ದಾವಣಗೆರೆ:
ಜಿಲ್ಲೆಯ ಅಭಿವೃದ್ಧಿಯಲ್ಲಿ ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರ ಕೊಡುಗೆ ಏನೂ ಇಲ್ಲವೆಂಬ ಆರೋಪ ಬಿಜೆಪಿಯವರ ಹತಾಶಯ ಮನೋಭಾವನೆಯನ್ನು ತೋರಿಸುತ್ತದೆ ಎಂದು ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಕಾರ್ಯಾಧ್ಯಕ್ಷ ಹರೀಶ್ ಕೆಂಗಲಹಳ್ಳಿ ಆರೋಪಿಸಿದ್ದಾರೆ.
ಈ ಕುರಿತು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಲ್ಲಿಕಾರ್ಜುನ್ ಅವರು ಇಡೀ ರಾಜ್ಯದಲ್ಲೇ ಅಭಿವೃದ್ಧಿಯ ಹರಿಕಾರರೆಂದು ಹೆಸರುವಾಸಿಯಾಗಿದ್ದಾರೆ. ತಮ್ಮ ಅಧಿಕಾರಾವಧಿಯಲ್ಲಿ ಕುಂದುವಾಡ ಕೆರೆ, ಟಿವಿ ಸ್ಟೇಷನ್ ಕೆರೆಗಳನ್ನು ಅಭಿವೃದ್ಧಿ ಪಡಿಸುವ ಮೂಲಕ ದಾವಣಗೆರೆಯ ಜನತೆಗೆ ಕುಡಿಯುವ ನೀರಿನ ಸಮಸ್ಯೆ ನೀಗಿಸಿದ್ದಾರೆ. ಗ್ರಾಮೀಣ ಪ್ರದೇಶಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಿದ್ದಾರೆ.
22 ಕೆರೆಗಳಿಗೆ ಸ್ವಂತ ಹಣದಲ್ಲಿ ನೀರೊದಗಿಸಲು ಶ್ರಮಿಸಿದ್ದಾರೆ. ಇದನ್ನೆಲ್ಲಾ ಮರೆತು ಬಿಜೆಪಿಯವರು ಮಲ್ಲಿಕಾರ್ಜುನ್ ವಿರುದ್ಧ ಆರೋಪ ಮಾಡುತ್ತಿರುವುದು ಬಿಜೆಪಿ ಮುಖಂಡರ ಹತಾಶೆಯ ಪರಮಾವಧಿಯನ್ನು ತೋರಿಸುತ್ತಿದೆ ಎಂದು ದೂರಿದರು.ಜಿಲ್ಲೆಯಲ್ಲಿ ಓಡಾಡಿದರೆ ಮಲ್ಲಿಕಾರ್ಜುನ್ ಅವರು ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳು ಕಾಣುತ್ತವೆ. ಆದರೆ, ಬಿಜೆಪಿ ಮುಖಂಡರು ಹತಾಶೆಯಿಂದಾಗಿ ಮಲ್ಲಿಕಾರ್ಜುನ್ ಅವರ ವಿರುದ್ಧ ಅನಗತ್ಯ ಆರೋಪ ಮಾಡುತ್ತಿದ್ದು, ಇವರಿಗೆ ಅಭಿವೃದ್ಧಿ ಬಗ್ಗೆ ಮಾತನಾಡುವ ನೈತಿಕತೆಯೇ ಇಲ್ಲ ಎಂದರು.
ಮೂರು ಬಾರಿ ಸಂಸದರಾಗಿರುವ ಜಿ.ಎಂ.ಸಿದ್ದೇಶ್ವರ್ ಕೇಂದ್ರ ಸಚಿವರಾಗಿಯೂ ಹೇಳುವಂತಹ ಯಾವುದೇ ಕೆಲಸ ಮಾಡಿಲ್ಲ. ಒಟ್ಟಿನಲ್ಲಿ ಸಿದ್ದೇಶ್ವರ್ ಕೊಡುಗೆ ಜಿಲ್ಲೆಗೆ ಶೂನ್ಯವಾಗಿದೆ. ಸಂಸದರ ಸಾಧನೆಗಳು ಪುಸ್ತಕಕ್ಕಷ್ಟೇ ಸೀಮಿತವಾಗಿವೆ. ಗ್ರಾಮೀಣ ಪ್ರದೇಶಗಳಿಗೆ ಪ್ರಚಾರಕ್ಕೆ ಹೋದ ಸಂದರ್ಭದಲ್ಲಿ ಅಲ್ಲಿನ ಯುವಕರು ಬಿಜೆಪಿ ಅಭಿವೃದ್ಧಿಯನ್ನು ಪ್ರಶ್ನಿಸುತ್ತಿರುವುದೇ ಇದಕ್ಕೆ ಸಾಕ್ಷಿ ಎಂದು ಹೇಳಿದರು.
ರಾಹುಲ್ ಭದ್ರತೆ ಹೆಚ್ಚಿಸಲಿ:
ನಿನ್ನೆ ದಿನ ಸುದ್ದಿಗೋಷ್ಠಿ ನಡೆಸುವಾಗ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹಣೆಯ ಮೇಲೆ ಲೇಸರ್ ಬೆಳಕು ಬಿದ್ದಿದ್ದು, ಜೀವ ಬೆದರಿಕೆ ಇರುವಂತೆ ಕಾಣುತ್ತದೆ. ಆದ್ದರಿಂದ ಕೇಂದ್ರ ಸರ್ಕಾರ ರಾಹುಲ್ ಅವರ ಭದ್ರತೆಯನ್ನು ದುಪ್ಪಟ್ಟುಗೊಳಿಸಬೇಕು. ಇಂದಿರಾ ಗಾಂಧಿ, ರಾಜೀವ್ ಗಾಂಧಿ ದೇಶಕ್ಕಾಗಿ ಬಲಿಯಾಗಿದ್ದು, ರಾಹುಲ್ ಗಾಂಧಿಯಂತಹ ನಾಯಕನಿಗೆ ರಕ್ಷಣೆ ಕೊಡಬೇಕಾದ್ದು ಸರ್ಕಾರದ ಆದ್ಯ ಕರ್ತವ್ಯವಾಗಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಯುವ ಕಾಂಗ್ರೆಸ್ ಮುಖಂಡರಾದ ನಿಟ್ಟುವಳ್ಳಿ ಪ್ರವೀಣ್, ಅಲಿ ರಹಮತ್ ಪೈಲ್ವಾನ್, ಜಮ್ಮನಹಳ್ಳಿ ನಾಗರಾಜ್, ಎಲ್.ಎಂ.ಹೆಚ್.ಸಾಗರ್, ಎ.ವಿನಾಯಕ, ಸಂಜಯ್, ಕೆ.ಎಲ್.ಹರೀಶ್, ದಯಾನಂದ್ ಹಂಚಿನಮನೆ, ದೀಪಕ್, ಡೋಲಿ ಚಂದ್ರು, ಶುಭಮಂಗಳ, ಜಯಶ್ರೀ, ಸಂಗಮ್ಮ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
