ಹವಮಾನ ಆಧಾರಿತ ಕೃಷಿಯತ್ತ ಹರಿಯಲಿ ರೈತರ ಚಿತ್ತ

ದಾವಣಗೆರೆ:

     ಪ್ರಸ್ತುತ ಮಳೆಯ ಅಭಾವ ಹೆಚ್ಚಿರುವುದರಿಂದ ಪರಿಸರಕ್ಕೆ ಪೂರಕವಾಗುವಂತಹ, ಹವಮಾನ ಆಧಾರಿತ ಬೆಳೆಗಳನ್ನು ಬೆಳೆಯುವತ್ತ ರೈತರು ಗಮನಹರಿಸಬೇಕೆಂದು ಬೆಂಗಳೂರಿನ ಕೃಷಿ ಪಂಡಿತ, ಸಾವಯವ ಕೃಷಿ ತಜ್ಞ ಡಾ.ಕೆ.ಆರ್.ಹುಲ್ಲುನಾಚೇಗೌಡ ಕರೆ ನೀಡಿದರು.

     ಇಲ್ಲಿನ ವಿದ್ಯಾನಗರದ ಅಲಿ ಬ್ರದರ್ಸ್ ಫ್ಲಾಜಾದಲ್ಲಿ ಸಾವಯವ ಕೃಷಿ ಮಾಹಿತಿ ಮತ್ತು ತರಬೇತಿ ಕೇಂದ್ರದ ವತಿಯಿಂದ ಏರ್ಪಡಿಸಿದ್ದ ಸಮಗ್ರ ಕೃಷಿಯ ಯೋಜನಾ ವರದಿ ಪ್ರಾತ್ಯಕ್ಷಿಕೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇತ್ತೀಚೆಗೆ ದಿನದಿಂದ ದಿನಕ್ಕೆ ಮಳೆಯ ಅಭಾವ ಹೆಚ್ಚಾಗುತ್ತಿದ್ದು, ರೈತರು ಸಾಮಾನ್ಯವಾಗಿ ಮಳೆ ಆಧಾರಿತ ಬೆಳೆ ಬೆಳೆಯುವುದರಿಂದ, ಮಳೆ ಕೊರತೆ ಎದುರಾಗಿ ನಷ್ಟ ಅನುಭವಿಸುತ್ತಿದ್ದಾರೆ. ಈ ಕೃಷಿ ಸಂಕಟವನ್ನು ತಪ್ಪಿಸಬೇಕಾದರೆ, ಹವಮಾನ ಆಧಾರಿತ ಬೆಳೆಗಳನ್ನು ಬೆಳೆಯುವ ಮೂಲಕ ಲಾಭದಾಯಕ ಕೃಷಿಯಲ್ಲಿ ತೊಡಬೇಕೆಂದು ಕಿವಿಮಾತು ಹೇಳಿದರು.

      ಪ್ರಸ್ತುತ ಸತತವಾಗಿ ಮಳೆಯ ಅಭಾವ ತಲೆದೋರುತ್ತಿರುವುದಕ್ಕೆ, ಮನುಷ್ಯನ ಅತಿ ಆಸೆಯೇ ಕಾರಣವಾಗಿದೆ. ಮಳೆಯು ಕೈಕೊಡುತ್ತಿರುವುದರಿಂದ ಅಂತರ್ಜಲ ಸಹ ಬತ್ತುತ್ತಿದೆ. ಹೀಗಾಗಿ, ಪ್ರಸ್ತುತ ಕೃಷಿಯು ನಮ್ಮೆಲ್ಲರಿಗೂ ಸವಾಲಾಗಿ ಕಾಡುತ್ತಿದೆ. ಇಂತಹ ಸವಾಲುಗಳ ಪಟ್ಟುಗಳನ್ನು ಸೂಕ್ಷ್ಮವಾಗಿ ನಾವು ಅರಿಯುವ ಮೂಲಕ ಹವಮಾನ ಆಧಾರಿತ ಬೆಳೆ ಬೆಳೆದು ಸಮಗ್ರ ಕೃಷಿಯಲ್ಲಿ ತೊಡಗಿಸಿಕೊಳ್ಳುವ ಅವಶ್ಯಕತೆ ಇದೆ ಎಂದರು.

      ರೈತರು ಕೃಷಿಯಲ್ಲಿ ಬರೀ ನಷ್ಟ ಅನುಭವಿಸುತ್ತಿರುವುದಕ್ಕೆ ನಮ್ಮಲ್ಲಿ ಸಾಲು ಸಾಲು ಉದಾಹರಣೆಗಳಿವೆ. ಇದನ್ನು ಮನಗಂಡ ನಮ್ಮ ತಂಡವು ಸತತವಾಗಿ ಒಂದು ವರ್ಷದ ಕಾಲ ರಾಜ್ಯ, ಅಂತಾರಾಜ್ಯ ಪ್ರವಾಸ ಕೈಗೊಂಡು, ನೂರಾರು ಸಮಗ್ರ ಕೃಷಿ ಯೋಜನೆ ಕುರಿತಂತೆ ಪ್ರಾತ್ಯಕ್ಷಿಕೆಗಳ ಮೂಲಕ ಅರಿವು ಮೂಡಿಸುವ ಕೆಲಸವನ್ನು ನಿರಂತರ ಮಾಡಿಕೊಂಡೇ ಬರುತ್ತಿದೆ. ನೀರು ಇರುವ ಕಡೆ ಯಾವ ಬೆಳೆ ಬೆಳೆಯಬಹುದು, ಕಡಿಮೆ ನೀರಿರುವ ಪ್ರದೇಶಕ್ಕೆ ಯಾವ ಬೆಳೆ ಸೂಕ್ತ, ನೀರು ಇಲ್ಲದಿರುವು ಅಂದರೆ, ಅತೀ ಕಡಿಮೆ ಮಳೆಯಾಗುವ ಪ್ರದೇಶದಲ್ಲಿ ಯಾವ ಬೆಳೆಯನ್ನು ಬೆಳೆಯಬಹುದು ಎಂಬುದರ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸಿಕೊಂಡು ಬರಲಾಗುತ್ತಿದೆ ಎಂದು ಮಾಹಿತಿ ನೀಡಿದರು.

       ದಾವಣಗೆರೆ, ಬೆಂಗಳೂರು, ಮೈಸೂರು, ವಿಜಯಪುರ ಜಿಲ್ಲೆಗಳಲ್ಲಿ ರೈತರಿಗಾಗಿ ಸಂಪನ್ಮೂಲ ವ್ಯಕ್ತಿಗಳಿಂದ ನಿರಂತರ ತರಬೇತಿ, ಆಪ್ತ ಸಮಾಲೋಚನೆ ನಡೆಸಲಾಗುತ್ತಿದೆ. ಆಯಾ ಪ್ರದೇಶಕ್ಕೆ ತಕ್ಕಂತೆ, ನೀರಿನ ಲಭ್ಯತೆ ಆಧರಿಸಿ ಯಾವ ಬೆಳೆಗಳನ್ನು ಬೆಳೆದರೆ ಅನುಕೂಲವೆಂಬುದರ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ದಾವಣಗೆರೆ ಜಿಲ್ಲೆಯಲ್ಲೂ ಸಾಕಷ್ಟು ರೈತರು ಇದರ ಸದುಪಯೋಗ ಪಡೆಯುತ್ತಿದ್ದಾರೆ ಎಂದರು.

      ರಾಜ್ಯ ಕೃಷಿ ಅಭಿಯಾನ ಟ್ರಸ್ಟ್‍ನ ನಿರ್ದೇಶಕ, ಕಕ್ಕರಗೊಳ್ಳ ಗ್ರಾಮ ಪಂಚಾಯತಿ ಸದಸ್ಯ ಬಿ.ಸಿ.ವಿಶ್ವನಾಥ ಮಾತನಾಡಿ, ದಾವಣಗೆರೆ ಜಿಲ್ಲೆ ನೀರಾವರಿ, ಕೊಳವೆ ಬಾವಿ ಆಶ್ರಿತ ಹಾಗೂ ಮಳೆಯಾಶ್ರಿತ ಪ್ರದೇಶವಾಗಿದ್ದು, ಸತತವಾಗಿ ಮಳೆ ಕೈಕೊಟ್ಟಿದ್ದರಿಂದ, ಅಂತರ್ಜಲ ಕುಸಿತದಿಂದಾಗಿ ರೈತರ ಬಾಳು ಸಂಕಷ್ಟದಲ್ಲಿದೆ. ಈ ಪರಿಸ್ಥಿತಿಯಲ್ಲಿ ಇಂತಹ ಪ್ರಾತ್ಯಕ್ಷಿಕೆ, ತರಬೇತಿ ಕಾರ್ಯಕ್ರಮ ರೈತರಿಗೆ ಸಹಕಾರಿಯಾಗಲಿವೆ ಎಂದರು. ಟ್ರಸ್ಟ್‍ನ ನಿರ್ದೇಶಕ ದಿದ್ದಿಗೆ ಮಹದೇವಪ್ಪ, ಆರ್.ಈ.ಆನಂದಪ್ಪ, ಎನ್.ವಿ.ಆನಂದ್, ಚನ್ನಗಿರಿ ಕೃಷ್ಣಮೂರ್ತಿ, ಹರಿಹರ ಈಶ್ವರ ಮತ್ತಿತರೆ ರೈತರು ಸಮಗ್ರ ಕೃಷಿಯ ಯೋಜನಾ ವರದಿ ಪ್ರಾತ್ಯಕ್ಷಿಕೆಯಲ್ಲಿ ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link