಕಸಭಾ ಚುನಾವಣೆಯ ಬೃಹತ್ ಪ್ರಚಾರ ರ್ಯಾಲಿಯಲ್ಲಿ ಬಿಜೆಪಿ ಪಕ್ಷದ ಯುವ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಾ ಚನ್ನಿಗಪ್ಪನವರು ಎರಡೂ ಕ್ಷೇತ್ರದಲ್ಲಿ ಗೆಲುವು ಸಾಧಿಸಲು ಕುತಂತ್ರ ರಾಜಕಾರಣ ಮಾಡಿದ್ದಾರೆ ಎಂದರು.
ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಚೆನ್ನಿಗಪ್ಪನ ಮಗ ಗೌರಿಶಂಕರ್ ಗೆಲುವು ಮತ್ತು ಕೊರಟಗೆರೆ ಕ್ಷೇತ್ರದಲ್ಲಿ ಜೆಡಿಸ್ ಪಕ್ಷದ ಅಭ್ಯರ್ಥಿ ಸುಧಾಕರಲಾಲ್ ಸೋಲಿಸಲು ಚೆನ್ನಿಗಪ್ಪ ಮತ್ತು ಡಾ.ಜಿ.ಪರಮೇಶ್ವರ್ ನಡುವೆ ಮ್ಯಾಚ್ ಪಿಕ್ಸಿಂಗ್ ನಡೆದಿದೆ. ಕೊರಟಗೆರೆ ಕ್ಷೇತ್ರದ ಅಭ್ಯರ್ಥಿಯನ್ನು ಸೋಲಿಸಲು ಚೆನ್ನಿಗಪ್ಪ 5 ಕೋಟಿ ಹಣ ಪಡೆದಿದ್ದಾರೆ ಎಂದು ಕಿಡಿಕಾರಿದರು.
ತುಮಕೂರು ಬಿಜೆಪಿ ಅಭ್ಯರ್ಥಿ ಬಸವರಾಜು ಮಾತನಾಡಿ, ಮಾಜಿ ಪ್ರಧಾನಿ ದೇವೆಗೌಡರಿಗೆ ಹಾಸನ ಜಿಲ್ಲೆಯೇ ನಮ್ಮ ಭಾರತ ದೇಶ. ಹೊಳೆ ನರಸಿಪುರವೇ ಕರ್ನಾಟಕ ರಾಜ್ಯವಾಗಿದೆ. ರಾಜ್ಯ ಸರಕಾರದ ನೂರಾರು ಯೋಜನೆಗಳು ಹಾಸನ ಮತ್ತು ಮಂಡ್ಯ ಜಿಲ್ಲೆಗೆ ಸಿಮೀತವಾಗಿದೆ. ಲೋಕಸಭೆ ಚುನಾವಣೆಗೆ ಮುಂಚೆಯೇ ಕಾಂಗ್ರೆಸ್ ಮುಕ್ತ ತುಮಕೂರು ಮಾಡಿರುವ ಕೀರ್ತಿ ದೇವೆಗೌಡರಿಗೆ ಸಲ್ಲುತ್ತದೆ ಎಂದು ತಿಳಿಸಿದರು.
ಕರ್ನಾಟಕ ರಾಜ್ಯದ ರಾಜಕಾರಣದಲ್ಲಿ ಮಾಜಿ ಪ್ರಧಾನಿ ದೇವೆಗೌಡ ಕುಟುಂಬದ ಚಿಕ್ಕ ಮಗ ಮುಖ್ಯಮಂತ್ರಿ, ದೊಡ್ಡ ಮಗ ಸಚಿವ, ಸೊಸೆ ಶಾಸಕಿ ಮತ್ತು ಈಗ ದೇವೆಗೌಡರು ಸೇರಿ ಇಬ್ಬರು ಮೊಮ್ಮಕ್ಕಳು ಸಂಸದ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದಾರೆ. ತುಮಕೂರು ಜಿಲ್ಲೆಯ ಮಾಜಿ ಸಂಸದರಿಗೆ ಕುಟಿಲ ರಾಜಕೀಯದಿಂದ ಕೈ ಟಿಕೆಟ್ ತಪ್ಪಿಸಿ ಮೂಲೆ ಗುಂಪು ಮಾಡಿದ ದೇವೆಗೌಡರನ್ನು ಮತದಾರರು ಮನೆಗೆ ಕಳುಹಿಸುವುದು ಖಚಿತವಾಗಿದೆ ಎಂದು ಹೇಳಿದರು.
ಕೊರಟಗೆರೆ ಬಿಜೆಪಿ ತಾಲ್ಲೂಕು ಅಧ್ಯಕ್ಷ ವೈ.ಹೆಚ್.ಹುಚ್ಚಯ್ಯ ಮಾತನಾಡಿ, ಕೊರಟಗೆರೆ ಕ್ಷೇತ್ರದಿಂದ ಶಾಸಕನಾಗಿ ಡಿಸಿಎಂ ಆಗಿರುವ ಡಾ.ಜಿ.ಪರಮೇಶ್ವರ್ 10 ತಿಂಗಳು ಕಳೆದರೂ ಸ್ಥಳೀಯರ ಕೈಗೆ ಸಿಗದೆ ಬೆಂಗಳೂರು ಮತ್ತು ತುಮಕೂರು ಮನೆಯಲ್ಲಿ ಸಿಸಿಟಿವಿ ನೋಡಿ ರಾಜಕೀಯ ಮಾಡುತ್ತಿದ್ದಾರೆ. ತಮ್ಮ ರಾಜಕೀಯ ಭವಿಷ್ಯಕ್ಕಾಗಿ ಡಾ.ಜಿ.ಪರಮೇಶ್ವರ್ ದೇವೆಗೌಡರ ಕಾಲಿಗೆ ಬಿದ್ದು ಮೈತ್ರಿ ಮಾಡಿಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಯದರ್ಶಿ ಪವನಕುಮಾರ್, ನಾಗರಾಜು, ಪಪಂ ಸದಸ್ಯ ಪ್ರದೀಪಕುಮಾರ್, ಬಿಜೆಪಿ ಮುಖಂಡರಾದ ಹೆಬ್ಬಾಕರವಿ, ತಿಮ್ಮಜ್ಜ, ಗೋಪಾಲಕೃಷ್ಣ, ಪ್ರಕಾಶರೆಡ್ಡಿ, ಲಕ್ಷ್ಮೀಪ್ರಸಾದ್, ಹನುಮಂತರಾಜು, ಗುರುದತ್, ಸ್ವಾಮಿ, ಮಧು, ಪ್ರಸನ್ನ, ರುದ್ರೇಶ್, ಶಶಿಕುಮಾರ್, ಸಂಜಯ್, ರಂಜಿತ್, ಪುನೀತ್ ಸೇರಿದಂತೆ ಇತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ